ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ಪಿಯುಸಿ ಪರೀಕ್ಷೆ ಎದುರಿಸಿದ ವಿದ್ಯಾರ್ಥಿಗಳು

 ಮೈಸೂರು ನಗರದಲ್ಲಿ ಶನಿವಾರ ಪಿಯುಸಿ ಪರೀಕ್ಷೆಯನ್ನು ವಿದ್ಯಾರ್ಥಿಗಳು ಎದುರಿಸಿದರು.
ಮೈಸೂರು ನಗರದಲ್ಲಿ ಶನಿವಾರ ಪಿಯುಸಿ ಪರೀಕ್ಷೆಯನ್ನು ವಿದ್ಯಾರ್ಥಿಗಳು ಎದುರಿಸಿದರು.
Published on
ಮೈಸೂರು: ಜಿಲ್ಲೆಯಲ್ಲಿ ಶನಿವಾರದಿಂದ ಪಿಯುಸಿ ಪರೀಕ್ಷೆ ಪ್ರಾರಂಭವಾಗಿದ್ದು, ಮೊದಲ ದಿನ 51 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಸುಸೂತ್ರವಾಗಿ ನಡೆಯಿತು.
ಮೊದಲ ದಿನ ಕನ್ನಡ ಹಾಗೂ ಅರೇಬಿಕ್ ಪತ್ರಿಕೆಗಳ ಪರೀಕ್ಷೆ ನಡೆಯಿತು. ಜಿಲ್ಲೆಯಲ್ಲಿ ಒಟ್ಟು 35,835 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಕನ್ನಡ ಪರೀಕ್ಷೆಗೆ ಒಟ್ಟು 28,865 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಈ ಪೈಕಿ 28,350 ವಿದ್ಯಾರ್ಥಿಗಳು (ಶೇ.98.21) ಪರೀಕ್ಷೆ ಎದುರಿಸಿದ್ದು, 515 ವಿದ್ಯಾರ್ಥಿಗಳು ಗೈರು ಹಾಜರಾದರು. ಅರೇಬಿಕ್ ಪರೀಕ್ಷೆಗೆ ಇಬ್ಬರು ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು, ಇಬ್ಬರು ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದರು. ಮೈಸೂರು ನಗರದ 28, ಎಚ್.ಡಿ.ಕೋಟೆ ತಾಲೂಕಿನ 3, ಪಿರಿಯಾಪಟ್ಟಣ-4, ತಿ.ನರಸೀಪುರ-4, ಕೆ.ಆರ್.ನಗರ-3, ನಂಜನಗೂಡು-5, ಹುಣಸೂರು ತಾಲೂಕಿನಲ್ಲಿ 4 ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದರು.
ಜಿಲ್ಲಾ ಖಜಾನೆಯಲ್ಲಿ ಪ್ರಶ್ನೆ ಪತ್ರಿಕೆ ಇಡಲಾಗಿತ್ತು. ಬೆಳಗ್ಗೆ ಖಜಾನೆಯಿಂದ ಪ್ರಶ್ನೆ ಪತ್ರಿಕೆಗಳನ್ನು ಪರೀಕ್ಷಾ ಕೇಂದ್ರಗಳಿಗೆ ವಿತರಣೆ ಮಾಡಲಾಯಿತು. ಖಜಾನೆಯ ಹೊರಗೆ ಮತ್ತು ಒಳಗೆ ದಿನದ 24 ಗಂಟೆ ಕಾರ್ಯ ನಿರ್ವಹಿಸುವ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.
ಪರೀಕ್ಷೆ ಸುಸೂತ್ರವಾಗಿ ನಡೆಯಲು ಪರೀಕ್ಷಾ ಕೇಂದ್ರದ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ವಿಧಿಸಲಾಗಿತ್ತು. ಪ್ರತಿಯೊಂದು ಪರೀಕ್ಷಾ ಕೇಂದ್ರಕ್ಕೆ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಆಯಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ಗಳು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಭದ್ರತೆಯನ್ನು ಪರಿಶೀಲಿಸಿದರು. ಪರೀಕ್ಷಾ ಕೇಂದ್ರದೊಳಗೆ ಪರೀಕ್ಷಾ ಸಿಬ್ಬಂದಿ ಹೊರತುಪಡಿಸಿ ಬೇರೆಯವರಿಗೆ ತೆರಳಲು ಅವಕಾಶ ಇರಲಿಲ್ಲ. ಪರೀಕ್ಷಾ ಕೇಂದ್ರದ ಸುತ್ತಮುತ್ತ ಇರುವ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಲಾಗಿತ್ತು. ಆ ಮೂಲಕ ಯಾವುದೇ ಪರೀಕ್ಷಾ ಅಕ್ರಮ ನಡೆಯದಂತೆ ಎಚ್ಚರ ವಹಿಸಲಾಗಿತ್ತು.
ಕ್ಯಾಮರಾ ಕಣ್ಗಾವಲು: ಪರೀಕ್ಷೆಯಲ್ಲಿ ಯಾವುದೇ ನಕಲು, ಅಕ್ರಮ ತಡೆಯಲು ಪರೀಕ್ಷಾ ಕೇಂದ್ರದಲ್ಲಿ ಸಿಸಿ ಕ್ಯಾಮರಾ ಕಣ್ಗಾವಲು ಇರಿಸಲಾಗಿತ್ತು. ಈ ಸಿಸಿ ಕ್ಯಾಮರಾಗಳನ್ನು ವೆಬ್ ಕಾಸ್ಟಿಂಗ್ ವ್ಯವಸ್ಥೆ ಮೂಲಕ ಜಿಲ್ಲಾ ಕೇಂದ್ರದಲ್ಲಿ ಕುಳಿತು ವೀಕ್ಷಿಸಲಾಯಿತು. ವೆಬ್ ಕಾಸ್ಟಿಂಗ್ ಕೇಂದ್ರದಲ್ಲಿ ಪರೀಕ್ಷಾ ಕೇಂದ್ರಗಳ ವೀಕ್ಷಣೆಗೆ 10 ಉಪನ್ಯಾಸಕರ ತಂಡ ಕಾರ್ಯನಿರ್ವಹಿಸಿತು.
ಜಿಲ್ಲೆಯಲ್ಲಿ ಪಿಯುಸಿ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ. ಮೊದಲ ದಿನ ಕನ್ನಡ ಹಾಗೂ ಅರೇಬಿಕ್ ಪರೀಕ್ಷೆ ನಡೆದಿದೆ. ಕನ್ನಡ ಪರೀಕ್ಷೆಯನ್ನು ಶೇ.98.21, ಅರೇಬಿಕ್ ಪರೀಕ್ಷೆಯನ್ನು ಶೇ.100 ವಿದ್ಯಾರ್ಥಿಗಳು ಎದುರಿಸಿದ್ದಾರೆ. ನಕಲು ತಡೆಯಲು ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಜಿಲ್ಲೆಯ ಯಾವುದೇ ಪರೀಕ್ಷಾ ಕೇಂದ್ರಗಳಲ್ಲಿ ನಕಲು ಮಾಡಿರುವ ಪ್ರಕರಣಗಳು ನಡೆದಿಲ್ಲ.
ಎಂ.ಸಿ.ನಾಗಮ್ಮ, ಉಪ ನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net