ಹನಗೋಡು: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಈ ಬಾರಿ ಶೇ.100ರಷ್ಟು ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಹೋಬಳಿಯ ನೇರಳಕುಪ್ಪೆ ಸರ್ಕಾರಿ ಪ್ರೌಢಶಾಲೆ ಶಿಕ್ಷಕರು ಶ್ರಮ ವಹಿಸುತ್ತಿದ್ದು, ಸರ್ಕಾರಿ ರಜೆ ದಿನಗಳಲ್ಲೂ ಪಾಠ-ಪ್ರವಚನಗಳಲ್ಲಿ ತೊಡಗಿದ್ದಾರೆ.
ಶಾಲೆಯ ವಿಜ್ಞಾನ ಶಿಕ್ಷಕರಾದ ಎ.ಪ್ರೀತಿ ಮತ್ತು ಕೆ.ರೇಷ್ಮಾ ರಜೆಯಲ್ಲಿಯೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಗುಂಪು ಅಧ್ಯಯನ ನಡೆಸುವ ಮೂಲಕ ಉತ್ತಮ ಫಲಿತಾಂಶಕ್ಕೆ ಶ್ರಮಿಸುತ್ತಿದ್ದಾರೆ.
ಪರೀಕ್ಷೆ ಮುಗಿಯುವವರೆಗೆ ಪರೀಕ್ಷೆ ಇರುವ ದಿನಗಳನ್ನು ಹೊರತುಪಡಿಸಿ ಉಳಿದೆಲ್ಲ ದಿನಗಳಲ್ಲೂ ವಿದ್ಯಾರ್ಥಿಗಳು ಶಾಲೆಗೆ ಬರುತ್ತಾರೆ. ಪ್ರತಿ ವಿಷಯದ ಶಿಕ್ಷಕರು ಪರೀಕ್ಷೆಗೆ ಮುನ್ನ ದಿನಗಳಲ್ಲಿ ಪುನರಾವರ್ತನೆ ಮಾಡಿಸುತ್ತಾರೆ ಎಂದು ಮುಖ್ಯ ಶಿಕ್ಷಕ ಕುಮಾರಸ್ವಾಮಿ ತಿಳಿಸಿದರು.