ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣ ಉದ್ಘಾಟನೆಯಲ್ಲಿ ಪ್ರೊ.ಸಿ.ಜಿ.ವೆಂಕಟೇಶ ಮೂರ್ತಿ, ಎಂ.ಕೆ.ಸವಿತಾ, ಪ್ರೊ.ಎನ್.ನಾಗರಾಜ, ಎಚ್.ಪಿ.ಜ್ಯೋತಿ, ಕೆ.ಎನ್.ಅಮೃತೇಶ್ ಇದ್ದರು.
ಮೈಸೂರು: ಶೈಕ್ಷಣಿಕ ಪ್ರಕ್ರಿಯೆ ಚೆನ್ನಾಗಿ ನಡೆಯಬೇಕಾದರೆ ಶಿಕ್ಷಕರ ಪಾತ್ರ ಮುಖ್ಯವಾಗಿರುತ್ತದೆ ಎಂದು ಭಾರತೀಯ ಭಾಷಾ ಸಂಸ್ಥಾನ ಕೇಂದ್ರದ ನಿವೃತ್ತ ನಿರ್ದೇಶಕ ಪ್ರೊ.ಸಿ.ಜಿ.ವೆಂಕಟೇಶ ಮೂರ್ತಿ ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ಮಾಳವೀಯ ಮಿಷನ್ ಶಿಕ್ಷಕರ ತರಬೇತಿ ಕಾರ್ಯಕ್ರಮ ಹಾಗೂ ಐಕ್ಯುಎಸ್‌ಸಿ ಸಹಯೋಗದೊಂದಿಗೆ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಆಯೋಜಿಸಿದ್ದ ಎರಡು ದಿನಗಳ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡಿದರು.
ದಿನ ಕಳೆದಂತೆ ಶಿಕ್ಷಣವು ಆಧುನಿಕತೆಯತ್ತ ಮುಖಮಾಡಿದೆ. ತಂತ್ರಜ್ಞಾನ ಎಷ್ಟೇ ಮುಂದುವರಿದರೂ ವಿದ್ಯಾರ್ಥಿಗಳ ಜೀವನ ರೂಪಿಸುವಲ್ಲಿ ಅಧ್ಯಾಪಕರು ಪ್ರಮುಖರಾಗಿರುತ್ತಾರೆ. ಆದ್ದರಿಂದ ಅಧ್ಯಾಪಕರ ಗೌರವಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ಎಲ್ಲರ ಕರ್ತವ್ಯ ಎಂದು ಹೇಳಿದರು.
ಒಂದು ವಿಶ್ವವಿದ್ಯಾನಿಲಯದಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶವು ಶೈಕ್ಷಣಿಕ ಮತ್ತು ಆಡಳಿತಾತ್ಮಕ ಚಟುವಟಿಕೆಗಳಲ್ಲಿ ಗುಣಮಟ್ಟವನ್ನು ಹೆಚ್ಚಿಸಲು ಶ್ರಮಿಸುತ್ತದೆ ಎಂದರು.
ಮೈಸೂರು ವಿಶ್ವ ವಿದ್ಯಾಲಯದ ಕುಲಸಚಿವೆ ಎಂ.ಕೆ.ಸವಿತಾ ಮಾತನಾಡಿ, ವಿಶ್ವವಿದ್ಯಾಲಯಕ್ಕೆ ಅವಶ್ಯ ಇರುವ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಪ್ರತಿ ವಿಭಾಗದ ಮುಖ್ಯಸ್ಥರು ವಿಭಾಗಕ್ಕೆ ಹೆಚ್ಚಿನ ಗಮನವಹಿಸಿ ವಿದ್ಯಾರ್ಥಿಗಳಿಗೆ ಅವಶ್ಯಕತೆ ಇರುವ ಕಾರ್ಯಕ್ರಮ ಆಯೋಜಿಸಬೇಕು ಎಂದರು.
ವಿಶ್ವವಿದ್ಯಾಲಯದ ಕೆಲವು ವಿಭಾಗಗಳಿಗೆ ಹೋದರೆ ಮುಖ್ಯಸ್ಥರೇ ಇರುವುದಿಲ್ಲ, ಶಿಕ್ಷಕರು ಸರಿಯಾದ ಸಮಯಕ್ಕೆ ಬರುವುದಿಲ್ಲ, ವಿದ್ಯಾರ್ಥಿಗಳಿಗೆ ಹಾಜರಾತಿ ಹಾಕುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
2026ರಲ್ಲಿ ಮೈಸೂರು ವಿಶ್ವವಿದ್ಯಾಲಯಕ್ಕೆ ನ್ಯಾಕ್ ತಂಡ ಭೇಟಿ ನೀಡಲಿದ್ದು. ವಿಶ್ವವಿದ್ಯಾಲಯಕ್ಕೆ ಉತ್ತಮವಾದ ರ‌್ಯಾಂಕ್ ಬರುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ಕೋರಿದರು.
ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಎನ್. ನಾಗರಾಜ, ಕೇಂದ್ರದ ನಿರ್ದೇಶಕಿ ಎಚ್.ಪಿ.ಜ್ಯೋತಿ, ಸಂಚಾಲಕ ಕೆ.ಎನ್.ಅಮೃತೇಶ್ ಇತರರು ಇದ್ದರು.