ಭಯದ ವಾತಾವರಣದಲ್ಲಿ ಶ್ರೀಲಂಕಾ ಕಲಾವಿದರು: ಟಿಎಜಿ ಸಂಸ್ಥೆ ಸ್ಥಾಪಕ, ನಿರ್ದೇಶಕ ಡಾ.ಕೆ.ಸಿತಾಂಪರನಾಥನ್

ನಗರದ ಭಾರತೀಯ ರಂಗಭೂಮಿ ಸಂಸ್ಥೆ (ಐಐಇಟಿ)ಗೆ ಶ್ರೀಲಂಕಾದ ಜಾಫ್ನಾ ಮೂಲದ ಥಿಯೇಟರ್ ಆಕ್ಷನ್ ಗ್ರೂಪ್ (ಟಿಎಜಿ) ಸಾಂಸ್ಕೃತಿಕ ವಿನಿಮಯ ಅಡಿ ಭೇಟಿ ನೀಡಿತ್ತು. ಡಾ.ಕೆ.ಸಿತಾಂಪರನಾಥನ್, ಶಶಿಧರ ಅಡಪ, ನೀಲಗಾರ ಮೈಸೂರು ಗುರುರಾಜ್ ಇತರರು ಇದ್ದರು.
ನಗರದ ಭಾರತೀಯ ರಂಗಭೂಮಿ ಸಂಸ್ಥೆ (ಐಐಇಟಿ)ಗೆ ಶ್ರೀಲಂಕಾದ ಜಾಫ್ನಾ ಮೂಲದ ಥಿಯೇಟರ್ ಆಕ್ಷನ್ ಗ್ರೂಪ್ (ಟಿಎಜಿ) ಸಾಂಸ್ಕೃತಿಕ ವಿನಿಮಯ ಅಡಿ ಭೇಟಿ ನೀಡಿತ್ತು. ಡಾ.ಕೆ.ಸಿತಾಂಪರನಾಥನ್, ಶಶಿಧರ ಅಡಪ, ನೀಲಗಾರ ಮೈಸೂರು ಗುರುರಾಜ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಯುದ್ಧದ ಕಾರಣದಿಂದ ಸ್ಥಳಾಂತರಗೊಂಡವರು ವಿವಿಧ ಪ್ರದೇಶಗಳಿಂದ ಒಂದಾಗಿ ಬಂದು ನಾಟಕದ ಮೂಲಕ ಸಮುದಾಯವನ್ನಾಗಿ ರೂಪಿಸಿಕೊಂಡಿದ್ದಾರೆ
  • ಸೃಜನಾತ್ಮಕ ಪ್ರಕ್ರಿಯೆ ಜನರು ತಮ್ಮ ನೋವನ್ನು ಹಂಚಿಕೊಳ್ಳಲು ಹಾಗೂ ಶಾಂತಿಯುತ ಮತ್ತು ಗೌರವಯುತ ಬದುಕಿನತ್ತ ಸಾಗಲು ನೆರವಾಗುತ್ತಿದೆ
ಮೈಸೂರು: ಶ್ರೀಲಂಕಾದಲ್ಲಿ ಅನೇಕ ಕಲಾವಿದರು ಇನ್ನೂ ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ. ಭಾರತದಲ್ಲಿ ಪ್ರದರ್ಶನ ನೀಡುವ ಅವಕಾಶವು ಅವರಿಗೆ ಮುಕ್ತವಾಗಿ ನಟಿಸಲು ಹಾಗೂ ತಮ್ಮೊಳಗಿನ ಪ್ರತಿಭೆಯನ್ನು ಕಂಡುಕೊಳ್ಳಲು ಸಹಕಾರಿಯಾಗಿದೆ ಎಂದು ಟಿಎಜಿ ಸಂಸ್ಥೆಯ ಸ್ಥಾಪಕ ಹಾಗೂ ನಿರ್ದೇಶಕ ಡಾ.ಕೆ.ಸಿತಾಂಪರನಾಥನ್ ಹೇಳಿದರು.
ನಗರದಲ್ಲಿ ಆಯೋಜಿಸಿದ್ದ ಭಾರತೀಯ ರಂಗಭೂಮಿ ಸಂಸ್ಥೆ (ಐಐಇಟಿ) ಹಾಗೂ ಶ್ರೀಲಂಕಾದ ಜಾಫ್ನಾ ಮೂಲದ ಥಿಯೇಟರ್ ಆಕ್ಷನ್ ಗ್ರೂಪ್ (ಟಿಎಜಿ) ನಡುವಿನ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಟಿಎಜಿ ಸಂಸ್ಥೆಯ ಕಲಾವಿದರು ಇಲ್ಲಿ ಯಾವುದೇ ಭಯವಿಲ್ಲದೆ ತಮ್ಮ ನೋವು, ಅನುಭವ ಮತ್ತು ಭಾವನೆಗಳನ್ನು ವ್ಯಕ್ತಪಡಿಸುವ ಅವಕಾಶ ಸಿಗಲಿದೆ ಎಂದು ತಿಳಿಸಿದರು.
ಟಿಎಜಿ ತಂಡದಲ್ಲಿ 12ನೇ ತರಗತಿ ವಿದ್ಯಾರ್ಥಿಗಳಿಂದ ಹಿಡಿದು ಮಧ್ಯವಯಸ್ಸಿನ ಕಲಾವಿದರ ತನಕ ವಿವಿಧ ವಯೋಮಾನದವರು ಇದ್ದು, ಯುದ್ಧದ ಕಾರಣದಿಂದ ಸ್ಥಳಾಂತರಗೊಂಡವರು ವಿವಿಧ ಪ್ರದೇಶಗಳಿಂದ ಒಂದಾಗಿ ಬಂದು ನಾಟಕದ ಮೂಲಕ ಸಮುದಾಯವನ್ನಾಗಿ ರೂಪಿಸಿಕೊಂಡಿದ್ದಾರೆ. ಪ್ರತಿವರ್ಷ ಜನವರಿಯಲ್ಲಿ ಅವರು ತಮಿಳುನಾಡು ಮತ್ತು ಕರ್ನಾಟಕಕ್ಕೆ ಭೇಟಿ ನೀಡಿ, ಮುಕ್ತವಾಗಿ ನಾಟಕವನ್ನು ಪ್ರಯೋಗಿಸುವ ಪ್ರಯತ್ನ ನಡೆಸುತ್ತಾರೆ. ಕರ್ನಾಟಕ ಹಾಗೂ ತಮಿಳುನಾಡಿನ ಸ್ಥಳೀಯ ಕಲಾವಿದರೊಂದಿಗೆ ತಮ್ಮ ಕಲಾ ಕೌಶಲ ಮತ್ತು ಅನುಭವಗಳನ್ನು ವಿನಿಮಯ ಮಾಡಿಕೊಳ್ಳುತ್ತಾ ಬಂದಿದ್ದಾರೆ ಎಂದರು.
ಸಾಂಸ್ಕೃತಿಕ ವಿನಿಮಯದ ಭಾಗವಾಗಿ ಐಐಇಟಿಯ ಜನಪದ ಗಾಯಕ ಡಾ.ಗುರುರಾಜ್ ಅವರನ್ನು ತಂಡ ಆಹ್ವಾನಿಸಿತು. ಅವರು ತಮ್ಮ ತಂಡದೊಂದಿಗೆ ಮಂಟೇಸ್ವಾಮಿ ಮತ್ತು ಮಲೆ ಮಹದೇಶ್ವರರ ಹಾಡುಗಳ ಮೂಲಕ ವಿಶಿಷ್ಟ ಕಥನಶೈಲಿ ಹಾಗೂ ಉತ್ಸಾಹಭರಿತ ಪ್ರದರ್ಶನ ನೀಡುವ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು.
ಭೂಪತಿ ಮತ್ತು ಅವರ ತಂಡದಿಂದ ಟಿಜಿಎ ಸದಸ್ಯರಿಗಾಗಿ ವಿಶೇಷವಾಗಿ ಬೊಂಬೆ ಆಟದ ಪ್ರದರ್ಶನ ನಡೆಯಿತು. ಬಳಿಕ ಗ್ರಾಮೀಣ ಪ್ರದೇಶಗಳಲ್ಲಿನ ದಮನಿತ ಸಮುದಾಯಗಳೊಂದಿಗೆ ನಡೆಸುತ್ತಿರುವ ಪರಿಣಾಮಕಾರಿ ನಾಟಕ ಪ್ರಯೋಗವನ್ನು ಸಹ ಪ್ರದರ್ಶಿಸಿತು.
2009ರ ಯುದ್ಧದ ಸಂದರ್ಭದಲ್ಲಿ ಎದುರಿಸಿದ ದುರಂತಗಳನ್ನು ನಾಟಕದ ಮೂಲಕ ವ್ಯಕ್ತಪಡಿಸಲು ಜನರನ್ನು ಉತ್ತೇಜಿಸುವ ಮೂಲಕ, ಅವರ ಮನೋವೈಕಲ್ಯಗಳನ್ನು ಎದುರಿಸಲು ಮತ್ತು ನೋವಿನಿಂದ ಗುಣಮುಖರಾಗಲು ಟಿಜಿಎ ಸಹಾಯ ಮಾಡುತ್ತಿದೆ. ಈ ಸೃಜನಾತ್ಮಕ ಪ್ರಕ್ರಿಯೆ ಜನರು ತಮ್ಮ ನೋವನ್ನು ಹಂಚಿಕೊಳ್ಳಲು ಹಾಗೂ ಶಾಂತಿಯುತ ಮತ್ತು ಗೌರವಯುತ ಬದುಕಿನತ್ತ ಸಾಗಲು ನೆರವಾಗುತ್ತಿದೆ ಎನ್ನುವ ಸಂದೇಶ ಸಾರಿದರು.
ಈ ವೇಳೆ ಟಿಎಜಿ ಸಂಸ್ಥೆಯ ಸ್ಥಾಪಕ ಹಾಗೂ ನಿರ್ದೇಶಕ ಡಾ.ಕೆ.ಸಿತಾಂಪರನಾಥನ್ ಅವರ ತಂಡವನ್ನು ಹಿರಿಯ ನಾಟಕ ನಿರ್ದೇಶಕ ಶಶಿಧರ ಅಡಪ ಹಾಗೂ ನೀಲಗಾರ ಮೈಸೂರು ಗುರುರಾಜ್ ಆತ್ಮೀಯವಾಗಿ ಬರಮಾಡಿಕೊಂಡರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net