ದಸರಾ ಗಜಪಡೆ ವೀಕ್ಷಣೆಗೆ ಟಿಕೆಟ್ ; ವಿರೋಧದ ಹಿನ್ನೆಲೆಯಲ್ಲಿ ಸದ್ಯಕ್ಕೆ ಬ್ರೇಕ್

ದಸರಾ ಆನೆಗಳು
ದಸರಾ ಆನೆಗಳು
Published on

ಮೈಸೂರು: ಅರಮನೆ ಅಂಗಳದಲ್ಲಿ ಬೀಡುಬಿಟ್ಟಿರುವ ದಸರಾ ಗಜಪಡೆ ವೀಕ್ಷಣೆಗೆ ಇದೇ ಮೊದಲ ಬಾರಿಗೆ ಪ್ರವೇಶ ಶುಲ್ಕ ನಿಗದಿಪಡಿಸಲು ಅರಣ್ಯ ಇಲಾಖೆ ನಡೆಸಿದ ಚಿಂತನೆಗೆ ತೀವ್ರ ಜನಾಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಸದ್ಯಕ್ಕೆ ಶುಲ್ಕ ವಿಧಿಸುವ ತೀರ್ಮಾನ ಜಾರಿಗೆ ತರದೆ ಇರಲು ಅರಣ್ಯ ಇಲಾಖೆ ನಿರ್ಧರಿಸಿದೆ.

ಇಷ್ಟು ವರ್ಷಗಳ ಕಾಲ ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಜನರು ಅರಮನೆ ಆವರಣಕ್ಕೆ ಆಗಮಿಸುವ ಸಂದರ್ಭ ದಸರಾ ಆನೆಗಳನ್ನು ನೋಡಿ ಹಾಗೂ ಅವುಗಳ ಮುಂದೆ ನಿಂತು ಫೋಟೋ ತೆಗೆಸಿಕೊಳ್ಳುವ ಮೂಲಕ ಸಂಭ್ರಮಿಸುತ್ತಿದ್ದರು. ಈ ಸಂಭ್ರಮಕ್ಕೆ ಶುಲ್ಕ ವಿಧಿಸಲು ಅರಣ್ಯ ಇಲಾಖೆ ಚಿಂತನೆ ನಡೆಸಿತ್ತು.
12 ವರ್ಷ ಮೇಲ್ಪಟ್ಟವರಿಗೆ ತಲಾ 100 ರೂ. ಹಾಗೂ 6 ರಿಂದ 12 ವರ್ಷದ ಮಕ್ಕಳಿಗೆ ತಲಾ 50 ರೂ. ಪ್ರವೇಶ ಶುಲ್ಕ ನಿಗದಿಪಡಿಸ ಲಾಗಿತ್ತು. ಟಿಕೆಟ್ ಪಡೆದವರು 20 ನಿಮಿಷ ಮಾತ್ರ ಆನೆಗಳನ್ನು ನೋಡಬಹುದು. ಆನೆಗಳ ವೀಕ್ಷಣೆ ವೇಳೆ ಸಾರ್ವಜನಿಕರು ಗಜಪಡೆಯೊ ಂದಿಗೆ ಕಿರಿಕಿರಿ, ಚೇಷ್ಟೆ ಅಥವಾ ಅಸಭ್ಯ ವರ್ತನೆ ಮಾಡುವಂತಿಲ್ಲ. ಆನೆಗಳಿಂದ ಕನಿಷ್ಠ 2 ಮೀಟರ್ ಅಂತರ ಕಾಯ್ದುಕೊಳ್ಳುವುದು ಕಡ್ಡಾಯಗೊಳಿಸಲಾಗಿತ್ತು.
ಪ್ರವೇಶ ಶುಲ್ಕ ನಿಗದಿಪಡಿಸಿದರೆ ಟಿಕೆಟ್‌ನಿಂದ ಬಂದ ಹಣವನ್ನು ಮಾವುತರ ಕುಟುಂಬಕ್ಕೆ ಮೀಸಲಿಡಲು ಅರಣ್ಯ ಇಲಾಖೆ ಚಿಂತನೆ ನಡೆಸಿತ್ತು. ಬೆಳಗ್ಗೆ 10ರಿಂದ 12.30 ಹಾಗೂ ಮಧ್ಯಾಹ್ನ 1.3ರಿಂದ 3.30ವರೆಗೆ ಪ್ರವೇಶಕ್ಕೆ ಸಮಯ ನಿಗದಿಸಲು ಉದ್ದೇಶಿಸಲಾಗಿತ್ತು. ಆದರೆ, ಸಾರ್ವಜನಿಕರ ವಿರೋಧದ ಹಿನ್ನೆಲೆಯಲ್ಲಿ ಯೋಜನೆ ಕೈ ಬಿಡಲು ಅರಣ್ಯ ಇಲಾಖೆ ಚಿಂತನೆ ನಡೆಸಿದೆ.
ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಡಾ.ಐ.ಬಿ.ಪ್ರಭುಗೌಡ, ಆನೆಗಳ ವೀಕ್ಷಣೆಗೆ ಇ-ಟಿಕೆಟ್ ನೀಡುವುದು ಕೇವಲ ಚಿಂತನೆಯ ಹಂತದಲ್ಲಿತ್ತು. ಆದರೆ, ಪ್ರಸ್ತುತ ಆನೆಗಳ ವೀಕ್ಷಣೆಗೆ ಟಿಕೆಟ್ ನೀಡುತ್ತಿಲ್ಲ. ಸದ್ಯಕ್ಕೆ ಈ ಯೋಜನೆಯನ್ನು ಜಾರಿಗೊಳಿಸುವ ಉದ್ದೇಶ ಹೊಂದಿಲ್ಲ ಎಂದು ಡಿಸಿಎಫ್ ಡಾ.ಐ.ಬಿ.ಪ್ರಭುಗೌಡ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net