ಶಿಸ್ತು, ಪರಿಶ್ರಮದಿಂದ ಯಶಸ್ಸು ಸಾಧ್ಯ

ಕಲ್ಪಿತ ಪರೀಕ್ಷಾ ತರಬೇತಿ ಕಾರ್ಯಕ್ರಮದಲ್ಲಿ ಡಿಸಿಪಿ ಸಿದ್ದನಗೌಡ ವೈ. ಪಾಟೀಲ್ ಮಾತನಾಡಿದರು. ಬಿ.ಮಂಜುನಾಥ್, ಚಂದ್ರಶೇಖರ್,  ಆನಂದ ಇದ್ದರು.
ಕಲ್ಪಿತ ಪರೀಕ್ಷಾ ತರಬೇತಿ ಕಾರ್ಯಕ್ರಮದಲ್ಲಿ ಡಿಸಿಪಿ ಸಿದ್ದನಗೌಡ ವೈ. ಪಾಟೀಲ್ ಮಾತನಾಡಿದರು. ಬಿ.ಮಂಜುನಾಥ್, ಚಂದ್ರಶೇಖರ್, ಆನಂದ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಿಸಿಪಿ ಸಿದ್ದನಗೌಡ ವೈ. ಪಾಟೀಲ್ ಅಭಿಪ್ರಾಯ
ವಿಬಿ 
ಮೈಸೂರು: ಅಭ್ಯರ್ಥಿಗಳು ಶಿಸ್ತು, ಪರಿಶ್ರಮ, ಪ್ರಾಮಾಣಿಕತೆ, ಮೈಗೂಡಿಸಿಕೊಂಡರೆ ಯಾವುದೇ ಸ್ವರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಪಡೆಯಲು ಸಾಧ್ಯ ಎಂದು ನಗರ ಪೊಲೀಸ್ ಮೀಸಲು ಸಶಸ್ತ್ರ ಪಡೆಯ ಉಪ ಆಯುಕ್ತ (ಡಿಸಿಪಿ) ಸಿದ್ದನಗೌಡ ವೈ. ಪಾಟೀಲ್ ಹೇಳಿದರು.
ಸಶಸ್ತ್ರ ಮೀಸಲು ಪೊಲೀಸ್ ಪೇದೆ ಹುದ್ದೆಗಳ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ ಅಂಗವಾಗಿ ನಗರ ಕೇಂದ್ರ ಗ್ರಂಥಾಲಯ ಹಾಗೂ ಜ್ಞಾನ ಗಂಗೋತ್ರಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ ಸಹಯೋಗದಲ್ಲಿ ನಗರದಲ್ಲಿ ಪೀಪಲ್ಸ್ ಪಾರ್ಕ್ ಗ್ರಂಥಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಕಲ್ಪಿತ ಪರೀಕ್ಷೆಯಲ್ಲಿ ಮಾತನಾಡಿದರು.
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳು ಪಾರದರ್ಶಕವಾಗಿ ನಡೆಯುತ್ತಿದ್ದು, ಅಭ್ಯರ್ಥಿಗಳ ಆಯ್ಕೆಯಲ್ಲಿ ಪ್ರತಿಭೆಯೊಂದೇ ಮಾನದಂಡವಾಗಿದೆ ಎಂದರು.
ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಡ್ಡದಾರಿಯ ಮೂಲಕ ಯಶಸ್ಸು ಪಡೆಯಲು ಸಾಧ್ಯವಿಲ್ಲ. ಹೀಗಾಗಿ ಸ್ವಪ್ರತಿಭೆ, ಪರಿಶ್ರಮ ಬಹಳ ಮುಖ್ಯ. ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಹುದ್ದೆಗಳಿಗೆ ಆಯ್ಕೆಯಾಗುತ್ತಿರುವುದು ಉತ್ತಮ ಬೆಳವಣಿಗೆ. 
ಯುವಕರು ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸುವ ಹವ್ಯಾಸ ಬೆಳೆಸಿಕೊಳ್ಳಬೇಕು. ಇದರಿಂದ ಪರೀಕ್ಷೆಯನ್ನು ಎದುರಿಸುವ ಅನುಭವ ಪಡೆಯುವುದರೊಂದಿಗೆ ಸಾಮರ್ಥವುಳ್ಳ ಹಾಗೂ ಆಸಕ್ತಿದಾಯಕ ಇಲಾಖೆಯನ್ನು ಆಯ್ಕೆ ಮಾಡಿಕೊಳ್ಳಲು ಅನುಕೂಲವಾಗುತ್ತದೆ ಎಂದು ಹೇಳಿದರು.
ಯುವಕರು ಕೇವಲ ವೈದ್ಯಕೀಯ, ಇಂಜಿನಿಯರಿಂಗ್ ವೃತ್ತಿಗಳನ್ನು ಹೆಚ್ಚು ಬಯಸುವುದನ್ನು ಬಿಡಬೇಕು. ಇವುಗಳಲ್ಲದೆ ಇನ್ನಿತರ ಕ್ಷೇತ್ರಗಳು ಉತ್ತಮ ಜೀವನಾವಕಾಶ ನೀಡುತ್ತವೆ ಎಂಬುದನ್ನು ಮರೆಯಬಾರದು. ಎಲ್ಲರೂ ವೈದ್ಯರು, ಇಂಜಿನಿಯರ್‌ಗಳೇ ಆದಲ್ಲಿ ಇತರ ವೃತ್ತಿಗಳನ್ನು ಮಾಡುವವರು ಯಾರು? ಯಾವುದೇ ವೃತ್ತಿಗೆ ಪ್ರವೇಶ ಪಡೆದ ಮೇಲೆ ಆ ವೃತ್ತಿಗೆ ತಕ್ಕನಾದ ಗೌರವ ತರುವಂತಹ ಹಾಗೂ ನ್ಯಾಯ ಒದಗಿಸುವಂತಹ ಕಾರ್ಯದಲ್ಲಿ ತೊಡಗಬೇಕು ಎಂದು ಹೇಳಿದರು.
ನಗರ ಕೇಂದ್ರ ಗ್ರಂಥಾಲಯ ಉಪನಿರ್ದೇಶಕ ಬಿ.ಮಂಜುನಾಥ್ ಮಾತನಾಡಿ, ಕೆಎಸ್‌ಆರ್‌ಪಿ ಪೇದೆ ಹುದ್ದೆಗಳಿಗೆ ಆಯ್ಕೆ ಪರೀಕ್ಷೆ ನಡೆಯಲಿದ್ದು, ಇದಕ್ಕೆ ಅನುಗುಣವಾಗಿ 2 ಕಲ್ಪಿತ ಪರೀಕ್ಷೆ ಮುಂದಿನ ದಿನಗಳಲ್ಲಿ ನಡೆಸಲಾಗುವುದು. ಕೆಎಎಸ್ ಇನ್ನಿತರ ಪರೀಕ್ಷೆಗಳಿಗೂ ಇದೇ ರೀತಿ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
ಸಹಾಯಕ ಪೊಲೀಸ್ ಆಯುಕ್ತ ಚಂದ್ರಶೇಖರ್, ಪೊಲೀಸ್ ಇನ್‌ಸ್ಪೆಕ್ಟರ್ ಆನಂದ ಉಪಸ್ಥಿತರಿದ್ದರು. ಕಲ್ಪಿತ ಪರೀಕ್ಷೆಯಲ್ಲಿ 60ಉದ್ಯೋಗಾಕ್ಷಾಂಕಿಗಳು ಹಾಜರಾಗಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net