ಅವಕಾಶ ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಿ:ಎನ್.ಆರ್.ಗ್ರೂಪ್ ಅಧ್ಯಕ್ಷ ಆರ್.ಗುರು ಸಲಹೆ
ರೋಟರಿ ಮೈಸೂರು ಮೆಟ್ರೋದಿಂದ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಯ್ದ ಫಲಾನುಭವಿಗಳಿಗೆ ಆಟೋಗಳನ್ನು ವಿತರಿಸಲಾಯಿತು. ಆರ್.ಗುರು, ಸತೀಶ್ ಬೊಲಾರ್, ಸತ್ಯೇಂದ್ರ ಕಶ್ಯಪ್, ರವೀಂದ್ರಬಾಬು, ದೀಪರಾಜ್ ಪಾಂಡ್ಯ, ಶೃತಿ, ರಾಜೇಂದ್ರ, ಜಯಪ್ರಕಾಶ್,ಆಶಾ ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಬದುಕಿನಲ್ಲಿ ಏರಿಳಿತ, ಕಷ್ಟ -ಸುಖ ಬರುತ್ತವೆ. ಆದರೆ, ಅವುಗಳನ್ನು ಸಮಾಂತರದಿಂದ ತೆಗೆದುಕೊಂಡು ಹೋಗುವ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು
ಅವಕಾಶ ಸಿಗುವುದು ಪ್ರಸ್ತುತ ಕಡಿಮೆ. ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡು ಬದುಕು ಕಟ್ಟಿಕೊಂಡು ಆರ್ಥಿಕವಾಗಿ ಬಲಗೊಳ್ಳಬೇಕು
ಮೈಸೂರು:
ಜೀವನದಲ್ಲಿ ಅವಕಾಶಗಳು ಬರುವುದು ಅಪರೂಪ. ಹಾಗಾಗಿ ಸಿಕ್ಕ ಅವಕಾಶ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಎನ್.ಆರ್.ಗ್ರೂಪ್ ಅಧ್ಯಕ್ಷ ಆರ್.ಗುರು ಸಲಹೆ ನೀಡಿದರು.
ರೋಟರಿ ಮೈಸೂರು ಮೆಟ್ರೋ, ಇನ್ನರ್‌ವೀಲ್ ಸಂಸ್ಥೆ, ತಳಿರು ಫೌಂಡೇಷನ್‌ನಿಂದ ನಗರದಲ್ಲಿ ಆಯೋಜಿಸಿದ್ದ ಸಖಿ ಯೋಜನೆಯಡಿ ಹತ್ತು ಮಹಿಳೆಯರಿಗೆ ಪಿಂಕ್ ಆಟೋ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬದುಕಿನಲ್ಲಿ ಏರಿಳಿತ, ಕಷ್ಟ -ಸುಖ ಬರುತ್ತವೆ. ಆದರೆ, ಅವುಗಳನ್ನು ಸಮಾಂತರದಿಂದ ತೆಗೆದುಕೊಂಡು ಹೋಗುವ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಜತೆಗೆ ಅವಕಾಶ ಸಿಗುವುದು ಪ್ರಸ್ತುತ ಕಡಿಮೆ. ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡು ಬದುಕು ಕಟ್ಟಿಕೊಂಡು ಆರ್ಥಿಕವಾಗಿ ಬಲಗೊಳ್ಳಬೇಕು ಎಂದರು.
ಎನ್.ಆರ್.ಫೌಂಡೇಷನ್‌ನಿಂದ 38 ವರ್ಷಗಳಿಂದ ಮಹಿಳೆಯರ ಸಬಲೀಕರಣಕ್ಕೆ ಹಲವು ಯೋಜನೆ ರೂಪಿಸಿದೆ. ಅಂಧ ಹೆಣ್ಣುಮಕ್ಕಳಿಗಾಗಿ ಉಚಿತ ವಸತಿ ಶಾಲೆ, ಅಂಗವಿಕಲರು ಸೇರಿದಂತೆ ನೊಂದವರಿಗೆ ವಿವಿಧ ಕೌಶಲ ಅಭಿವೃದ್ಧಿ ತರಬೇತಿ ನೀಡಲಾಗುತ್ತಿದೆ. ಈ ಮೂಲಕ ಅವರ ಜೀವನ ರೂಪುಗೊಳ್ಳಲು ನೆರವಾಗುತ್ತಿದೆ. ಈಗ ರೋಟರಿ ಸಂಸ್ಥೆಯ ತಳಿರು ಫೌಂಡೇಷನ್ ಸಹಕಾರದಲ್ಲಿ ಕಷ್ಟದಲ್ಲಿರುವ ಮಹಿಳೆಯರಿಗೆ ಸ್ವಾವಲಂಬಿಯಾಗಿ ಬದುಕಲು ಆಟೋ ಚಾಲನೆ ತರಬೇತಿ ನೀಡಿ ಆಟೋ ಖರೀದಿಗೆ ನೆರವು ನೀಡಿರುವುದು ಉತ್ತಮ ಕಾರ್ಯ ಎಂದು ಶ್ಲಾಘಿಸಿದರು.
ರೋಟರಿ ಜಿಲ್ಲಾ ಪ್ರಾಂತಪಾಲ ಸತೀಶ್ ಬೊಲಾರ್ ಮಾತನಾಡಿ, ಇಂದಿನ ಆಧುನೀಕ ದಿನಗಳಲ್ಲಿ ಕುಟುಂಬ ಪರಿಕಲ್ಪನೆ ಮರೆಯಾಗುತ್ತಿದೆ. ಆದ್ದರಿಂದ ನಮ್ಮ ಸಂಸ್ಕೃತಿಯನ್ನು ಇಂದಿನ ಜನಾಂಗಕ್ಕೆ ಪರಿಚಯ ಮಾಡಿಕೊಡುವ ಉದ್ದೇಶದಿಂದ ರೋಟರಿಯಿಂದ ಸಾಮಾಜಿಕ ಕಾರ್ಯಕ್ರಮಗಳ ಜತೆಗೆ ಕೌಟುಂಬಿಕ ಕಾರ್ಯಕ್ರಮ ಆಯೋಜಿಸಿಕೊಂಡು ಬರಲಾಗುತ್ತಿದೆ ಎಂದರು.
ತಳಿರು ಫೌಂಡೇಷನ್‌ನ ಚಿತ್ರಾ ಮಾತನಾಡಿ, ಸಮಾಜದಲ್ಲಿ ಶ್ರೀಮಂತ, ಬಡವರ ನಡುವಿನ ತಾರತಮ್ಯ ಹೆಚ್ಚಾಗುತ್ತಲೇ ಇದೆ. ಇದರಿಂದ ಬಡವರ್ಗದಲ್ಲಿ ಅದರಲ್ಲೂ ಏಕಪೋಷಕ ಮಹಿಳೆ ಕುಟುಂಬದಲ್ಲಿ ಜೀವನ ಸಾಗಿಸುವುದು ಕಷ್ಟವಾಗಿದೆ. ಅದಕ್ಕೆ ನಮ್ಮ ಸಂಸ್ಥೆಯಿಂದ ಆಟೋ ಚಾಲನಾ ತರಬೇತಿ ಕೊಟ್ಟು, ಆಟೋ ಖರೀದಿಗೆ ಸಹಕಾರ ನೀಡಲಾಗುತ್ತಿದೆ ಎಂದರು.
ರೋಟರಿ ಮೈಸೂರು ಮೆಟ್ರೋ ಅಧ್ಯಕ್ಷ ಸತ್ಯೇಂದ್ರ ಕಶ್ಯಪ್ ಮಾತನಾಡಿ, ನೊಂದ ಮಹಿಳೆಯರಿಗೆ ನೆರವಾಗಿ ಆರ್ಥಿಕವಾಗಿ ಸಬಲಗೊಳ್ಳುವ ಉದ್ದೇಶದಿಂದ ಆಟೋ ಚಾಲನೆ ತರಬೇತಿ ನೀಡಿ, ಆಟೋ ಕೊಳ್ಳಲು ನೆರವು ನೀಡಲಾಗುತ್ತಿದೆ. ದಾನಿಗಳ ಸಹಕಾರದಿಂದ ಒಟ್ಟು ನೂರು ಆಟೋಗಳನ್ನು ವಿತರಿಸುವ ಗುರಿ ಹೊಂದಿದ್ದು, ಪ್ರಥಮ ಹಂತದಲ್ಲಿ ಆಟೋಮೋಟಿವ್ ಅಕ್ಸಲ್ ಲಿಮಿಟೆಡ್ ಸಹಕಾರದಲ್ಲಿ 10 ಆಟೋ ವಿತರಿಸಲಾಗಿದೆ ಎಂದು ತಿಳಿಸಿದರು.
ಫಲಾನುಭವಿಗಳಾದ ಸೌಮ್ಯಾ, ಭಾಗ್ಯಶ್ರೀ, ರೋಟರಿ ಮೈಸೂರು ಮೆಟ್ರೋ ಕಾರ್ಯದರ್ಶಿ ರವೀಂದ್ರಬಾಬು, ಆಟೋಮೋಟಿವ್ ಅಕ್ಸಲ್ ಲಿಮಿಟೆಡ್‌ನ ದೀಪರಾಜ್ ಪಾಂಡ್ಯ, ಸಖಿ ಯೋಜನೆಯ ಶ್ರುತಿ, ರೋಟರಿ ಸಂಸ್ಥೆಯ ರಾಜೇಂದ್ರ, ಜಯಪ್ರಕಾಶ್, ಇನ್ನರ್‌ವ್ಹೀಲ್‌ನ ಆಶಾ ಇತರರು ಇದ್ದರು.