ಟೀಂ ಮೈಸೂರು ಪ್ರಾರಂಭದಲ್ಲಿ ನಗರದ ವಿಶ್ವಮಾನವ ಜೋಡಿ ರಸ್ತೆ ಬದಿಯಲ್ಲಿ (ಕುಕ್ಕರಹಳ್ಳಿ ಕೆರೆ ಸಿಗ್ನಲ್ ಬಳಿಯಿಂದ ಸಾ.ರಾ. ಕನ್ವೆನ್ಷನ್ ಹಾಲ್ವರೆಗೆ) 2013 ರಿಂದ 2018ರವರೆಗೆ ಗಿಡಗಳಿಗೆ ನೀರುಣಿಸುವ ಕಾರ್ಯ ಮಾಡಿದ್ದರು. ಈ ರಸ್ತೆಯಲ್ಲಿ ನೆಟ್ಟಿದ್ದ ಗಿಡಗಳು ಇಂದು ಹೆಮ್ಮರವಾಗಿ ಬೆಳೆದಿದೆ. 2019 ರಿಂದ 2021ರವರೆಗೆ ಕಲಾಮಂದಿರದಿಂದ ಕುಕ್ಕರಹಳ್ಳಿ ಕೆರೆ ಕಡೆಗೆ ಸಾಗುವ ಮಾರ್ಗದಲ್ಲಿ ಹಾಗೂ ಜಾಕಿ ಕ್ವಾಟರ್ಸ್, ಕೃಷ್ಣರಾಜ ಬುಲೇವಾರ್ಡ್ ರಸ್ತೆ ಹಾಗೂ ಇಟ್ಟಿಗೆಗೂಡಿನಲ್ಲಿ ನೆಟ್ಟಿದ್ದ ಗಿಡಗಳಿಗೆ ನೀರುಣಿಸಿದ್ದರು. 2022 ರ ನಂತರ ವಿಜಯನಗರ 4ನೇ ಹಂತದಲ್ಲಿ 135 ಗಿಡಗಳು, ಶೇಷಾದ್ರಿ ಅಯ್ಯರ್ ರಸ್ತೆಯಲ್ಲಿ 40 ಗಿಡಗಳು, ರಾಮವಿಲಾಸ ರಸ್ತೆಯಲ್ಲಿ 20 ಗಿಡಗಳು, ಪಿಕೆಟಿಬಿ ಆಸ್ಪತ್ರೆ ಎದುರು 25 ಗಿಡಗಳು, ಮೇಟಗಳ್ಳಿ ಮುಖ್ಯ ರಸ್ತೆಯಲ್ಲಿ 20 ಗಿಡಗಳು, ಬೃಂದಾವನ ಬಡಾವಣೆಯಲ್ಲಿ 45 ಗಿಡಗಳನ್ನು ನೆಟ್ಟು ಗಿಡಗಳಿಗೆ ನೀರುಣಿಸುತ್ತಿದ್ದಾರೆ. ಟೀಂ ಮೈಸೂರು ತಂಡದವರ ಪರಿಶ್ರಮದ ಫಲವಾಗಿ ನಗರದಲ್ಲಿ ನೂರಾರು ಮರಗಳು ಬೆಳೆದು ನಿಂತಿದ್ದು, ಸಾಕಷ್ಟು ಜನರಿಗೆ ಶುದ್ಧವಾದ ಗಾಳಿ, ನೆರಳನ್ನು ನೀಡುತ್ತಿದೆ.