ಕೆವಿಕೆಯ ತೋಟಗಾರಿಕೆ ವಿಜ್ಞಾನಿಯಾದ ಡಾ. ಜಿ.ಎಂ. ವಿನಯ್‌ರವರು ಪೌಷ್ಟಿಕ ಕೈ ತೋಟದ ರಚನೆ ಮತ್ತು ನಿರ್ವಹಣೆ ಹಾಗೂ ಕೈತೋಟದಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆ, ಭೂಮಿ ಸಿದ್ಧತೆ, ಬಿತ್ತನೆ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಸಸ್ಯ ಸಂರಕ್ಷಣೆ ವಿಜ್ಞಾನಿಯಾದ ಡಾ. ವೈ. ಪಿ. ಪ್ರಸಾದ್ ರವರು ಕೈತೋಟದಲ್ಲಿ ಬರುವ ಕೀಟ ಮತ್ತು ರೋಗಗಳ ಸಾವಯವ ನಿರ್ವಹಣಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಕೈತೋಟದಲ್ಲಿ ಅನುಸರಿಸಬೇಕಾದ ಮುಲಭೂತ ಕ್ರಮಗಳಾದ, ಪಂಚಗವ್ಯ ಹಾಗೂ ತಿಪ್ಪೆ ಗೊಬ್ಬರದ ಬಳಕೆ, ಅಡುಗೆ ಮನೆಯ ತ್ಯಾಜ್ಯದ ಸದ್ಬಳಕೆಯ ಕುರಿತು ಅರಿವು ಮೂಡಿಸಿದರು. ಶ್ರೀಮತಿ ಎಚ್. ವಿ. ದಿವ್ಯಾ ರವರು ನಗರಗಳಲ್ಲಿ ಟೆರಸ್ ಗಾರ್ಡನ್ ಹಾಗೂ ಅದರ ಪ್ರಾಮುಖ್ಯತೆ ಮತ್ತು ನಿರ್ವಹಣೆ ಕುರಿತು ಮಾತನಾಡಿದರು. ಗೃಹ ವಿಜ್ಞಾನದ ವಿಜ್ಞಾನಿಯಾದ ಡಾ. ದೀಪಕ ರವರು ಪೌಷ್ಟಿಕ ಕೈ ತೋಟದಲ್ಲಿ ಬೆಳೆದ ತರಕಾರಿಗಳ ಪೌಷ್ಟಿಕ ಮಹತ್ವ ಹಾಗೂ ದಿನನಿತ್ಯದ ಆಹಾರದಲ್ಲಿ ವಿವಿಧ ತರಕಾರಿ ಬಳಕೆ ಮಾಡುವದರಿಂದ ಜೀವನ ಶೈಲಿ ರೋಗಗಳನ್ನು ನಿವಾರಿಸಿಕೊಳ್ಳಬಹುದೆಂದು ತಿಳಿಸಿದರು. ಪೌಷ್ಟಿಕ ಹಾಗೂ ಸಮತೋಲನ ಆಹಾರದ ಪ್ರಾಮುಖ್ಯತೆ ಹಾಗೂ ದೈನಂದಿನ ಆಹಾರದಲ್ಲಿ ತರಕಾರಿಗಳು ಪ್ರಮುಖ ಭಾಗವಾಗಿದ್ದು, ಬೇರೆ ಆಹಾರ ಪದಾರ್ಥಗಳಿಗೆ ಹೋಲಿಸಿದಾಗ ತರಕಾರಿಗಳಲ್ಲಿ ಅಧಿಕ ಪ್ರಮಾಣದ ಜೀವಸತ್ವಗಳು, ಖನಿಜಲವಣಗಳು, ನಾರಿನಾಂಶ ಹೊಂದಿದ್ದು ಇವುಗಳ ಸೇವನೆಯಿಂದ ಸೂಕ್ಷ್ಮಪೋಷಕಾಂಶಗಳ ಕೊರತೆಯನ್ನು ನೀಗಿಸಬಹುದು ಹಾಗೂ ರಾಸಾಯನಿಕ ಮುಕ್ತ ತರಕಾರಿಗಳ ಸೇವನೆಯಿಂದ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು ಎಂದು ತಿಳಿಸಿದರು.