ಮಕ್ಕಳಿಗೆ ಮಾನವೀಯ ಮೌಲ್ಯ ಕಲಿಸಿ

ಕುರಹಟ್ಟಿ ಗ್ರಾಮದ ಶ್ರೀ ಗುರುಮಲ್ಲೇಶ್ವರ ಭಿಕ್ಷದ ಮಠದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸೋಮಹಳ್ಳಿ ಶಿಲಾಮಠದ  ಸಿದ್ದಮಲ್ಲ ಸ್ವಾಮೀಜಿ ಅವರನ್ನು ಸನ್ಮಾನಿಸಲಾಯಿತು. ಶ್ರೀ ಮಾದಪ್ಪ ಸ್ವಾಮೀಜಿ, ಶ್ರೀ ಇಮ್ಮಡಿ ಉದ್ಯಾನ ಸ್ವಾಮೀಜಿ, ಶ್ರೀ ಷಡಕ್ಷರಿ  ಸ್ವಾಮೀಜಿ,  ಷಡಕ್ಷರಿ ದೇಶಿಕೇಂದ್ರ ಸ್ವಾಮೀಜಿ ಇತರರಿದ್ದರು.
ಕುರಹಟ್ಟಿ ಗ್ರಾಮದ ಶ್ರೀ ಗುರುಮಲ್ಲೇಶ್ವರ ಭಿಕ್ಷದ ಮಠದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸೋಮಹಳ್ಳಿ ಶಿಲಾಮಠದ ಸಿದ್ದಮಲ್ಲ ಸ್ವಾಮೀಜಿ ಅವರನ್ನು ಸನ್ಮಾನಿಸಲಾಯಿತು. ಶ್ರೀ ಮಾದಪ್ಪ ಸ್ವಾಮೀಜಿ, ಶ್ರೀ ಇಮ್ಮಡಿ ಉದ್ಯಾನ ಸ್ವಾಮೀಜಿ, ಶ್ರೀ ಷಡಕ್ಷರಿ ಸ್ವಾಮೀಜಿ, ಷಡಕ್ಷರಿ ದೇಶಿಕೇಂದ್ರ ಸ್ವಾಮೀಜಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಗುರು ಮಲ್ಲೇಶ್ವರ ಮಠ
  • ಸೋಮಹಳ್ಳಿಯ ಶ್ರೀ ವೀರಸಿಂಹಾಸನ ಶಿಲಾಮಠದ ಶ್ರೀ ಸಿದ್ದಮಲ್ಲಪ್ಪ ಸ್ವಾಮೀಜಿ
ನಂಜನಗೂಡು: ಇಪ್ಪತೊಂದನೇ ಶತಮಾನದಲ್ಲಿ ಕಾಯಕ ಮತ್ತು ದಾಸೋಹಕ್ಕೆ ಹೆಚ್ಚಿನ ಮಹತ್ವ ನೀಡಿದ ಏಕೈಕ ಮಠ ಶ್ರೀ ಗುರು ಮಲ್ಲೇಶ್ವರ ಮಠ ಎಂದು ಸೋಮಹಳ್ಳಿಯ ಶ್ರೀ ವೀರಸಿಂಹಾಸನ ಶಿಲಾಮಠದ ಶ್ರೀ ಸಿದ್ದಮಲ್ಲಪ್ಪ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಕುರಹಟ್ಟಿ ಗ್ರಾಮದ ಶ್ರೀ ಗುರು ಮಲ್ಲೇಶ್ವರ ಭಿಕ್ಷದ ಮಠದ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಶ್ರೀ ಗುರುಭಿಕ್ಷದ ರಾಜಪ್ಪ ಶ್ರೀಗಳ 94ನೇ ವರ್ಷದ ಗಣರಾಜ್ಯ ಮಹೋತ್ಸವ, ಗುರುವಂದನೆ ಹಾಗೂ ಶಿವಾನುಭವ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿ ಆಶೀರ್ವಚನ ನೀಡಿದರು. ಇಂತಹ ಧಾರ್ಮಿಕ ಕಾರ್ಯಕ್ರಮಗಳು ಆಸ್ತಿಕ ಭಾವನೆಯನ್ನು ಪವಿತ್ರಗೊಳಿಸುತ್ತದೆ. ರಾಜಪ್ಪ ಶ್ರೀಗಳು ಮಹಾತ್ಮರು. ಯಾವುದಕ್ಕೂ ಆಸೆ ಪಟ್ಟವರಲ್ಲ. ಗುರುಗಳು ಹೇಳಿದಂತೆ ನಡೆದುಕೊಂಡು ಬಂದವರು. ಮಳೆ, ಬೆಳೆ ಸೇರಿದಂತೆ ಎಲ್ಲದರಲ್ಲೂ ಶಿವನನ್ನು ಕಂಡವರು. ಇಂತಹ ಮಹಾತ್ಮರನ್ನು ನೆನೆಯುವುದೇ ಒಂದು ಪುಣ್ಯದ ಕೆಲಸ. ಇದರಿಂದ ಮೋಕ್ಷ ಉಂಟಾಗುತ್ತದೆ ಎಂದರು.
ಸಾಹಿತಿ ಮು.ನಾ.ರಮೇಶ್ ಮಾತನಾಡಿ, ಇಡೀ ಜೀವನಕ್ಕೆ ಒಂದು ಮೌಲ್ಯವಿದೆ. ಸಾವಿರಾರು ಕೋಟಿ ಜೀವರಾಶಿಗಳಲ್ಲಿ ಬೆಲೆ ಕಟ್ಟಲಾದಷ್ಟು ಮನುಷ್ಯನಿಗೆ ಬುದ್ಧಿಶಕ್ತಿ ಇದೆ. ಮನುಷ್ಯ ಸಂತೃಪ್ತಿಯಾಗಿ ಬದುಕು ನಡೆಸುತ್ತಿಲ್ಲ. ಮನುಷ್ಯನಿಗೆ ಸಾಯುವ ತನಕ ಹಾಗೂ ಸತ್ತ ನಂತರ ಭಾವನೆಗಳಿರುತ್ತವೆ. ತಾಳ್ಮೆ, ಸಹಾನುಭೂತಿ ಹಾಗೂ ಧೈರ್ಯ ಇರಬೇಕು. ಪ್ರಾಮಾಣಿಕತೆ, ಪರೋಪಕಾರ ನಿಸ್ವಾರ್ಥತೆ, ಸೌಜನ್ಯಗಳನ್ನು ಕಲಿಯಬೇಕು. ಇಂದಿನ ಮಕ್ಕಳಿಗೆ ನಾವು ಮಾನವೀಯ ಮೌಲ್ಯಗಳನ್ನು ಕಲಿಸಿಕೊಡಬೇಕು. ಕೆಟ್ಟ ಕೆಟ್ಟ ಪದಗಳನ್ನು ಚಿಕ್ಕಂದಿನಿಂದಲೇ ಹೇಳಿಕೊಡುವುದನ್ನು ನಿಲ್ಲಿಸಬೇಕು ಎಂದರು.
ಮೂಡಗೂರು ವಿರಕ್ತಮಠದ ಶ್ರೀ ಇಮ್ಮಡಿ ಉದ್ಯಾನ ಸ್ವಾಮೀಜಿ ಮಾತನಾಡಿ, ಗುರುಗಳು ಸದಾ ಮಾರ್ಗದರ್ಶಕರಾಗಿರಬೇಕು. ಜತೆಗೆ ಇಷ್ಟಲಿಂಗವನ್ನು ಪೂಜೆ ಮಾಡಿದರೆ ಮಾತ್ರ ಪರಿಪೂರ್ಣ. ದೂರದಲ್ಲಿ ಇರುವ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಬೇಕು ಎಂದಿಲ್ಲ. ಪೂಜೆಗೆ ಮಂತ್ರ ಮುಖ್ಯ ಅಲ್ಲ. ಭಕ್ತಿ ಮುಖ್ಯ. ಭಕ್ತರಿಗೆ ಜ್ಞಾನದ ಪ್ರಸಾದ ನೀಡುವ ಗುರುಗಳನ್ನು ನೆನೆಯಬೇಕು ಎಂದರು.
ಮುಡುಕನಪುರ ಮಠದ ಶ್ರೀ ಷಡಕ್ಷರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಧಾರ್ಮಿಕ ಸಮಾರಂಭ ಮನಸ್ಸಿನ ಕೊಳೆಯನ್ನು ಹೋಗಲಾಡಿಸುತ್ತದೆ. 12ನೇ ಶತಮಾನದಲ್ಲಿ ಬಸವಣ್ಣನವರು ಕಾಯಕದ ಬಗ್ಗೆ ತಿಳಿಸಿದ್ದರು. 21ನೇ ಶತಮಾನದಲ್ಲಿ ಭಿಕ್ಷದ ರಾಜಪ್ಪ ಶ್ರೀಗಳು ದಾಸೋಹದ ಬಗ್ಗೆ ಪ್ರಸಿದ್ಧಿ ಪಡೆದಿದ್ದರು ಎಂದರು.
ದಡದಹಳ್ಳಿ ಪಟ್ಟದ ಮಠದ ಶ್ರೀ ಷಡಕ್ಷರಿ ಸ್ವಾಮೀಜಿ ಮಾತನಾಡಿ, ಪ್ರಸಾದಕ್ಕೆ ಮಹತ್ವ ಕೊಟ್ಟಿದ್ದು ಗುರುಮಲ್ಲೇಶ್ವರ ಮಠ. ರಾಜಪ್ಪ ಸ್ವಾಮೀಜಿ ದಾಸೋಹದ ಬಗ್ಗೆ ಬಹಳ ಪ್ರಸಿದ್ಧಿ ಪಡೆದಿದ್ದರು. ಇವರ ಸ್ಮರಣೆಯನ್ನು ಗ್ರಾಮದ ಮಠದಲ್ಲಿ ಮಾಡಲಾಗುತ್ತಿದೆ. ಯಾವುದೇ ಪ್ರಾಣಿ ಸತ್ತ ನಂತರ ಬೆಲೆ ಇರುತ್ತದೆ. ಆದರೆ ಮನುಷ್ಯನಿಗೆ ಸತ್ತ ನಂತರ ಮನೆಯಿಂದ ಹೊರಗೆ ಹಾಕುತ್ತಾರೆ. ಜೀವನದಲ್ಲಿ ಒಳ್ಳೆಯ ಸಿದ್ಧಾಂತ ಹಾಗೂ ಮೌಲ್ಯಗಳನ್ನು ಅಳವಡಿಸಿಕೊಂಡು ಹೋದರೆ ಜಗತ್ತು ಇರುವವರೆಗೂ ನೆನೆಯುತ್ತದೆ ಎಂಬುದಕ್ಕೆ ಭಿಕ್ಷದ ರಾಜಪ್ಪ ಶ್ರೀಗಳು ಉದಾಹರಣೆ ಎಂದರು.
ಕಾರ್ಯಕ್ರಮದಲ್ಲಿ ದೇವನೂರು ತ್ರಿವಿಧ ದಾಸೋಹಿ ಮಠಾಧ್ಯಕ್ಷ ಶ್ರೀ ಮಹಾಂತ ಸ್ವಾಮೀಜಿ, ಕುರಹಟ್ಟಿ ಮಠದ ಶ್ರೀ ಮಾದಪ್ಪ ಸ್ವಾಮೀಜಿ, ಮಾದಾಪಟ್ಟಣ ಮಠದ ಶ್ರೀ ತೋಂಟಾದಾರ್ಯ ಸ್ವಾಮೀಜಿ, ಹರವೆ ಮಠದ ಶ್ರೀ ಸರ್ಪಭೂಷಣ ಸ್ವಾಮೀಜಿ, ಕುರುಬರ ಹುಂಡಿ ಮಠದ ಶ್ರೀ ಇಮ್ಮಡಿ ಮಹಾಂತ ಸ್ವಾಮೀಜಿ, ಹಲ್ಲರೆ ಮಠದ ಶ್ರೀ ಬಸವಣ್ಣ ಸ್ವಾಮೀಜಿ, ಮುಖ್ಯ ಭಾಷಣಕಾರ ಪ್ರಶಾಂತ್ ದೇವನೂರು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net