ತಿ.ನರಸೀಪುರ ಪಟ್ಟಣದ ಸರ್ಕಾರಿ ನೌಕರರ ಸಂಘದ ಆವರಣದಲ್ಲಿ ಹಿರಿಯ ನಾಗರಿಕರಿಗೆ ಆಯೋಜಿಸಿದ್ದ ಆರ್ಥಿಕ ಸಾಕ್ಷರತೆ ಮತ್ತು ಡಿಜಿಟಲೀಕರಣ ಸಾಕ್ಷರತೆ ಕಾರ್ಯಕ್ರಮವನ್ನು ನಬಾರ್ಡ್ ಮೈಸೂರು ವಿಭಾಗದ ಅಭಿವೃದ್ಧಿ ವ್ಯವಸ್ಥಾಪಕ ಶಾಂತವೀರ್ ಉದ್ಘಾಟಿಸಿದರು. ರಜೀಶ್, ರಾಘವ ಕಾರ್ತಿಕೇಯ, ಎಂ.ಎ.ಹೇಮಚಂದ್ರ, ಮಹದೇವಯ್ಯ, ವೆಂಕಟರಮಣಸ್ವಾಮಿ, ಎಸ್.ವಿ.ರಮೇಶ್‌ರಾವ್ ಇತರರಿದ್ದರು.
Published on:
Copied
Follow Us
ತಿ.ನರಸೀಪುರ: ಆಧುನಿಕ ಯುಗದಲ್ಲಿ ಜಾಗತೀಕರಣದಿಂದಾಗಿ ಅಂತರ್ಜಾಲ, ತಂತ್ರಜ್ಞಾನ ಹಾಗೂ ತಂತ್ರಾಂಶಗಳ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆನ್‌ಲೈನ್ ಆರ್ಥಿಕ ವಂಚನೆಗಳೂ ಹೆಚ್ಚಾಗುತ್ತಿದ್ದು, ಬ್ಯಾಂಕ್‌ಗಳಲ್ಲಿ ಹಣಕಾಸು ವಹಿವಾಟು ನಡೆಸುವ ಗ್ರಾಹಕರು ತಮ್ಮ ಡಿಜಿಟಲ್ ವ್ಯವಹಾರಗಳ ಕುರಿತು ಅತ್ಯಂತ ಎಚ್ಚರಿಕೆಯಿಂದ ಇರಬೇಕೆಂದು ನಬಾರ್ಡ್ ಮೈಸೂರು ವಿಭಾಗದ ಅಭಿವೃದ್ಧಿ ವ್ಯವಸ್ಥಾಪಕ ಶಾಂತವೀರ್ ಸಲಹೆ ನೀಡಿದರು.
ಪಟ್ಟಣದ ಸರ್ಕಾರಿ ನೌಕರರ ಸಂಘದ ಆವರಣದಲ್ಲಿ ಇತ್ತೀಚೆಗೆ ಕೆನರಾ ಬ್ಯಾಂಕ್ ಹಾಗೂ ನಬಾರ್ಡ್ ಸಹಯೋಗದಲ್ಲಿ ಹಿರಿಯ ನಾಗರಿಕರಿಗಾಗಿ ಆಯೋಜಿಸಿದ್ದ ಆರ್ಥಿಕ ಸಾಕ್ಷರತೆ ಮತ್ತು ಡಿಜಿಟಲೀಕರಣ ಕುರಿತ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅವರು, ಕೆಲ ದಶಕಗಳ ಹಿಂದೆ ಬ್ಯಾಂಕ್ ವ್ಯವಹಾರಕ್ಕಾಗಿ ಗ್ರಾಹಕರು ನೇರವಾಗಿ ಬ್ಯಾಂಕ್‌ಗೆ ತೆರಳಬೇಕಾಗಿತ್ತು. ಆದರೆ ತಂತ್ರಜ್ಞಾನ ಅಭಿವೃದ್ಧಿಯೊಂದಿಗೆ ಆನ್‌ಲೈನ್ ಹಣ ವರ್ಗಾವಣೆ, ಯುಪಿಐ, ಫೋನ್‌ಪೇ ಸೇರಿದಂತೆ ವಿವಿಧ ಆ್ಯಪ್‌ಗಳ ಮೂಲಕ ಮೊಬೈಲ್‌ನಲ್ಲೇ ಹಣಕಾಸು ವ್ಯವಹಾರಗಳು ಈಗ ಸುಲಭವಾಗಿವೆ. ಇದರಿಂದಾಗಿ ಬ್ಯಾಂಕ್ ಸೇವೆಗಳು ಸರಳಗೊಂಡಿದ್ದರೂ ಇದೇ ಅವಕಾಶವನ್ನು ದುರುಪಯೋಗಪಡಿಸಿಕೊಂಡು ಆನ್‌ಲೈನ್ ವಂಚಕರು ಗ್ರಾಹಕರ ಖಾತೆಗಳಿಂದ ಹಣ ದೋಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.
ವೃದ್ಧರು ಹಾಗೂ ನಿವೃತ್ತ ನೌಕರರನ್ನು ಗುರಿಯಾಗಿಸಿಕೊಂಡು ವಂಚಕರು ಮೋಸ ಮಾಡುತ್ತಿರುವುದು ಹೆಚ್ಚಾಗಿರುವುದರಿಂದ ಹಿರಿಯ ನಾಗರಿಕರು ಹೆಚ್ಚು ಜಾಗರೂಕರಾಗಿರಬೇಕೆಂದು ಕಿವಿಮಾತು ಹೇಳಿದರು.
ಕೆನರಾ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ರಜೀಶ್ ಮಾತನಾಡಿ, ಗ್ರಾಹಕರು ತಮ್ಮ ಬ್ಯಾಂಕ್ ಖಾತೆಯ ಮಾಹಿತಿಗಳನ್ನು ಅತ್ಯಂತ ಗೌಪ್ಯವಾಗಿ ಕಾಪಾಡಿಕೊಳ್ಳಬೇಕು. ಆಧಾರ್ ಸಂಖ್ಯೆ, ಎಟಿಎಂ ಕಾರ್ಡ್‌ನ ಅಂಕಿಯ ಸಂಖ್ಯೆಗಳು, ಸಿವಿವಿ ಹಾಗೂ ಒಟಿಪಿಯನ್ನು ಯಾವುದೇ ವ್ಯಕ್ತಿಯೊಂದಿಗೆ ಹಂಚಿಕೊಳ್ಳಬಾರದು. ಬ್ಯಾಂಕ್ ಯಾವುದೇ ಸಂದರ್ಭದಲ್ಲೂ ಗ್ರಾಹಕರ ಖಾಸಗಿ ಮಾಹಿತಿಯನ್ನು ಕೇಳಿಕೊಂಡು ಕರೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಅಲ್ಲದೆ ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಅರೆಸ್ಟ್ ಎಂಬ ಹೆಸರಿನಲ್ಲಿ ವಂಚಕರು ಸಾರ್ವಜನಿಕರಿಗೆ ಬೆದರಿಕೆ ಕರೆ ಮಾಡಿ, ಅಕ್ರಮ ವ್ಯವಹಾರಗಳಲ್ಲಿ ತೊಡಗಿದ್ದೀರಿ ಎಂದು ಭಯ ಹುಟ್ಟಿಸುತ್ತಿದ್ದಾರೆ. ಹಣ ವರ್ಗಾವಣೆ ಮಾಡದಿದ್ದರೆ ಗೌಪ್ಯ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕುತ್ತಿರುವ ಘಟನೆಗಳು ನಡೆಯುತ್ತಿವೆ. ಇಂತಹ ಸಂದರ್ಭಗಳಲ್ಲಿ ಆತಂಕಕ್ಕೆ ಒಳಗಾಗದೆ ತಕ್ಷಣ ಪೊಲೀಸ್ ಠಾಣೆ ಅಥವಾ ಸಂಬಂಧಪಟ್ಟ ಬ್ಯಾಂಕ್‌ಗೆ ದೂರು ನೀಡಬೇಕೆಂದು ಸಲಹೆ ನೀಡಿದರು.
ಕೆನರಾ ಬ್ಯಾಂಕ್ ಮುಖ್ಯ ಪ್ರಬಂಧಕ ರಾಘವ ಕಾರ್ತಿಕೇಯ ಮಾತನಾಡಿ, ಹಿರಿಯ ನಾಗರಿಕರಿಗೆ ಲಭ್ಯವಿರುವ ಸಾಲ ಸೌಲಭ್ಯಗಳು, ನಿಗದಿತ ಠೇವಣಿಗಳ ಮೇಲಿನ ಹೆಚ್ಚುವರಿ ಬಡ್ಡಿದರಗಳು ಹಾಗೂ ಪಿಂಚಣಿದಾರರಿಗೆ ನೀಡಲಾಗುವ ವಿಶೇಷ ಬ್ಯಾಂಕ್ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಬ್ಯಾಂಕ್ ಹಿರಿಯ ವ್ಯವಸ್ಥಾಪಕ ಎಂ.ಎ. ಹೇಮಚಂದ್ರ, ಆರ್ಥಿಕ ಸಲಹೆಗಾರ ಎಸ್.ವಿ.ರಮೇಶ್ ರಾವ್, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಮಹದೇವಯ್ಯ, ಕಾರ್ಯದರ್ಶಿ ವೆಂಕಟರಮಣಸ್ವಾಮಿ ಮತ್ತಿತರರು ಹಾಜರಿದ್ದರು.