ತನ್ವೀರ್ ಗೆ ತಪ್ಪಿದ ಸಚಿವಗಿರಿ: ಆತ್ಮಹತ್ಯೆಗೆ ಯತ್ನಿಸಿದ ಅಭಿಮಾನಿ

ಪ್ರತಿಭಟನೆ
ಪ್ರತಿಭಟನೆ
Published on

ಪ್ರಮುಖ ಮುಖ್ಯಾಂಶಗಳು

  • ಪ್ರಾಣಾಪಾಯದಿಂದ ಪಾರು
  • ಶಾಸಕ ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನ ತಪ್ಪಿದ್ದಕ್ಕೆ ಮನನೊಂದ ಅಭಿಮಾನಿ
  • ಸಾಲು ಸಾಲು ಪ್ರತಿಭಟನೆ

ಮೈಸೂರು: ಶಾಸಕ ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನ ತಪ್ಪಿದ್ದಕ್ಕೆ ಮನನೊಂದ ಅಭಿಮಾನಿಯೊಬ್ಬ ವಿಷ ಸೇವಿಸಿ  ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ತನ್ವೀರ್ ಸೇಠ್ ಅವರ ಬೆಂಬಲಿಗ ಹಾಗೂ ಅಭಿಮಾನಿಯಾಗಿರುವ ತಬ್ರೇಜ್ ಎಂಬಾತ ಆತ್ಮಹತ್ಯೆಗೆ ಯತ್ನಿಸಿದವರು. ನರಸಿಂಹರಾಜ ಕ್ಷೇತ್ರದ ಉದಯಗಿರಿ ತನ್ವೀರ್ ಅವರ ನಿವಾಸದ ಎದುರು ಇದು ನಡೆದಿದೆ. 
ವಿಷ ಸೇವಿಸಿದ ತಕ್ಷಣ ಆತನ ಆರೋಗ್ಯದಲ್ಲಿ ಏರುಪೇರಾಗಿದ್ದು, ಸ್ಥಳದಲ್ಲಿದ್ದವರು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. 
ಆಸ್ಪತ್ರೆಯ ವೈದ್ಯರ ಮಾಹಿತಿ ಪ್ರಕಾರ, ತಬ್ರೇಜ್‌ರಿಗೆ ಚಿಕಿತ್ಸೆ ಮುಂದುವರಿದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಶಾಸಕ ತನ್ವೀರ್ ಸೇಠ್ ಅವರು ಅಭಿಮಾನಿಯ ಆರೋಗ್ಯ ವಿಚಾರಿಸಿದರು. 

ಸಾಲು ಸಾಲು ಪ್ರತಿಭಟನೆ; 

 ಕಾಂಗ್ರೆಸ್ ಹೈಕಮಾಂಡ್ ವಿರುದ್ಧ  ಘೋಷಣೆ 

ಸಚಿವ ಸ್ಥಾನ ಸಿಗದಿರುವ ವಿಚಾರ ತಿಳಿಯುತ್ತಿದ್ದಂತೆ ಉದಯಗಿರಿಯಲ್ಲಿರುವ ಶಾಸಕ ತನ್ವೀರ್ ಸೇಠ್ ಅವರ ನಿವಾಸದ ಎದುರು ನೂರಾರು ಬೆಂಬಲಿಗರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದರು.
 ಸಚಿವ ಸ್ಥಾನ ಕೈತಪ್ಪಿದ್ದರಿಂದ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ  ಘೋಷಣೆ ಕೂಗಿದರು. ಇದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳದಲ್ಲಿ ಹೈಡ್ರಾಮಗಳೂ ನಡೆದವು. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು.
ರಾಜೀನಾಮೆ ಕೊಟ್ಟು ಹೊರ ಬನ್ನಿ: ‘ಪೇಮೇಂಟ್ ಕೊಟ್ಟವರಿಗೆ ಮಾತ್ರ ಸಚಿವ ಸ್ಥಾನದ ಅವಕಾಶ’ ಎಂದು ದೂರಿದ ಪ್ರತಿಭಟನಾಕಾರರು ಕಣ್ಣೀರು ಹಾಕಿದರು. ಕಾರ್ಯಕರ್ತರು ನಿಜವಾದ ಪಕ್ಷದ ಶಕ್ತಿ. ಹೀಗಾಗಿ, ರಾಜೀನಾಮೆ ಕೊಟ್ಟು ಹೊರ ಬನ್ನಿ ಎಂದು ತನ್ವೀರ್ ಸೇಠ್‌ಗೆ ಪ್ರತಿಭಟನಾನಿರತರರು ಆಗ್ರಹಿಸಿದರು

ಪೆಟ್ರೋಲ್ ಸುರಿದುಕೊಳ್ಳಲು ಯತ್ನ  

ನಗರದ ಮಣಿಪಾಲ್ ಆಸ್ಪತ್ರೆ ಎದುರಿನ ಜಂಕ್ಷನ್ ಬಳಿಯೂ ಅಭಿಮಾನಿಗಳು ದಿಢೀರ್ ಪ್ರತಿಭಟನೆ ನಡೆಸಿದರು. 
ಈ ಸಂದರ್ಭದಲ್ಲಿ ಬೆಂಬಲಿಗನೊಬ್ಬ ಪೆಟ್ರೋಲ್ ಸುರಿದುಕೊಳ್ಳಲು ಮುಂದಾದ. ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು, ಆತನ ಕೈಯಿಂದ ಪೆಟ್ರೋಲ್ ಬಾಟಲ್ ಕಸಿದುಕೊಂಡರು.
 ಇದರಿಂದ ಅನಾಹುತ ತಪ್ಪಿತು. ರಸ್ತೆ ಮಧ್ಯದಲ್ಲೇ ಕುಳಿತು ಬೆಂಬಲಿಗರು ಪ್ರತಿಭಟನೆ ನಡೆಸಿದ್ದರಿಂದ ಕೆಲ ಹೊತ್ತು ವಾಹನಗಳ ಸಂಚಾರ ಅಸ್ತ್ಯವ್ಯಸ್ತವಾಯಿತು. ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net