ಚಾಮುಂಡಿ ಬೆಟ್ಟದಲ್ಲಿ " ಪ್ರಸಾದ್' ಕಾಮಗಾರಿಗೆ ತಡೆಯಾಜ್ಞೆ

ಚಾಮುಂಡಿಬೆಟ್ಟ
ಚಾಮುಂಡಿಬೆಟ್ಟ
Published on

ಪ್ರಮುಖ ಮುಖ್ಯಾಂಶಗಳು

  • ಚಾಮುಂಡಿ ಬೆಟ್ಟದ ವಿಷಯದಲ್ಲಿ ಸಭೆ ಕರೆಯುವುದಾಗಿ ಭರವಸೆ ಕೊಟ್ಟಿದ್ದ ಜಿಲ್ಲಾಧಿಕಾರಿ ಈವರೆಗೆ ಪರಿಸರ ಸಂಘಟನೆಗಳ ಸಭೆ ಕರೆಯದಿರುವುದು ಏಕೆ?
  • ಬೆಟ್ಟದ ಸಮಸ್ಯೆಗಳು ಮತ್ತು ಮೈಸೂರು ಹೊರವಲಯದ ಕಸದ ಸಮಸ್ಯೆ ಬಗ್ಗೆ ಚರ್ಚೆ ಮಾಡಲು ಶೀಘ್ರದಲ್ಲಿ ಪರಿಸರ ಸಂಘಟನೆಗಳ ಸಭೆ ಕರೆಯಬೇಕು
ಮೈಸೂರು: ಚಾಮುಂಡಿ ಬೆಟ್ಟದ ಮೇಲೆ ನಡೆಯುತ್ತಿದ್ದ ಪ್ರಸಾದ್ ಯೋಜನೆಯ ಕಾಮಗಾರಿಗಳಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿರುವುದನ್ನು ಪರಿಸರಕ್ಕಾಗಿ ನಾವು ಸಂಘಟನೆ ಸ್ವಾಗತಿಸಿದೆ.
ಸರ್ಕಾರವು ನ್ಯಾಯಾಲಯಕ್ಕೆ ನೀಡಿದ್ದ ಭರವಸೆಯನ್ನು ಉಲ್ಲಂಘಿಸಿ ಕಾಮಗಾರಿ ಮುಂದುವರಿಸಿದ್ದ ಕ್ರಮಕ್ಕೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ್ದು, ಭವಿಷ್ಯದಲ್ಲಿ ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿದರೆ ಅದನ್ನು ನ್ಯಾಯಾಂಗ ನಿಂದನೆ ಎಂದು ಗಂಭೀರವಾಗಿ ಪರಿಗಣಿಸುವುದಾಗಿಯೂ ಎಚ್ಚರಿಕೆ ನೀಡಿದೆ ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪರಶುರಾಮೇಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆ ಯಾವುದೇ ಶಾಶ್ವತ ಕಾಮಗಾರಿ ನಡೆಸುವುದಿಲ್ಲ ಎಂದು ರಾಜ್ಯ ಸರ್ಕಾರ ನೀಡಿದ್ದ ಭರವಸೆ ಉಳಿಸಿಕೊಳ್ಳದೆ ಶಾಶ್ವತ ಕಾಮಗಾರಿ ನಡೆಸುತ್ತಿರುವುದಕ್ಕೆ ಕೋರ್ಟ್ ಆತಂಕ ವ್ಯಕ್ತಪಡಿಸಿದೆ. ಕೇಂದ್ರ ಸರ್ಕಾರದಿಂದ 47 ಕೋಟಿ ರೂ. ಬಿಡುಗಡೆಯಾಗಿದೆ ಎಂಬ ಕಾರಣ ನೀಡಿ ನಿರ್ಮಾಣ ಕಾರ್ಯ ಸಮರ್ಥಿಸಿಕೊಂಡಿದ್ದ ಜಿಲ್ಲಾಧಿಕಾರಿ ನಡೆ ದುರುದ್ದೇಶಪೂರಿತ ಮಾತ್ರವಲ್ಲ, ಕಾನೂನಾತ್ಮಕವಾಗಿ ಸಂಪೂರ್ಣ ಅಸಮರ್ಥನೀಯ ಎಂದು ನ್ಯಾಯಾಲಯ ಹೇಳಿದೆ ಎಂದು ತಿಳಿಸಿದೆ.
ನ್ಯಾಯಾಲಯದ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಜಿಲ್ಲಾಧಿಕಾರಿ ಕರ್ತವ್ಯ. ಆದೇಶ ಪಾಲಿಸದಿರುವುದು ನ್ಯಾಯಾಂಗ ಅಧಿಕಾರದ ಸ್ಪಷ್ಟ ಉಲ್ಲಂಘನೆ ಎಂದು ತೀಕ್ಷ್ಣಪದಗಳಲ್ಲಿ ಕೋರ್ಟ್ ನುಡಿದಿದೆ. 
ನ್ಯಾಯಾಲಯಕ್ಕೆ ಕೊಟ್ಟ ಭರವಸೆಯಂತೆ ನಡೆದುಕೊಳ್ಳದೆ ಶಾಶ್ವತ ಕಾಮಗಾರಿ ನಡೆಸಲು ಕಾರಣರಾದ ಜಿಲ್ಲಾಧಿಕಾರಿ ನ್ಯಾಯಾಲಯಕ್ಕೆ ಅಗೌರವ ತೋರಿದ್ದಾರೆ. ರಾಜವಂಶಸ್ಥರ ಪತ್ರಗಳಿಗೂ ಪರಿಸರ ಸಂಘಟನೆಗಳ ಹೋರಾಟಕ್ಕೂ ಮತ್ತು ಭಕ್ತರ ಧಾರ್ಮಿಕ ಭಾವನೆಗಳಿಗೂ ಬೆಲೆ ಕೊಡದೆ ಉದ್ಧಟತನ ತೋರಿರುವುದನ್ನು ಸಂಘಟನೆಯು ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ.
 ತಿ.ನರಸೀಪುರದಲ್ಲಿರುವ ರೇಷ್ಮೆ ನೂಲು ತೆಗೆಯುವ ಕಾರ್ಖಾನೆಯ ಆವರಣದಲ್ಲಿ 5 ಎಕರೆ ಜಾಗವನ್ನು ಕ್ರೀಡಾಂಗಣ ಮಾಡಲು ಗುರುತಿಸಿದ್ದು, ಎರಡು ಬೆಳೆ ಬೆಳೆಯುವ ಫಲವತ್ತಾದ 20 ಎಕರೆ ಜಾಗವನ್ನು ನಿಮ್ಹಾನ್ಸ್ ಆಸ್ಪತ್ರೆ ನಿರ್ಮಾಣಕ್ಕೆ ಗುರುತಿಸಿರುವುದು, ನಂಜನಗೂಡಿನ ಕಪಿಲಾ ನದಿ ದಂಡೆಯ ಮೇಲೆ 40 ಬೃಹತ್ ಮರ ಕಡಿದು ತಲೆಮರೆಸಿಕೊಂಡಿರುವ ಆರೋಪಿಯನ್ನು ಇನ್ನೂ ಬಂಧಿಸದಿರುವುದು ಜಿಲ್ಲಾಧಿಕಾರಿಯ ಅಸಮರ್ಥ ಮತ್ತು ಬೇಜವಾಬ್ದಾರಿ ಆಡಳಿತಕ್ಕೆ ಕಣ್ಣ ಮುಂದೆಯೇ ಇರುವ ಉದಾಹರಣೆಗಳು ಎಂದು ಕಿಡಿಕಾರಿದರು.
ಚಾಮುಂಡಿ ಬೆಟ್ಟದ ವಿಷಯದಲ್ಲಿ ಸಭೆ ಕರೆಯುವುದಾಗಿ ಭರವಸೆ ಕೊಟ್ಟಿದ್ದ ಜಿಲ್ಲಾಧಿಕಾರಿ ಈವರೆಗೆ ಪರಿಸರ ಸಂಘಟನೆಗಳ ಸಭೆ ಕರೆಯದಿರುವುದು ಏಕೆ? 
ಬೆಟ್ಟದ ಸಮಸ್ಯೆಗಳು ಮತ್ತು ಮೈಸೂರು ಹೊರವಲಯದ ಕಸದ ಸಮಸ್ಯೆ ಬಗ್ಗೆ ಚರ್ಚೆ ಮಾಡಲು ಶೀಘ್ರದಲ್ಲಿ ಪರಿಸರ ಸಂಘಟನೆಗಳ ಸಭೆ ಕರೆಯಬೇಕು ಎಂದು ಆಗ್ರಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net