ಪುಂಡರ ಅಡ್ಡೆಯಾದ ಶಿಕ್ಷಕರ ಕ್ವಾರ್ಟರ್ಸ್

ರಾಮನಾಥಪುರ ಮುಖ್ಯರಸ್ತೆಯ ಪ್ರಥಮ ದರ್ಜೆ ಕಾಲೇಜು ಪಕ್ಕದಲ್ಲಿರುವ ಶಿಕ್ಷಣ ಇಲಾಖೆಯ ಶಿಕ್ಷಕರ ವಸತಿ ನಿಲಯ.
ರಾಮನಾಥಪುರ ಮುಖ್ಯರಸ್ತೆಯ ಪ್ರಥಮ ದರ್ಜೆ ಕಾಲೇಜು ಪಕ್ಕದಲ್ಲಿರುವ ಶಿಕ್ಷಣ ಇಲಾಖೆಯ ಶಿಕ್ಷಕರ ವಸತಿ ನಿಲಯ.
Published on

ಪ್ರಮುಖ ಮುಖ್ಯಾಂಶಗಳು

  • ಪಾಳುಬಿದ್ದ ಶಿಕ್ಷಕರ ವಸತಿ ಗೃಹಗಳು
  • ಕಣ್ಮುಚ್ಚಿ ಕುಳಿತ ಶಿಕ್ಷಣ ಇಲಾಖೆ
ಸಾಲಿಗ್ರಾಮ : ಕೋಟ್ಯಂತರ ರೂ. ಖರ್ಚು ಮಾಡಿ ಸರ್ಕಾರ ಶಿಕ್ಷಕರಿಗೆ ಅನುಕೂಲ ಮಾಡಿಕೊಡಲು ರಾಜೀವ್‌ಗಾಂಧಿ ವಸತಿ ನಿಗಮದಿಂದ ವಸತಿ ಗೃಹಗಳನ್ನು ನಿರ್ಮಾಣ ಮಾಡಿಕೊಟ್ಟಿದೆ. ಆದರೆ ಅದನ್ನು ಬಳಕೆಗೆ ಬಾರದೆ ಪಾಳು ಬಿದ್ದಿದ್ದು ಅನೈತಿಕ ಚಟುವಟಿಕೆ ತಾಣವಾಗಿ ಮಾರ್ಪಟ್ಟಿದೆ.

ಪಟ್ಟಣದ ರಾಮನಾಥಪುರ ಮುಖ್ಯರಸ್ತೆಯ ಪ್ರಥಮ ದರ್ಜೆ ಕಾಲೇಜು ಪಕ್ಕದಲ್ಲಿರುವ ಶಿಕ್ಷಣ ಇಲಾಖೆಯ ಶಿಕ್ಷಕರ ವಸತಿ ನಿಲಯ ನಿರ್ಮಾಣವಾಗಿ ಸುಮಾರು 12 ವರ್ಷಗಳಾಗಿದ್ದು, ಶಿಕ್ಷಕರ ಅನುಕೂಲಕ್ಕೆ ಬರದೆ ಪಾಳು ಬಿದ್ದಿರುವ ಎಂಟು ಕೊಠಡಿಗಳಲ್ಲಿ ಪುಂಡ ಪೋಕರಿಗಳಿಂದ ಹಗಲು, ರಾತ್ರಿ ಅನೈತಿಕ ಚಟುವಟಿಕೆ ನಡೆಯುತ್ತಿದೆ. ವಿದ್ಯಾರ್ಥಿಗಳು ಸಂಜೆಯಾಗುತ್ತಿದ್ದಂತೆ ಧೂಮಪಾನ ಮತ್ತು ಮದ್ಯಪಾನಕ್ಕೆ ಈ ಕೊಠಡಿಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಪ್ರೌಢಶಾಲೆ ವಿದ್ಯಾರ್ಥಿಗಳು ಮೊಬೈಲ್‌ನಲ್ಲಿ ವಾಟ್ಸ್‌ಆ್ಯಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಯೂಟ್ಯೂಬ್, ಅಶ್ಲೀಲ ಚಿತ್ರಗಳನ್ನು ನೋಡಲು ಈ ಜಾಗದಲ್ಲಿ ಬಂದು ಠಿಕಾಣಿ ಹೂಡುತ್ತಿದ್ದಾರೆ.
2022ನೇ ಸಾಲಿನಲ್ಲಿ ಮಾಜಿ ಸಚಿವ ಸಾ.ರಾ.ಮಹೇಶ್ ಉದ್ಘಾಟನೆ ಮಾಡಿದ್ದರು. ಆದರೆ ಅಂದಿನಿಂದ ಇಂದಿನವರೆಗೆ ಕಟ್ಟಡ ಬಳಕೆಗೆ ಬಂದಿಲ್ಲ, ನಿರ್ವಹಣೆಯೂ ಇಲ್ಲ. ಹಾಗಾಗಿ ಕಿಟಕಿಗಳು ಒಡೆದು ಹೋಗಿವೆ. ಶೌಚಗೃಹಗಳು ಬಳಕೆಗೆ ಬರದಂತಹ ಸ್ಥಿತಿಯಲ್ಲಿ ಗಬ್ಬು ನಾರುತ್ತಿವೆ. ವಿದ್ಯುತ್ ಸಂಪರ್ಕ ಇಲ್ಲದೆ ಪ್ರತಿ ಕೊಠಡಿಯಲ್ಲಿ ವೈರ್‌ಗಳು ಸುಟ್ಟುಹೋಗಿವೆ. ಮೆಟ್ಟಿಲುಗಳಲ್ಲಿ ಕುಡಿದ ಬಾಟಲಿಗಳು, ಬೀಡಿ, ಸಿಗರೇಟ್ ಚೂರುಗಳು, ಗುಟ್ಕಾ ಪ್ಯಾಕೆಟ್‌ಗಳು ರಾಶಿಗಟ್ಟಲೇ ಬಿದ್ದಿವೆ. ಈ ಬಗ್ಗೆ ಶಿಕ್ಷಕರಾಗಲಿ ಅಥವಾ ಸಾರ್ವಜನಿಕರಾಗಲಿ ಪ್ರಶ್ನೆ ಮಾಡುತ್ತಿಲ್ಲ. ಇದು ವಿದ್ಯಾರ್ಥಿಗಳಿಗೆ ಮತ್ತಷ್ಟು ಅನುಕೂಲವಾಗಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ದುಶ್ಚಟಗಳು ಹೆಚ್ಚಾಗಿದ್ದು ಈ ವಸತಿಗೃಹಗಳು ಇವರಿಗೆ ವರದಾನವಾದಂತಾಗಿದೆ.
ಈ ಪಾಳು ಬಿದ್ದಿರುವ ಕಟ್ಟಡದ ಸುತ್ತ ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಪಿಯು ಕಾಲೇಜು ಮತ್ತು ಪದವಿ ಕಾಲೇಜು ಹಾಗೂ ಸಾರಾ ವಿದ್ಯಾ ಸಂಸ್ಥೆ, ಬಿಸಿಎಂ ಬಾಲಕರ ಹಾಸ್ಟೆಲ್‌ಗಳು ಸೇರಿದಂತೆ ಸಾರ್ವಜನಿಕರು ನಿತ್ಯ ಓಡಾಡುವ ಸ್ಥಳವಾದರೂ ವಿದ್ಯಾರ್ಥಿಗಳ ರಕ್ಷಣೆಗೆ ಮಾತ್ರ ಯಾರೂ ಜವಾಬ್ದಾರಿ ವಹಿಸುತ್ತಿಲ್ಲ.
ರಾಜೀವ್ ಗಾಂಧಿ ನಿಗಮದಿಂದ ಮಂಜೂರು: 2007-08ನೇ ಸಾಲಿನಲ್ಲಿ ಶಿಕ್ಷಣ ಇಲಾಖೆಗೆ ರಾಜೀವ್ ಗಾಂಧಿ ವಸತಿ ನಿಗಮದಿಂದ ವಸತಿ ಗೃಹಗಳು ಮಂಜೂರಾಗಿದ್ದವು. 2012ರಲ್ಲಿ ಕಾಮಗಾರಿ ಕೈಗೆತ್ತಿಕೊಂಡು 2022ರಲ್ಲಿ ವಸತಿಗೃಹಗಳನ್ನು ಸಂಬಂಧಪಟ್ಟ ಶಿಕ್ಷಣ ಇಲಾಖೆಗೆ ಹಸ್ತಾಂತರ ಮಾಡಲಾಗಿತ್ತು. ಕೇವಲ ಮೂರೇ ವರ್ಷಕ್ಕೆ ವಸತಿಗೃಹಗಳು ಶಿಥಿಲಗೊಂಡಂತೆ ಕಾಣುತ್ತಿವೆ. ಇವುಗಳ ನಿರ್ವಹಣೆ ಮಾಡುವಲ್ಲಿ ಅಧಿಕಾರಿಗಳು ಕೂಡ ನಿರ್ಲಕ್ಷ್ಯ ತೋರಿದ್ದಾರೆ. ವಸತಿ ಗೃಹಗಳ ಸುತ್ತಮುತ್ತ ಗಿಡಗಂಟಿಗಳು ಬೆಳೆದು ನಿಂತಿರುವುದರಿಂದ ಹಾವು, ಚೇಳುಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದೆ. ಕಿಟಕಿ ಗ್ಲಾಸ್‌ಗಳನ್ನು ದುಷ್ಕರ್ಮಿಗಳು ಒಡೆದಿರುವುದರಿಂದ ಗಾಜುಗಳು ಪುಡಿಪುಡಿಯಾಗಿವೆ.
ಸರ್ಕಾರಿ ಕಚೇರಿಗಳಿಗಾಗಿ ಪರದಾಟ
ಸಾಲಿಗ್ರಾಮ ಪಟ್ಟಣದಲ್ಲಿ ಸರ್ಕಾರಿ ಕಟ್ಟಡಗಳನ್ನು ಕಟ್ಟಲು ಸ್ಥಳಾವಕಾಶದ ಕೊರತೆ ಇದೆ. ಆದರೆ ಇರುವ ಸರ್ಕಾರಿ ಕಟ್ಟಡಗಳೂ ಪಾಳು ಬಿದ್ದಿವೆ. ಇವುಗಳನ್ನು ಉಳಿಸಿಕೊಳ್ಳುವ ಅಗತ್ಯವಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಿ ಉಪಯೋಗಕ್ಕೆ ಬರುವ ರೀತಿಯಲ್ಲಿ ಕ್ರಮ ವಹಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಸಾಲಿಗ್ರಾಮ ತಾಲೂಕು ಕೇಂದ್ರವಾಗಿರುವುದರಿಂದ ಅನೇಕ ಸರ್ಕಾರಿ ಇಲಾಖೆಗಳು ಆಗಬೇಕಿದೆ. ಕೇಳಿದರೆ, ಕಚೇರಿಗೆ ಸ್ಥಳಾವಕಾಶ ಇಲ್ಲದ ಕಾರಣ ಸರ್ಕಾರಿ ಜಾಗ ನೋಡಿ ನಂತರ ಹಂತ ಹಂತವಾಗಿ ಎಲ್ಲ ಇಲಾಖೆಗಳನ್ನು ತರುತ್ತೇವೆ ಎಂದು ರಾಜಕಾರಣಿಗಳು ಭರವಸೆ ನೀಡುತ್ತಾರೆ. ಇರುವ ಸರ್ಕಾರಿ ಕಟ್ಟಡಗಳನ್ನು ಬಳಸಿಕೊಂಡು ಸಾರ್ವಜನಿಕರಿಗೆ ಅನುಕೂಲವಾಗುವಂತಹ ಇಲಾಖೆಗಳನ್ನು ಏಕೆ ಮಾಡುತ್ತಿಲ್ಲ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಈಗಾಗಲೇ ತಾಲೂಕು ಪಂಚಾಯಿತಿ ಸೇರಿದಂತೆ ಹಲವು ಕಟ್ಟಡಗಳಿಗೆ ಬಾಡಿಗೆ ಕೊಡುತ್ತಿದ್ದಾರೆ. ಸರ್ಕಾರಿ ಕಟ್ಟಡಗಳೇ ಪಾಳು ಬಿದ್ದಿರುವುದರಿಂದ ಅವುಗಳನ್ನು ಬಳಸಿಕೊಂಡು ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂಬುದು ಸಾರ್ವಜನಿಕರ ಆಗ್ರಹ.
ಶವಸಂಸ್ಕಾರ ವಾಹನದ ಮನೆ
ಕಾಂಪೌಂಡ್ ಇಲ್ಲದ ಕಾರಣ ಪಾಳು ಬಿದ್ದಿರುವ ಈ ಕಟ್ಟಡದಲ್ಲಿ ಶವ ಸಾಗಿಸುವ ಬಾಡಿಗೆ ವಾಹನ 6 ತಿಂಗಳಿಂದ ಬೀಡು ಬಿಟ್ಟಿದೆ. ಹೊಸ ಕಟ್ಟಡಕ್ಕೆ ಶವ ಸಾಗಿಸುವ ವಾಹನ ಗೃಹಪ್ರವೇಶ ಮಾಡಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಪಾಲಕರು ಶಿಕ್ಷಣ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 24*7 ಶವ ಸಾಗಿಸುವ ಬಾಡಿಗೆ ವಾಹನದ ಮಾಲೀಕ ರಾಜಾರೋಷವಾಗಿ ನಿಲ್ಲಿಸುತ್ತಿದ್ದಾರೆ. ಇದು ಶಿಕ್ಷಣ ಇಲಾಖೆ ಅಧಿಕಾರಿಗಳ ಗಮನಕ್ಕೆ ಮತ್ತು ಪಕ್ಕದಲ್ಲಿರುವ ಸರ್ಕಾರಿ ಶಾಲೆಗಳ ಮುಖ್ಯ ಶಿಕ್ಷಕರ ಗಮನಕ್ಕೆ ಬಂದರೂ ಯಾವುದೇ ಪ್ರಯೋಜನವಾಗಿಲ್ಲ.

ಕಟ್ಟಡ ಪಾಳು ಬಿದ್ದಿರುವುದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಾಕಷ್ಟು ಬಾರಿ ತಿಳಿಸಿದ್ದೇನೆ. ಈ ಕಟ್ಟಡ ಈ ಸ್ಥಿತಿಯಲ್ಲಿರುವುದು ಇಲ್ಲಿಯ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಶಿಕ್ಷಣ ಇಲಾಖೆ ಅಧಿಕಾರಿಯೊಂದಿಗೆ ಮಾತನಾಡುತ್ತೇನೆ. ವಸತಿಗೃಹಗಳು ಶೀಘ್ರದಲ್ಲೇ ಬಳಕೆ ಆಗುವ ರೀತಿಯಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕ್ರಮ ವಹಿಸಬೇಕು. ಈ ಬಗ್ಗೆ ಶಾಸಕರ ಗಮನಕ್ಕೂ ತರಲಾಗುವುದು.

ಗ್ರಾಮ ಪಂಚಾಯಿತಿ ಅಧಿಕಾರಿಗಳೊಂದಿಗೆ ಚರ್ಚಿಸಿ, ಗಿಡಗಂಟಿಗಳನ್ನು ಸ್ವಚ್ಛಗೊಳಿಸಿ ಅವಶ್ಯಕತೆ ಇರುವ ಶಿಕ್ಷಕ-ಶಿಕ್ಷಕಿಯರಿಗೆ ವಸತಿಗೃಹಗಳನ್ನು ನೀಡಲಾಗುವುದು. ಇದರ ಬಗ್ಗೆ ಶಿಕ್ಷಕ-ಶಿಕ್ಷಕಿಯರೊಂದಿಗೆ ಮಾತನಾಡಿ ವ್ಯಾಪ್ತಿಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ. ವಸತಿಗೃಹಗಳ ಉಪಯೋಗಕ್ಕೆ ಕ್ರಮ ವಹಿಸಲಾಗುವುದು.

ಸ್ವಚ್ಛತೆ ಇಲ್ಲ, ಕಾಂಪೌಂಡ್ ಹಾಗೂ ಸುರಕ್ಷತೆ ಇಲ್ಲ ಎಂದು ಯಾವ ಶಿಕ್ಷಕರೂ ವಸತಿಗೃಹ ಪಡೆದುಕೊಳ್ಳುತ್ತಿಲ್ಲ. ಹಾಗಂತಾ ಬೇರೆ ಇಲಾಖೆ ಪ್ರಾರಂಭಿಸಬೇಡಿ ಎಂದು ಯಾರೂ ಹೇಳುತ್ತಿಲ್ಲ. ತುರ್ತಾಗಿ ಈ ಕಟ್ಟಡದಲ್ಲಿ ಸರ್ವೇ ಕಚೇರಿಗೆ ಬಳಸಿ. ಸರ್ವೇ ಕಚೇರಿಗೆ 35 ಕಿ.ಮೀ. ದೂರವಿರುವ ಕೆ.ಆರ್.ನಗರಕ್ಕೆ ಹೋಗಬೇಕಿದ್ದು ರೈತರು ಪರದಾಡುತ್ತಿದ್ದಾರೆ. ಇದನ್ನು ತಪ್ಪಿಸಿ ರೈತರಿಗೆ ಅನುಕೂಲ ಮಾಡಿಕೊಡುವುದರ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಶಾಸಕರು ಗಮನ ಹರಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net