ಪಾರ್ಶ್ವವಾಯು: ಪ್ರತಿ ನಿಮಿಷವೂ ಅಮೂಲ್ಯ

 ಪ್ರತಿ ನಿಮಿಷವೂ ಅಮೂಲ್ಯ
ಪ್ರತಿ ನಿಮಿಷವೂ ಅಮೂಲ್ಯ
Published on

ಪ್ರಮುಖ ಮುಖ್ಯಾಂಶಗಳು

  • ತಲೆಗೆ ಗಾಯ ಹಾಗೂ ಹಠಾತ್ ಹೃದಯಾಘಾತದ ಪರಿಸ್ಥಿತಿಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ ಮಣಿಪಾಲ್ ಆಸ್ಪತ್ರೆ
  • ತುರ್ತು ಸಂದರ್ಭಗಳಲ್ಲಿ ತಕ್ಷಣದ ವೈದ್ಯಕೀಯ ಚಿಕಿತ್ಸೆಯ ಮಹತ್ವ ಸಾರಿದ ತಜ್ಞರು
ಸಮಯೋಚಿತ ತುರ್ತು ಚಿಕಿತ್ಸೆಯ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಹೆಚ್ಚಿಸುವ ಉದ್ದೇಶದಿಂದ, ಮಣಿಪಾಲ್ ಆಸ್ಪತ್ರೆ ಮೈಸೂರು ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿತು. ಈ ಕಾರ್ಯಕ್ರಮದಲ್ಲಿ ಡಾ. ಮಕ್ಸೂದ್ ಅಹ್ಮದ್ ಎ.ಆರ್., ಸೀನಿಯರ್ ಕನ್ಸಲ್ಟೆಂಟ್ - ನ್ಯೂರೋಸರ್ಜನ್ (ಸೆರೆಬ್ರೊವಾಸ್ಕುಲರ್ ಮತ್ತು ಎಂಡೋವಾಸ್ಕುಲರ್), ಡಾ. ಸಿ. ಬಿ. ಕೇಶವಮೂರ್ತಿ, ಸೀನಿಯರ್ ಕನ್ಸಲ್ಟೆಂಟ್ -ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್, ಡಾ. ಉಪೇಂದ್ರ ಶೆಣೈ, ಮುಖ್ಯ ವೈದ್ಯಕೀಯ ಸೇವೆಗಳ ಮುಖ್ಯಸ್ಥರು ಹಾಗೂ ಸೀನಿಯರ್ ಕನ್ಸಲ್ಟೆಂಟ್ - ಕಾರ್ಡಿಯೊಥೊರಾಸಿಕ್ ಮತ್ತು ವಾಸ್ಕ್ಯುಲರ್ ಸರ್ಜನ್ (CTVS), ಹಾಗೂ ಸಂದೀಪ್ ಪಟೇಲ್ ಬಿ.ಜೆ., ಆಸ್ಪತ್ರೆ ನಿರ್ದೇಶಕರು, ಮಣಿಪಾಲ್ ಆಸ್ಪತ್ರೆ ಮೈಸೂರು ಭಾಗವಹಿಸಿ, ಮೆದುಳಿನ ತುರ್ತು ಪರಿಸ್ಥಿತಿಗಳು ಮತ್ತು ಹಠಾತ್ ಹೃದಯ ತುರ್ತು ಪರಿಸ್ಥಿತಿಗಳ ಕುರಿತು ಸಾರ್ವಜನಿಕರಿಗೆ ಮಹತ್ವದ ಮಾಹಿತಿಯನ್ನು ಹಂಚಿಕೊಂಡರು.
ಈ ಮಾಧ್ಯಮ ಸಂವಾದದ ಉದ್ದೇಶ ಪಾರ್ಶ್ವವಾಯು, ತಲೆಗೆ ಗಾಯ ಹಾಗೂ ಹೃದಯ ಸಂಬಂಧಿತ ತುರ್ತು ಪರಿಸ್ಥಿತಿಗಳ ಲಕ್ಷಣಗಳನ್ನು ಶೀಘ್ರವಾಗಿ ಗುರುತಿಸುವುದು ಮತ್ತು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯುವ ಮಹತ್ವದ ಕುರಿತು ಅರಿವು ಮೂಡಿಸುವುದಾಗಿತ್ತು. ಮಣಿಪಾಲ್ ಆಸ್ಪತ್ರೆ, ಮೈಸೂರು ಮಾತ್ರವಲ್ಲದೆ ಮಂಡ್ಯ, ಕೊಡಗು, ಚಾಮರಾಜನಗರ, ಹಾಸನ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಿಂದ ಬರುವ ನರಶಸ್ತ್ರಚಿಕಿತ್ಸೆ, ಪಾರ್ಶ್ವವಾಯು, ಅಪಘಾತ ಹಾಗೂ ಹೃದಯ ಸಂಬಂಧಿತ ತುರ್ತು ಸಂದರ್ಭಗಳಲ್ಲಿ ಉನ್ನತ ಮಟ್ಟದ ಚಿಕಿತ್ಸೆ ನೀಡುತ್ತಿರುವ ಪ್ರಮುಖ ವಿಶೇಷ ತಜ್ಞರ ಸೇವೆಗಳನ್ನು ಒದಗಿಸುವ ಪ್ರಮುಖ ಆಸ್ಪತ್ರೆಯಾಗಿದೆ. ಸಮಯಕ್ಕೆ ಸರಿಯಾದ ಚಿಕಿತ್ಸೆ ಅನೇಕ ಬಾರಿ ಜೀವ ಉಳಿಸುವುದಲ್ಲದೆ, ಶಾಶ್ವತ ಅಂಗವೈಕಲ್ಯವನ್ನು ತಡೆಯಲು ಸಹ ನೆರವಾಗುತ್ತದೆ ಎಂದು ವೈದ್ಯರು ತಿಳಿಸಿದರು.

ರಸ್ತೆ ಅಪಘಾತಗಳು ಮತ್ತು ತಲೆಗೆ ಗಾಯ – ಜೀವ ಉಳಿಸುವ ಸುವರ್ಣ ಸಮಯ

ಡಾ. ಮಕ್ಸೂದ್ ಅಹ್ಮದ್ ಅವರು ರಸ್ತೆ ಅಪಘಾತಗಳಿಂದ ಉಂಟಾಗುತ್ತಿರುವ ತಲೆಗೆ ಗಾಯಗಳ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. "ತಲೆಗೆ ಗಾಯವಾದ ತಕ್ಷಣ ವ್ಯಕ್ತಿ ಸಾಮಾನ್ಯವಾಗಿ ಮಾತನಾಡಬಹುದು, ನಡೆಯಬಹುದು ಅಥವಾ ತಾನು ಚೆನ್ನಾಗಿದ್ದೇನೆ ಎಂದು ಹೇಳಬಹುದು. ಆದರೆ ಮೆದುಳಿನ ಒಳಗೆ ರಕ್ತಸ್ರಾವವು ನಿಧಾನವಾಗಿ ಹೆಚ್ಚಾಗುತ್ತಿರಬಹುದು. ಲಕ್ಷಣಗಳು ಕಾಣುವವರೆಗೆ ಕಾಯುವುದು ಅಪಾಯಕಾರಿಯಾಗಬಹುದು. ಆದ್ದರಿಂದ ತಕ್ಷಣ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳುವುದು ಅತ್ಯಂತ ಮುಖ್ಯ." ಎಂದು ಅವರು ಹೇಳಿದರು.
ಅವರು, ಮೆದುಳಿನ ಸ್ಕ್ಯಾನ್, ತಕ್ಷಣದ ವೈದ್ಯಕೀಯ ತಪಾಸಣೆ ಹಾಗೂ ಅಗತ್ಯವಿದ್ದಲ್ಲಿ ತುರ್ತು ಶಸ್ತ್ರಚಿಕಿತ್ಸೆ ನಡೆಸುವುದರಿಂದ ರೋಗಿಯ ಚೇತರಿಕೆಯಲ್ಲಿ ಮಹತ್ತರ ಬದಲಾವಣೆ ತರಬಹುದು ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ರಸ್ತೆ ಅಪಘಾತದಲ್ಲಿ ತಲೆಗೆ ಗಂಭೀರ ಗಾಯಗೊಂಡಿದ್ದ ಯುವಕನೊಬ್ಬನ ಯಶಸ್ವಿ ಚಿಕಿತ್ಸೆಯ ಉದಾಹರಣೆಯನ್ನು ಅವರು ಹಂಚಿಕೊಂಡರು. ಆರಂಭದಲ್ಲಿ ಸಾಮಾನ್ಯವಾಗಿದ್ದ ರೋಗಿಯಲ್ಲಿ ನಂತರ ಎಪಿಡ್ಯುರಲ್ ರಕ್ತಸ್ರಾವ ಕಂಡುಬಂದಿದ್ದು, ತಕ್ಷಣ ಶಸ್ತ್ರಚಿಕಿತ್ಸೆ ನಡೆಸಿದ ಪರಿಣಾಮ ಅವರು ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಈ ಘಟನೆ "ಸುವರ್ಣ ಸಮಯ"ದ ಮಹತ್ವವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಹೇಳಿದರು.
"ರಸ್ತೆ ಸುರಕ್ಷತೆಯು ಪ್ರತಿಯೊಬ್ಬ ನಾಗರಿಕನ ಸಾಮಾಜಿಕ ಜವಾಬ್ದಾರಿ. ಹೆಲ್ಮೆಟ್ ಧರಿಸುವುದು, ಸಂಚಾರ ನಿಯಮಗಳನ್ನು ಪಾಲಿಸುವುದು ಮತ್ತು ಅಪಘಾತಕ್ಕೊಳಗಾದವರಿಗೆ ತಕ್ಷಣ ವೈದ್ಯಕೀಯ ನೆರವು ಒದಗಿಸುವುದರಿಂದ ಜೀವಗಳನ್ನು ಉಳಿಸಬಹುದು." ಎಂದು ಅವರು ಕರೆ ನೀಡಿದರು.

ಪಾರ್ಶ್ವವಾಯು: ಲಕ್ಷಣ ಬೇಗ ಗುರುತಿಸಿ

"ಪಾರ್ಶ್ವವಾಯು ಲಕ್ಷಣಗಳ ನಿರ್ಲಕ್ಷ್ಯದಿಂದ ಜನ ಮಾತು ಮತ್ತು ಚಲನೆ ಕಳೆದುಕೊಳ್ಳುತ್ತಿದ್ದಾರೆ," ಎಂದು ಡಾ. ಮಕ್ಸೂದ್ ಆತಂಕ ವ್ಯಕ್ತಪಡಿಸಿದರು. ಇದಕ್ಕಾಗಿ ಸಾರ್ವಜನಿಕರು BE-FAST ಸೂತ್ರವನ್ನು (ಬ್ಯಾಲೆನ್ಸ್ ತಪ್ಪುವುದು, ದೃಷ್ಟಿ ಮಂಜಾಗುವುದು, ಮುಖ ವಾಲುವಿಕೆ, ತೋಳಿನ ದೌರ್ಬಲ್ಯ, ಮಾತಿನ ತೊಂದರೆ ಮತ್ತು ತಕ್ಷಣದ ಪ್ರತಿಕ್ರಿಯೆಯ ಸಮಯ) ನೆನಪಿಟ್ಟುಕೊಳ್ಳಬೇಕು. ಸಕಾಲದಲ್ಲಿ ಆಸ್ಪತ್ರೆ ತಲುಪಿದರೆ ರಕ್ತಗಡ್ಡೆ ಕರಗಿಸುವ ಔಷಧಿ ಹಾಗೂ ಅತ್ಯಾಧುನಿಕ ಮೆಕ್ಯಾನಿಕಲ್ ಥ್ರಾಂಬೆಕ್ಟಮಿ ಚಿಕಿತ್ಸೆಗಳ ಮೂಲಕ ರೋಗಿಯ ಚೇತರಿಕೆಯನ್ನು ಗಮನಾರ್ಹವಾಗಿ ಸುಧಾರಿಸಬಹುದು
ಇತ್ತೀಚಿನ ದಿನಗಳಲ್ಲಿ ಯುವಕರು ಹಾಗೂ ಮಧ್ಯವಯಸ್ಕರಲ್ಲಿ ಹೃದಯ ಸಂಬಂಧಿತ ತುರ್ತು ಪರಿಸ್ಥಿತಿಗಳು ಹೆಚ್ಚಾಗುತ್ತಿದ್ದು, ಇವುಗಳಿಗೆ ಮಧುಮೇಹ, ರಕ್ತದೊತ್ತಡ, ಧೂಮಪಾನ, ಅತಿಯಾದ ದೇಹದ ತೂಕ, ಒತ್ತಡ, ನಿದ್ರೆಯ ಕೊರತೆ, ಮತ್ತು ವ್ಯಾಯಾಮದ ಅಭಾವದಂತಹ ಹಲವು ಅಂಶಗಳು ಪ್ರಮುಖ ಕಾರಣಗಳಾಗಿವೆ ಎಂದು ಡಾ. ಸಿ. ಬಿ. ಕೇಶವಮೂರ್ತಿ ಅವರು ವಿವರಿಸಿದರು. ಹೃದಯದ ಕಾಯಿಲೆಗಳು ಒಂದೇ ದಿನದಲ್ಲಿ ಉಂಟಾಗುವುದಿಲ್ಲವಾದ್ದರಿಂದ, ಎದೆಭಾರ, ಉಸಿರಾಟದ ತೊಂದರೆ, ಸುಸ್ತು, ಹೃದಯ ಬಡಿತದಲ್ಲಿ ವ್ಯತ್ಯಾಸ ಹಾಗೂ ವ್ಯಾಯಾಮ ಮಾಡುವ ಸಾಮರ್ಥ್ಯ ಕಡಿಮೆಯಾಗುವಂತಹ ಲಕ್ಷಣಗಳನ್ನು ಎಂದಿಗೂ ನಿರ್ಲಕ್ಷಿಸಬಾರದು. ಸಮಯಕ್ಕೆ ಸರಿಯಾಗಿ ತಪಾಸಣೆ ಮತ್ತು ಚಿಕಿತ್ಸೆ ಪಡೆಯುವುದರಿಂದ ಗಂಭೀರ ಹೃದಯ ತುರ್ತು ಪರಿಸ್ಥಿತಿಗಳನ್ನು ತಪ್ಪಿಸಬಹುದಾಗಿದ್ದು, ಸಾರ್ವಜನಿಕರು ಆರೋಗ್ಯಕರ ಜೀವನಶೈಲಿ, ನಿಯಮಿತ ಆರೋಗ್ಯ ತಪಾಸಣೆ ಹಾಗೂ ಹೃದಯ ತಜ್ಞರ ಸಲಹೆಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಮತ್ತೊಂದೆಡೆ, ಡಾ. ಉಪೇಂದ್ರ ಶೆಣೈ ಅವರು ಮಾತನಾಡಿ, “ಮೆದುಳು ಮತ್ತು ಹೃದಯ ಸಂಬಂಧಿತ ತುರ್ತು ಪರಿಸ್ಥಿತಿಗಳಲ್ಲಿ ಸಮಯೋಚಿತ ಚಿಕಿತ್ಸೆ ಹಾಗೂ ವಿವಿಧ ತಜ್ಞರ ಸಮನ್ವಯ ಅತ್ಯಂತ ಅಗತ್ಯ. ಇಂತಹ ಗಂಭೀರ ಸಂದರ್ಭಗಳಲ್ಲಿ ಪ್ರತಿಯೊಂದು ನಿಮಿಷವೂ ಅತ್ಯಂತ ಅಮೂಲ್ಯವಾಗಿದ್ದು, ಅದು ರೋಗಿಯ ಜೀವ ಹಾಗೂ ಭವಿಷ್ಯದ ಜೀವನದ ಗುಣಮಟ್ಟವನ್ನು ನಿರ್ಧರಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ." ಎಂದು ಒತ್ತಿಹೇಳಿದರು.
ಈ ಸಂದರ್ಭದಲ್ಲಿ ಮಣಿಪಾಲ್ ಆಸ್ಪತ್ರೆ ಮೈಸೂರಿನ ಆಸ್ಪತ್ರೆ ನಿರ್ದೇಶಕರಾದ ಸಂದೀಪ್ ಪಟೇಲ್ ಬಿ.ಜೆ. ಅವರು ಮಾತನಾಡಿ, ತಮ್ಮ ಆಸ್ಪತ್ರೆಯು ಮೈಸೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಜನರಿಗೆ ಅತ್ಯಾಧುನಿಕ ನರರೋಗ, ನರಶಸ್ತ್ರಚಿಕಿತ್ಸೆ ಮತ್ತು ಹೃದಯ ಚಿಕಿತ್ಸೆಯನ್ನು ಒದಗಿಸಲು ಬದ್ಧವಾಗಿದೆ ಎಂದು ತಿಳಿಸಿದರು. ತಾವಿಲ್ಲಿ ವಿಶೇಷ ಸ್ಟ್ರೋಕ್ ಕೇರ್ ವ್ಯವಸ್ಥೆ, ಟ್ರಾಮಾ ಸೇವೆಗಳು, ಅತ್ಯಾಧುನಿಕ ಎಂಡೋವಾಸ್ಕ್ಯುಲರ್ ನರಚಿಕಿತ್ಸೆ, ಆಧುನಿಕ ಕ್ಯಾಥ್ ಲ್ಯಾಬ್ ಹಾಗೂ 24×7 ತಜ್ಞರ ಸೇವೆಯ ಮೂಲಕ ರೋಗಿಗಳಿಗೆ ಸಮಯೋಚಿತ ಹಾಗೂ ಗುಣಮಟ್ಟದ ತುರ್ತು ಚಿಕಿತ್ಸೆಯನ್ನು ನೀಡಲು ಸದಾ ಸಿದ್ಧರಾಗಿರುವುದಾಗಿ ಅವರು ಈ ವೇಳೆ ಭರವಸೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net