ಪಿರಿಯಾಪಟ್ಟಣದ ಡಿ.ದೇವರಾಜ ಅರಸು ಭವನದಲ್ಲಿ ವೀರಶೈವ ಲಿಂಗಾಯತ ಸರ್ಕಾರಿ ನೌಕರರ ಸಂಘದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ನೌಕರರಿಗೆ ಸನ್ಮಾನ ಮಾಡಲಾಯಿತು. ಉಪ ವಿಭಾಗಾಧಿಕಾರಿ ನಾಗಪ್ರಶಾಂತ, ಮಾಜಿ ಶಾಸಕ ಎಚ್.ಸಿ.ಬಸವರಾಜು, ಪರಮಶಿವಯ್ಯ, ಎಚ್.ಟಿ.ಪರಮೇಶ್ ಇತರರು ಇದ್ದರು.
ಪಿರಿಯಾಪಟ್ಟಣ: ನಿರಂತರ ಪರಿಶ್ರಮ ಹಾಗೂ ಪ್ರಯತ್ನದಿಂದ ಯಶಸ್ಸು ಗಳಿಸಲು ಸಾಧ್ಯ ಎಂದು ಉಪ ವಿಭಾಗಾಧಿಕಾರಿ ನಾಗಪ್ರಶಾಂತ ತಿಳಿಸಿದರು.
ಪಟ್ಟಣದ ಡಿ.ದೇವರಾಜ ಅರಸು ಭವನದಲ್ಲಿ ತಾಲೂಕು ವೀರಶೈವ ಲಿಂಗಾಯತ ಸರ್ಕಾರಿ ನೌಕರರ ಸಂಘದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ನೌಕರರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯಶಸ್ಸು ಎಂಬುದು ಒಂದು ಕಲ್ಪನೆ ಅಲ್ಲ ಬದಲಾಗಿ ನಿರಂತರ ಪ್ರಯತ್ನಗಳಿಂದ ದೊರೆಯುವ ಬಹುದೊಡ್ಡ ಅಂಶ. ಇದನ್ನು ವಿದ್ಯಾರ್ಥಿಗಳು ಅರಿತು ಜೀವನದಲ್ಲಿ ಸಾಧನೆಗೆ ಮುಂದಾಗಬೇಕು ಎಂದರು. ಸೋಲುಗಳಿಂದ ಹಿಮ್ಮುಖವಾಗದೆ ಅವುಗಳನ್ನು ಮೆಟ್ಟಿಲ್ಲನ್ನಾಗಿ ಮಾಡಿಕೊಂಡು ಗೆಲುವಿನ ಕಡೆ ಮುಂದಾಗಬೇಕು ಎಂದು ತಿಳಿಸಿದರು.
ವೀರಶೈವ ಸಮಾಜದಲ್ಲಿ ಹುಟ್ಟಿರುವುದಕ್ಕೆ ಪ್ರತಿಯೊಬ್ಬರೂ ಹೆಮ್ಮೆ ಪಡಬೇಕು. ಸಮಾಜದ ಸಂಘಟನೆಗಳು ಕೇವಲ ಸಮಾರಂಭಗಳಿಗೆ ಸೀಮಿತವಾಗದೆ ಆದಾಯದ ಮೂಲಗಳನ್ನು ಹುಡುಕಿ, ಆದಾಯವನ್ನು ಹೆಚ್ಚಿಸಿಕೊಂಡಾಗ ಮಾತ್ರ ಸಂಘ ಸಂಸ್ಥೆಗಳಿಗೆ ಹೆಚ್ಚಿನ ಬಲ ಬರುತ್ತದೆ ಎಂದರು. ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ್ದರೆ ಮಾತ್ರ ಸಂಘ, ಸಂಸ್ಥೆಗಳು ಕೊನೆಯವರೆಗೂ ಸಮಾಜಮುಖಿಯಾಗಿ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಮಾಜಿ ಶಾಸಕ ಎಚ್.ಸಿ.ಬಸವರಾಜು ಮಾತನಾಡಿ, ತಾಲೂಕಿನಲ್ಲಿ ವೀರಶೈವ ಸಂಘಟನೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಇದಕ್ಕೆ ಎಲ್ಲರೂ ಪ್ರೋತ್ಸಾಹ ನೀಡಬೇಕು. ಆರ್ಥಿಕ ಸಬಲೀಕರಣದ ಬಗ್ಗೆ ಪ್ರತಿಯೊಂದು ಸಂಘ ಕೂಡ ಚಿಂತನೆ ನಡೆಸಬೇಕು ಎಂದು ತಿಳಿಸಿದರು.
ತಾಲೂಕು ವೀರಶೈವ ಲಿಂಗಾಯತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪರಮಶಿವಯ್ಯ ಮಾತನಾಡಿ, ವೀರಶೈವ ಸರ್ಕಾರಿ ನೌಕರರ ಹಿತ ಕಾಯುವಲ್ಲಿ ಸಂಘ ಕರ್ತವ್ಯ ನಿರ್ವಹಿಸಿಕೊಂಡು ಬರುತ್ತಿದ್ದು, ಸಮಾಜದಲ್ಲಿನ ವಿದ್ಯಾವಂತ ಯುವಕರನ್ನು ಗುರುತಿಸಿ ಪ್ರೋತ್ಸಾಹಿಸಲಾಗುತ್ತಿದೆ ಎಂದು ತಿಳಿಸಿದರು.
ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಎಚ್.ಟಿ.ಪರಮೇಶ್ ಮಾತನಾಡಿದರು.
ಈ ಸಂದರ್ಭದಲ್ಲಿ ಉದ್ಯಮಿ ನಾಗಪ್ಪ, ಮಲೆಮಾದೇಶ್ವರ ಪ್ರಾಧಿಕಾರದ ನಿರ್ದೇಶಕ ಕುಮಾರವಿಜಿ, ಕೇಂದ್ರ ರೇಷ್ಮೆ ಮಂಡಳಿ ನಿರ್ದೇಶಕ ನಂಜುಂಡಸ್ವಾಮಿ, ಜಲಮಂಡಳಿ ನಿರ್ದೇಶಕರಾದ ಸುನೀಲ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ನೌಕರ ಡಾ.ಸದಾಶಿವ, ಶಿವಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಬೆಟ್ಟದಪುರ ಮಠದ ಚನ್ನಬಸವ ದೇಶಕೇಂದ್ರ ಸ್ವಾಮೀಜಿ, ತಣ್ಣೀರುಹಳ್ಳ ಮಠದ ವಿಜಯಕುಮಾರ ಸ್ವಾಮೀಜಿ, ಎಲೆಮುದ್ದನಹಳ್ಳಿ ಮತ್ತು ತೋರೆನೂರು ಮಠಗಳ ಸ್ವಾಮೀಜಿಗಳು, ಮುಖಂಡರಾದ ಕೆ.ಹೊಲದಪ್ಪ, ರಾಜಶೇಖರ್, ಶಿವಮೂರ್ತಿ, ಮಹದೇವಪ್ಪ, ಶಿವಪ್ಪ, ಡಾ.ಮಧುಸೂದನ್ ಮತ್ತಿತರರು ಹಾಜರಿದ್ದರು.