ತಿ.ನರಸೀಪುರ ಪಟ್ಟಣದ ಹೆಳವರಹುಂಡಿಯಲ್ಲಿರುವ ಶ್ರೀಕನಕ ಭವನದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಛಾಯಾಗ್ರಹಣ ದಿನಾಚರಣೆಯಲ್ಲಿ ಹಿರಿಯ ಛಾಯಾಗ್ರಾಹಕರರಾದ ಎಂ.ಧನಂಜಯ ಹಾಗೂ ಸಿ.ನಂಜುಂಡರಾಧ್ಯ ಅವರನ್ನು ಸನ್ಮಾನಿಸಲಾಯಿತು. ಸೋಸಲೆ ಗಂಗಾಧರ್, ಡಾ.ಎಂ.ಮಾದೇಶ, ಬಿ.ವಿಜಯ್, ಧನಂಜಯ, ಮಹೇಶ್, ಎಸ್.ಕೆ.ಶಿವಕುಮಾರ್, ಶಾಂತಕುಮಾರ್, ನಟರಾಜು ಇತರರಿದ್ದರು.
Published on:
Copied
Follow Us
ತಿ.ನರಸೀಪುರ: ಪ್ರಕೃತಿ ಸೌಂದರ್ಯ, ಪ್ರತಿಯೊಂದು ಜೀವಿಗಳ ಪ್ರತಿಬಿಂಬವನ್ನು ಸೆರೆ ಹಿಡಿಯುವ ಛಾಯಾಗ್ರಹಣವೆಂಬ ಕಲೆ ಆ ಕ್ಷಣದ ನೆನಪನ್ನು ಶಾಶ್ವತಗೊಳಿಸುತ್ತದೆ ಎಂದು ಸಾಹಿತಿ ಸೋಸಲೆ ಗಂಗಾಧರ್ ತಿಳಿಸಿದರು.
ಪಟ್ಟಣದ ಹೆಳವರಹುಂಡಿಯಲ್ಲಿರುವ ಶ್ರೀಕನಕ ಭವನದಲ್ಲಿ ಶನಿವಾರ ತಾಲೂಕು ಛಾಯಾಗ್ರಾಹಕರ ಸಂಘದ ವತಿಯಿಂದ ಆಯೋಜಿಸಿದ್ದ 187ನೇ ವರ್ಷದ ವಿಶ್ವ ಛಾಯಾಗ್ರಹಣ ದಿನಾಚರಣೆ ಹಾಗೂ ಛಾಯಾಜ್ಯೋತಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಛಾಯಾಗ್ರಹಣ ವೃತ್ತಿಯಷ್ಟೇ ಅಲ್ಲ, ಅದೊಂದು ತಂತ್ರಜ್ಞಾನ ಕೌಶಲ ಆಧಾರಿತ ಉದ್ಯಮ ಎಂದರು.
ಫೋಟೋಗ್ರಫಿಗೆ ನಾಲ್ಕು ಶತಮಾನಗಳ ಇತಿಹಾಸವಿದೆ. ಕಪ್ಪು-ಬಿಳಿಪು ಇದ್ದದ್ದು 1995ರ ಬಳಿಕ ಡಿಜಿಟಲೀಕರಣವಾಗಿ ವರ್ಣಮಯಗೊಂಡು ಜನರನ್ನು ಆಕರ್ಷಿಸುತ್ತಿದೆ. ನೆನಪುಗಳು ಮರೆತು ಹೋಗುತ್ತವೆಯಾದರೂ ಸೆರೆ ಹಿಡಿದ ಫೋಟೋಗಳಲ್ಲಿ ನೆನಪು ಉಳಿದಿರುತ್ತದೆ. ಆಧುನೀಕರಣಕ್ಕೆ ತಕ್ಕಂತೆ ಛಾಯಾಗ್ರಾಹಕರು ಪರಿಣತಿ ಹೊಂದಿ ಸಜ್ಜಾಗಬೇಕು ಎಂದು ತಿಳಿಸಿದರು.
ಜಿಲ್ಲಾ ಕಾರ್ಯದರ್ಶಿ ಧನಂಜಯ್ ಮಾತನಾಡಿ, ಫೋಟೋಗ್ರಫಿ ಒಂದು ಕಲೆ, ಫೋಟೋಗ್ರಾಫರ್‌ಗಳು ಕಲೆಯನ್ನು ದೃಶ್ಯವನ್ನು ಸೆರೆ ಹಿಡಿಯುವ ಮೂಲಕ ಜಗತ್ತಿಗೆ ತೋರಿಸಿದ್ದೇವೆ. ಹಗಲು-ರಾತ್ರಿ ಎನ್ನದೆ ಸಮಾರಂಭಗಳಲ್ಲಿ ಕಾರ್ಯನಿರ್ವಹಿಸುವಾಗ ತಾಳ್ಮೆಯಿಂದ ವರ್ತಿಸಿ ವೃತ್ತಿಗೆ ಚ್ಯುತಿ ಬರದಂತೆ ಕರ್ತವ್ಯ ನಿರ್ವಹಿಸುವ ಮೂಲಕ ಜನರ ನಂಬಿಕೆ ಉಳಿಸಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾಧ್ಯಕ್ಷ ಬಿ.ವಿಜಯ್ ಹಾಗೂ ತಾಲೂಕು ಸಂಘದ ಮಾಜಿ ಅಧ್ಯಕ್ಷ ಬನ್ನೂರು ಮಹೇಶ್ ಮಾತನಾಡಿದರು.
ಹಿರಿಯ ಗಾಯಕಿ ದಿವಂಗತ ಎಸ್.ಜಾನಕಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು.
ಛಾಯಾಗ್ರಾಹಕರಾಗಿ ಸುದೀರ್ಘ ಅವಧಿಯ ಸೇವೆ ಸಲ್ಲಿಸಿದ ಎಂ.ಧನಂಜಯ ಹಾಗೂ ಸಿ.ನಂಜುಂಡರಾಧ್ಯ ಅವರಿಗೆ ‘ಛಾಯಾಜ್ಯೋತಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ನಂತರ ಅನಾಥ ಶವಗಳ ಮುಕ್ತಿದಾತ, ಸಮಾಜಸೇವಕ ಡಾ. ಎಂ.ಮಾದೇಶ್ ಅವರನ್ನು ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ಎಸ್.ಕೆ.ಶಿವಕುಮಾರ್, ಉಪಾಧ್ಯಕ್ಷ ಆರ್.ನಟರಾಜು, ಕಾರ್ಯದರ್ಶಿ ಶಾಂತಕುಮಾರ್, ಖಜಾಂಚಿ ನಂಜುಂಡ ಆರಾಧ್ಯ, ಮಾಜಿ ಅಧ್ಯಕ್ಷ ರಘುನಂದನ್, ನಿರ್ದೇಶಕರಾದ ಮಧುಸೂದನ್, ನಂಜುಂಡಸ್ವಾಮಿ, ಶ್ಯಾಮ್, ಬನ್ನೂರು ಕೃಷ್ಣೇಗೌಡ, ಪೊಣ್ಣಪ್ಪ ಮಂಜುನಾಥ್, ಮಾದಾಪುರ ನವೀನ್‌ಕುಮಾರ್, ಪ್ರದೀಪ, ವಾಟಾಳ್ ಮಹೇಶ್, ಬನ್ನೂರು ಸಂತೆಮಾಳ ಅಶ್ವಿನಿ ಮತ್ತಿತರರಿದ್ದರು.