ಹಾದನೂರು ಕೆರೆಗೆ ನೀರು ತುಂಬಿಸಲು ಕ್ರಮ

ಶಾಸಕ ಅನಿಲ್ ಚಿಕ್ಕಮಾದು ಭರವಸೆ
ಸರಗೂರು ತಾಲೂಕಿನ ಹಾದನೂರು ಗ್ರಾಮದಲ್ಲಿ ಪ್ರಜಾಸೇವೆ ಆಂದೋಲನ ಕಾರ್ಯಕ್ರಮದಲ್ಲಿ ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿದರು. ಮೋಹನಕುಮಾರಿ, ಪ್ರೇಮಕುಮಾರ್, ರವಿಕುಮಾರ್, ಪ್ರಸನ್ನಕುಮಾರ್ ಇತರರು ಇದ್ದರು.
ಸರಗೂರು ತಾಲೂಕಿನ ಹಾದನೂರು ಗ್ರಾಮದಲ್ಲಿ ಪ್ರಜಾಸೇವೆ ಆಂದೋಲನ ಕಾರ್ಯಕ್ರಮದಲ್ಲಿ ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿದರು. ಮೋಹನಕುಮಾರಿ, ಪ್ರೇಮಕುಮಾರ್, ರವಿಕುಮಾರ್, ಪ್ರಸನ್ನಕುಮಾರ್ ಇತರರು ಇದ್ದರು.
Published on: 

ಸರಗೂರು: ಹಾದನೂರು ಗ್ರಾಮದಲ್ಲಿ ಪೋಡಿ, ರಸ್ತೆ ಬಿಡಿಸುವುದು ಹಾಗೂ ಖಾತೆ ಸೇರಿದಂತೆ ಕಂದಾಯ ಇಲಾಖೆ ಸಂಬಂಧಿತ ಕೆಲಸಗಳನ್ನು ನನ್ನ ತಂದೆ ಎಸ್.ಚಿಕ್ಕಮಾದು ಹಾಗೂ ನನ್ನ ರಾಜಕೀಯ ಗುರು ಮಾಜಿ ಸಂಸದ ಆರ್. ಧ್ರುವನಾರಾಯಣ ಅವರ ಅವಧಿಯಲ್ಲಿ ಬಹುತೇಕ ಪೂರ್ಣಗೊಂಡಿವೆ ಎಂದು ಶಾಸಕ ಅನಿಲ್ ಚಿಕ್ಕಮಾದು ಅಭಿಪ್ರಾಯಪಟ್ಟರು.

ತಾಲೂಕಿನ ಹಾದನೂರು ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಪ್ರಜಾಸೇವೆ ಆಂದೋಲನದಲ್ಲಿ ಸಾರ್ವಜನಿಕರಿಂದ ವಿವಿಧ ಇಲಾಖೆಗಳ ಸಮಸ್ಯೆಗಳ ಕುರಿತು ಅರ್ಜಿಗಳನ್ನು ಸ್ವೀಕರಿಸಿ ಮಾತನಾಡಿದರು.

ಹಾದನೂರು ಕೆರೆಗೆ ನೀರು ತುಂಬಿಸುವುದು ಗ್ರಾಮಸ್ಥರ ಬಹುಮುಖ್ಯ ಬೇಡಿಕೆಯಾಗಿದೆ. ಗ್ರಾಮಸ್ಥರ ಬೇಡಿಕೆಯಂತೆ ನುಗು ಏತ ನೀರಾವರಿ ಯೋಜನೆಯಡಿ ಯಶವಂತಪುರ ಗ್ರಾಮದವರೆಗೆ ಕಾಮಗಾರಿ ಕೈಗೊಳ್ಳಲಾಗಿದೆ. ಹಾದನೂರು ಕೆರೆಗೆ ಪೈಪ್‌ಲೈನ್ ಅಳವಡಿಸಿ ನೀರು ಹರಿಸುವಂತೆ ಸರ್ಕಾರಕ್ಕೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಕೆರೆಗೆ ನೀರು ಹರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಕಾಡುಪ್ರಾಣಿ ಹಾವಳಿ ತಡೆಗೆ ಬ್ಯಾರಿಕೇಡ್: ಕಾಡುಪ್ರಾಣಿಗಳು ಜಮೀನುಗಳಿಗೆ ಪ್ರವೇಶಿಸುವುದನ್ನು ತಡೆಯಲು ರೈಲ್ವೆ ಬ್ಯಾರಿಕೇಡ್ ನಿರ್ಮಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಜನವರಿಯಲ್ಲಿ ಸುಮಾರು 45 ಲಕ್ಷ ರೂ. ವೆಚ್ಚದಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಲಾಗಿದ್ದು, ಇನ್ನೂ ಸುಮಾರು 500 ಮೀಟರ್ ಬ್ಯಾರಿಕೇಡ್ ಕಾಮಗಾರಿ ಬಾಕಿ ಉಳಿದಿದೆ. ಬಾಕಿ ಕಾಮಗಾರಿ ಪೂರ್ಣಗೊಳಿಸಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.

ಪಂಚಾಯಿತಿ ಕಟ್ಟಡದ ಗುಣಮಟ್ಟಕ್ಕೆ ಬೇಸರ: ಹಾದನೂರು ಗ್ರಾಮ ಪಂಚಾಯಿತಿ ಕಟ್ಟಡದ ಕಾಮಗಾರಿ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ಪಂಚಾಯಿತಿ ಕಟ್ಟಡಕ್ಕೆ 10 ಲಕ್ಷ ರೂ. ಅನುದಾನ ಇದ್ದರೂ ಕಾಮಗಾರಿ ಸಮರ್ಪಕವಾಗಿ ನಡೆದಿಲ್ಲ. ಸರ್ಕಾರದ ಹಣವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಗುಣಮಟ್ಟದ ಕಾಮಗಾರಿ ನಡೆಸಬೇಕು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಕಂದಾಯ ಹಾಗೂ ಅರಣ್ಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಅರ್ಜಿ ಸಲ್ಲಿಸಿದರು.

ಸಭೆಯಲ್ಲಿ ತಹಸೀಲ್ದಾರ್ ಮೋಹನಕುಮಾರಿ, ತಾಪಂ ಇಒ ಪ್ರೇಮ್‌ಕುಮಾರ್, ಮುಖಂಡರಾದ ಮಾಜಿ ಜಿಪಂ ಉಪಾಧ್ಯಕ್ಷೆ ಭಾಗ್ಯಲಕ್ಷ್ಮಿ,ಪರಶಿವಮೂರ್ತಿ, ಗುರುಸ್ವಾಮಿ, ಶಿವರಾಜು, ಶಿವಲಿಂಗಯ್ಯ,ಪ್ರಕಾಶ್, ಪುಟ್ಟಸ್ವಾಮಿ, ನಾಗರಾಜು, ಬಸವರಾಜು, ಸೂರ್ಯ ಕುಮಾರ್, ಶಶಿ ಪಾಟೀಲ್, ಎಸಿಎಫ್ ಡಿ. ಪರಮೇಶ್, ಸಿಪಿಐ ಪ್ರಸನ್ನಕುಮಾರ್, ನೀರಾವರಿ ಇಲಾಖೆ ಎಇಇ ಉಷಾ, ಪಿಎಸ್‌ಐ ಆರ್.ಕಿರಣ್, ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್, ವಿವಿಧ ಇಲಾಖೆ ಅಧಿಕಾರಿಗಳಾದ ಶಶಿಕಲಾ, ರಮೇಶ್, ನೇತ್ರಾವತಿ, ಪ್ರಸಾದ್, ರಂಜಿತಾ, ಪ್ರಭಾಕರ್ ನಾಯಕ್, ಪಿಡಿಒ ನಾಗರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net