ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಕ್ರಮಬದ್ಧ ಅಧ್ಯಯನ ಅವಶ್ಯ
ಮುಕ್ತ ಗಂಗೋತ್ರಿಯ ಗಂಗಾ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ ್ದ ಕಾರ್ಯಕ್ರಮದಲ್ಲಿ ‘ಮುಕ್ತಭಂಡಾರ’ ಅಧ್ಯಯನ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಡಾ.ಹರ್ಷ ಪ್ರಿಯಂವದ, ಪ್ರೊ.ಶರಣಪ್ಪ ವಿ. ಹಲಸೆ, ಆರ್.ಐಶ್ವರ್ಯ, ಡಾ.ಸಿ.ಎಸ್.ಆನಂದಕುಮಾರ್ ಇತರರಿದ್ದರು.
ಮೈಸೂರು ನಗರ ಪೊಲೀಸ್ ಉಪ ಆಯುಕ್ತೆ ಡಾ.ಹರ್ಷ ಪ್ರಿಯಂವದ ಸಲಹೆ
ಕೆ-ಸೆಟ್ ಮತ್ತು ಯುಜಿಸಿ-ನೆಟ್ ಪರೀಕ್ಷಾ ತರಬೇತಿ ಶಿಬಿರ
ಮೈಸೂರು: ಸಾಧನೆಯ ಹಾದಿ ಸುಲಭದ್ದಲ್ಲ, ಕಷ್ಟಪಟ್ಟು ಶ್ರಮಿಸಿದರೆ ಮಾತ್ರ ಉದ್ಯೋಗ ಪಡೆಯಲು ಸಾಧ್ಯ ಎಂದು ಮೈಸೂರು ನಗರ ಪೊಲೀಸ್ ಉಪ ಆಯುಕ್ತೆ ಡಾ.ಹರ್ಷ ಪ್ರಿಯಂವದ ಹೇಳಿದರು.
ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದಿಂದ ಮುಕ್ತ ಗಂಗೋತ್ರಿಯ ಗಂಗಾ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕೆ-ಸೆಟ್ ಮತ್ತು ಯುಜಿಸಿ-ನೆಟ್ ಪರೀಕ್ಷಾ ತರಬೇತಿ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು.
ಪದವಿ ಮುಗಿಯುವ ಮುನ್ನವೇ ನಾವು ಯಾವ ಕ್ಷೇತ್ರ ಆಯ್ಕೆ ಮಾಡಿಕೊಳ್ಳಬೇಕು ಎಂಬ ಸ್ಪಷ್ಟತೆ ಇರಬೇಕು. ಮೊದಲ ಬಾರಿ ವಿಫಲರಾದರೂ ಧೃತಿಗೆಡದೆ, ಕ್ರಮಬದ್ಧ ಅಧ್ಯಯನ ಮುಂದುವರಿಸಿದರೆ ಯಶಸ್ಸು ಖಂಡಿತ ಸಿಗುತ್ತದೆ ಎಂದು ಶಿಬಿರಾರ್ಥಿಗಳಿಗೆ ವಿಶ್ವಾಸ ತುಂಬಿಸಿದರು.
ನನ್ನ ತಂದೆ-ತಾಯಿ ಇಬ್ಬರೂ ವೈದ್ಯರಾಗಿದ್ದರಿಂದ ನಾನು ವೈದ್ಯಕೀಯ ಕ್ಷೇತ್ರ ಆರಿಸಿಕೊಳ್ಳಬೇಕೆಂಬ ಆಸೆ ಅವರದಾಗಿತ್ತು. ಆದರೆ, ನನಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಒಲವಿದ್ದಿದ್ದರಿಂದ ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತೆ ನಡೆಸಿದೆ. ಸ್ಪರ್ಧಾತ್ಮಕ ಪರೀಕ್ಷೆಗಳು ನಮ್ಮ ಬದುಕನ್ನೇ ಬದಲಿಸುತ್ತವೆ.
ಇವುಗಳನ್ನು ಎದುರಿಸುವ ವಿದ್ಯಾರ್ಥಿಗಳು ನಿಗದಿತ ವಿಷಯಗಳ ಜತೆಗೆ ನಿಯಮಿತವಾಗಿ ದಿನಪತ್ರಿಕೆ ಓದಬೇಕು. ಪ್ರಸ್ತುತ ಮಾರುಕಟ್ಟೆಯಲ್ಲಿ ಉತ್ತಮ ಪುಸ್ತಕಗಳು ಲಭ್ಯವಿದ್ದು, ಅವುಗಳನ್ನು ಓದಿ ಮನನ ಮಾಡಿಕೊಳ್ಳಬೇಕು ಎಂದು ತಮ್ಮ ಯಶಸ್ಸಿನ ಹಾದಿ ನೆನಪಿಸಿಕೊಂಡರು.
ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಪಠ್ಯಪುಸ್ತಕಗಳಿಗೆ ಸೀಮಿತವಾಗದೆ, ಜ್ಞಾನದ ಹರವನ್ನು ವಿಸ್ತರಿಸಿಕೊಳ್ಳಬೇಕು. ವಿದ್ಯಾರ್ಥಿಗಳು ದೈನಂದಿನ ಪಠ್ಯಗಳ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಪುಸ್ತಕ ಕಡ್ಡಾಯವಾಗಿ ಅಧ್ಯಯನ ಮಾಡಬೇಕು ಎಂದು ಹೇಳಿದರು.
ಪಠ್ಯದ ಜತೆಗೆ ಜ್ಞಾನ ಗಳಿಸಿ, ಸೋಲಿಗೆ ಹೆದರದೆ ಛಲ ಬೆಳೆಸಿಕೊಳ್ಳಿ, ಕ್ರಮಬದ್ಧ ಅಧ್ಯಯನ ನಿರಂತರವಿರಲಿ, ಶ್ರಮದ ಹಾದಿಯಲ್ಲಿ ಯಶಸ್ಸು ಸಿಗಲಿ ಎಂದು ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
‘ಮುಕ್ತಭಂಡಾರ’ ಅಧ್ಯಯನ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ಇಂತಹ ತರಬೇತಿ ಶಿಬಿರಗಳು ಎಲ್ಲ ವಿಷಯಗಳ ಸಮಗ್ರ ಅಧ್ಯಯನಕ್ಕೆ ಉತ್ತಮ ವೇದಿಕೆಯಾಗಲಿವೆ. ಕಲಾ, ವಾಣಿಜ್ಯ ಮತ್ತು ವಿಜ್ಞಾನ ಹೀಗೆ ಯಾವುದೇ ವಿಭಾಗದ ಹಿನ್ನೆಲೆಯುಳ್ಳವರಿಗೂ ಇದು ಸಹಕಾರಿಯಾಗಿದೆ. ಇದು ಕೇವಲ ಪರೀಕ್ಷೆಗಷ್ಟೇ ಅಲ್ಲದೆ, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಹಾಗೂ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ನೆರವಾಗುತ್ತದೆ ಎಂದರು.
ಕರಾಮುವಿ ಕುಲಪತಿ ಪ್ರೊ.ಶರಣಪ್ಪ ವಿ ಹಲಸೆ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ದೊಡ್ಡಗುರಿ ಹೊಂದಿರಬೇಕು. ತಾವು ಏನನ್ನು ಸಾಧಿಸಬೇಕೆಂದು ಕೊಂಡಿದ್ದಾರೋ, ಅದನ್ನು ಮನಸ್ಸಿನಲ್ಲಿ ದೃಢವಾಗಿ ಸಂಕಲ್ಪಿಸಿ ಶ್ರದ್ಧೆಯಿಂದ ತಯಾರಿ ನಡೆಸಬೇಕು ಎಂದು ತಿಳಿಸಿದರು.
ಪರೀಕ್ಷಾಂಗ ಕುಲಸಚಿವ ಡಾ.ಸಿ.ಎಸ್.ಆನಂದಕುಮಾರ್, ಹಣಕಾಸು ಅಧಿಕಾರಿ ಡಾ.ಎಸ್.ನಿರಂಜನ್‌ರಾಜ್, ಡಾ.ಶೈಲೇಶರಾಜ್ ಅರಸ್, ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಸಿದ್ದೇಶ್ ಹೊನ್ನೂರು ಹಾಗೂ ಬಿ.ಗಣೇಶ್ ಕೆ.ಜಿ.ಕೊಪ್ಪಲು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.