ಪಠ್ಯೇತರ ಚಟುವಟಿಕೆಗಳಲ್ಲೂ ವಿದ್ಯಾರ್ಥಿಗಳ ನಿರ್ಲಕ್ಷೃ: ಶಾಸಕ ಜಿ.ಟಿ.ದೇವೇಗೌಡ ವಿಷಾದ
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ನಗರದಲ್ಲಿ ಆಯೋಜಿಸಿದ್ದ ಅಂತರ ಕಾಲೇಜು ಕ್ರೀಡಾಕೂಟದಲ್ಲಿ ವಿಜೇತ ತಂಡಗಳಿಗೆ ಜಿ.ಟಿ.ದೇವೇಗೌಡ ಬಹುಮಾನ ವಿತರಿಸಿದರು. ಡಾ.ವಿಷ್ಣುವರ್ಧನ್, ಡಾ.ಎಸ್.ಬಿ.ದಂಡಿನ್, ಡಾ.ಚಂದ್ರಶೇಖರ್, ಮಂಜುಳಾ ಇತರರು ಇದ್ದರು.
ಆಧುನಿಕ ಗೀಳುಗಳನ್ನು ಬಿಟ್ಟು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ
ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಿ
ಮೈಸೂರು: ಇತ್ತೀಚಿನ ವರ್ಷಗಳಲ್ಲಿ ವಿದ್ಯಾರ್ಥಿಗಳು ಬೋಧನೆಯ ಜತೆಗೆ ಇತರ ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಮಾನತೆ ಕಾಪಾಡಿಕೊಳ್ಳುವಲ್ಲಿ ನಿರ್ಲಕ್ಷೃ ವಹಿಸುತ್ತಿದ್ದಾರೆ ಎಂದು ಶಾಸಕ ಜಿ.ಟಿ.ದೇವೇಗೌಡ ವಿಷಾದಿಸಿದರು.
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ನಗರದಲ್ಲಿ ಆಯೋಜಿಸಿದ್ದ ತೋಟಗಾರಿಗೆ ಮಹಾವಿದ್ಯಾಲಯ ಅಂತರ ಕಾಲೇಜು ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಓದುವುದು ಸೇರಿದಂತೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಸೇರಿದಂತೆ ಇನ್ನಿತರ ರಂಗದಲ್ಲಿ ತೊಡಗಿಸಿಕೊಳ್ಳುವುದು ಕಡಿಮೆಯಾಗಿದೆ. ಇತ್ತೀಚೆಗೆ ಮೊಬೈಲ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಗೀಳಿಗೆ ಅಂಟಿಕೊಂಡಿದ್ದಾರೆ. ಈ ಆಧುನಿಕ ಗೀಳುಗಳನ್ನು ಬಿಟ್ಟು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರಾಜ್ಯದ 10 ಮಹಾವಿದ್ಯಾಲಯಗಳಿಂದ ಆಗಮಿಸಿರುವ 630 ವಿದ್ಯಾರ್ಥಿಗಳು ಭಾಗವಹಿಸಿರುವುದು ಸಂತೋಷದ ವಿಚಾರ. ತೋಟಗಾರಿಕೆ ಮಹಾವಿದ್ಯಾಲಯವು 2010 ರಲ್ಲಿ ಆರಂಭವಾಗಿ 15 ವರ್ಷಗಳನ್ನು ಯಶಸ್ವಿಯಾಗಿ ಮುಂದುವರಿಸಿದೆ ಎಂದರು.
ವಿದ್ಯಾರ್ಥಿಗಳ ಸಾಧನೆಯಿಂದಾಗಿ ಮೈಸೂರು ಕಾಲೇಜು ರಾಜ್ಯಮಟ್ಟದ ತೋಟಗಾರಿಕೆ ವಿಭಾಗದಲ್ಲಿ ಅತ್ಯುನ್ನತ ಸ್ಥಾನದಲ್ಲಿದೆ. ವಿದ್ಯಾರ್ಥಿಗಳಲ್ಲಿ ಇರುವ ಹಲವಾರು ಪ್ರತಿಭೆಗಳನ್ನು ಹೊರ ಹಾಕಿ ಅವರ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಕ್ರೀಡೆಗೆ ಅಪರಿಮಿತ ಕೊಡುಗೆ ನೀಡಿರುವ ಸಾಂಸ್ಕೃತಿಕ ನಗರಿ ಮೈಸೂರಿಗೆ ಪ್ರತಿವರ್ಷ ನಡೆಯುವ ದಸರಾ ಮಹೋತ್ಸವದ ವೇಳೆ ಕ್ರೀಡಾಪಟುಗಳನ್ನು ಬರಮಾಡಿಕೊಂಡು ರಾಜ್ಯಮಟ್ಟದ ದಸರಾ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗುತ್ತದೆ.
ತೋಟಗಾರಿಕೆ ಮಹಾವಿದ್ಯಾಲಯವು ಸಿಎಫ್‌ಟಿಆರ್‌ಐ, ಡಿಎಫ್‌ಆರ್‌ಎಲ್ನೊಂದಿಗೆ ಒಡಂಬಡಿಕೆ ಮಾಡಿಕೊಂಡು ಹೊಸ ಹೊಸ ಆವಿಷ್ಕಾರಗಳನ್ನು ಕೈಗೊಳ್ಳಲಾಗುತ್ತಿದೆ. ಅವರೊಂದಿಗೆ ಜತೆಗೂಡಿ ರೈತರ ಅಭ್ಯುದಯಕ್ಕಾಗಿ ಕೃಷಿ ಭೂಮಿಯನ್ನು ವಿಸ್ತರಿಸಿ ತಾಂತ್ರಿಕತೆಗಳನ್ನು ಕೊಡಲಾಗುತ್ತಿದೆ. ರೈತರ ಅನುಕೂಲಕ್ಕಾಗಿ ಮತ್ತು ತೋಟಗಾರಿಕೆ ಬೆಳೆಗಳಲ್ಲಿ ಆದಾಯ ತರುವಂತೆ ಮಾಡಲು ಹೆಚ್ಚಿನ ಸಂಶೋಧನೆ ಮಾಡಲು ಗಮನಹರಿಸಬೇಕು ಎಂದು ಹೇಳಿದರು.
ಮೈಸೂರು ಜಿಲ್ಲೆಯ ಜಿಐ ಬೆಳೆಯಾದ ನಂಜನಗೂಡು ರಸಬಾಳೆ ಬೆಳೆಯ ಪ್ರದೇಶವನ್ನು 60 ಎಕರೆಯಷ್ಟು ಪ್ರದೇಶದಲ್ಲಿ ವಿಸ್ತರಿಸಲಾಗಿದ್ದು, ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ಕ್ರಮಕೈಗೊಳ್ಳಲಾಗುತ್ತಿದೆ. ವೈಜ್ಞಾನಿಕ ರೀತಿಯಲ್ಲಿ ಹಲವಾರು ಸಂಶೋಧನೆಗಳನ್ನು ಸರ್ಕಾರ ಹಾಗೂ ಇನ್ನಿತರ ಸಂಸ್ಥೆಗಳೊಂದಿಗೆ ಮಹಾವಿದ್ಯಾಲಯದ ವಿಜ್ಞಾನಿಗಳು ಕೈಗೊಂಡಿರುವುದು ಶ್ಲಾಘನೀಯ ಎಂದರು.
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ವಿಷ್ಣುವರ್ಧನ್, ವಿಶ್ರಾಂತ ಕುಲಪತಿ ಡಾ.ಎಸ್.ಬಿ.ದಂಡಿನ್, ಉಪ ನಿರ್ದೇಶಕ ಡಾ.ಚಂದ್ರಶೇಖರ್, ಗ್ರಾಪಂ ಅಧ್ಯಕ್ಷೆ ಮಂಜುಳಾ ಇತರರಿದ್ದರು.