ಹುಣಸೂರು ತಾಲೂಕು ಕಟ್ಟೆಮಳಲವಾಡಿಯ ವೃದ್ಧೆ ಜಯಮ್ಮಗೆ ಜನಧ್ವನಿ ಫೌಂಡೇಷನ್ ವತಿಯಿಂದ ಮನೆ ನಿರ್ಮಿಸಿಕೊಡಲಾಯಿತು. ಫೌಂಡೇಷನ್ ಅಧ್ಯಕ್ಷ ಪ್ರವೀಣ್ ಆಯರಹಳ್ಳಿ, ಅಭಿ ನಾಗಮಂಗಲ, ಪವನ್, ಭರತ್ ಇತರರಿದ್ದರು.
ಹುಣಸೂರು : ಶಾಶ್ವತ ಸೂರು ಇಲ್ಲದೆ ಗುಡಿಸಲಿನಲ್ಲಿ ವಾಸವಿದ್ದ 70ರ ವಯೋವೃದ್ಧೆಗೆ ಜನಧ್ವನಿ ಫೌಂಡೇಷನ್‌ನ ಯುವಕರ ತಂಡ ಸುಸಜ್ಜಿತ ಕಲ್ನಾರ್ ಶೀಟ್ ಮನೆ ನಿರ್ಮಿಸಿಕೊಟ್ಟು ಮಾನವೀಯತೆ ಮೆರೆದಿದೆ.
ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದಲ್ಲಿ ಹರಿಯುವ ಲಕ್ಷ್ಮಣತೀರ್ಥ ನದಿದಂಡೆಯಲ್ಲಿ ಕಳೆದ ಹತ್ತಾರು ವರ್ಷಗಳಿಂದ ಗುಡಿಸಲು ವಾಸಿಯಾಗಿರುವ ಜಯಮ್ಮ ತನ್ನೊಂದಿಗೆ ತನ್ನಂತೆಯೇ ಅನಾಥನಾದ ಹುಡುಗ ಸೂರ್ಯನನ್ನೂ ಸಾಕಿಕೊಂಡಿದ್ದಾರೆ. ಜಯಮ್ಮ ಶಾಶ್ವತ ಸೂರು ಕಲ್ಪಿಸಲು ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಇದನ್ನು ಅರಿತ ಜನಧ್ವನಿ ಫೌಂಡೇಷನ್ ಅಧ್ಯಕ್ಷ ಪ್ರವೀಣ್ ಆಯರಹಳ್ಳಿ ಮತ್ತವರ ಯುವತಂಡ ದಾನಿಗಳಿಂದಲೂ ಆರ್ಥಿಕ ನೆರವು ಪಡೆದು ಶೀಟ್ ಮನೆ ಕಟ್ಟಿಕೊಟ್ಟಿದ್ದಾರೆ.
ಈ ವೇಳೆ ಮಾತನಾಡಿದ ಪ್ರವೀಣ್ ಆಯರಹಳ್ಳಿ, ಅನಾಥ ವೃದ್ಧೆ ಜಯಮ್ಮ ಮೀನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಳು. ಇವರಿಗೆ ವಸತಿ ಸೌಲಭ್ಯ ಕಲ್ಪಿಸಲು ಗ್ರಾ.ಪಂ ಸ್ವಂತ ನಿವೇಶನವಿಲ್ಲ ಎಂದು ತಿರಸ್ಕರಿಸಿದ್ದರು. ಮಳೆ, ಬಿಸಿಲು ಎಲ್ಲಕ್ಕೂ ಮೈಯೊಡ್ಡಿ ಸಾಕುಮಗನೊಂದಿಗೆ ಜೀವನ ಬಂಡಿ ನಡೆಸುತ್ತಿದ್ದಳು. ಫೌಂಡೇಷನ್ ಸದಸ್ಯರು ಈ ತಾಯಿಯ ಬದುಕನ್ನು ಕಂಡು ಸಹಾಯ ಮಾಡಲೇಬೇಕೆಂದು ನಿರ್ಧರಿಸಿ ಗುಣಮಟ್ಟದ ಶೀಟ್ ಮತ್ತು ಕಲ್ನಾರ್ ಶೀಟ್ ಛಾವಣಿಯೊಂದಿಗೆ ಮನೆ ನಿರ್ಮಿಸಿಕೊಟ್ಟಿದ್ದೇವೆ ಎಂದರು.
ಫೌಂಡೇಷನ್ ಖಜಾಂಚಿ ಅಭಿ ನಾಗಮಂಗಲ, ಪವನ್, ಭರತ್, ಆನಂದ್, ಅಭಿ ಕೊಗೋಲುವಾಡಿ, ಧರ್ಮ, ಚಾಂದಿನಿ, ಚಂದು, ಕಿರಣ್, ಸ್ನೇಕ್ ಅಭಿ, ವೆಲ್ಡಿಂಗ್ ಚಂದನ್ ಮತ್ತಿತರರು ಇದ್ದರು.