ವರಕೋಡು ಗ್ರಾಮದಲ್ಲಿ ಶ್ರೀ ಬೀರೇಶ್ವರಸ್ವಾಮಿ ದೇವಾಲಯ ಮರು ಪ್ರತಿಷ್ಠಾಪನೆ

ನೂತನವಾಗಿ ಪುನರ್ ನಿರ್ಮಿಸಿರುವ ವರಕೋಡು ಶ್ರೀ ಬೀರೇಶ್ವರಸ್ವಾಮಿ ದೇವಾಲಯ.
ನೂತನವಾಗಿ ಪುನರ್ ನಿರ್ಮಿಸಿರುವ ವರಕೋಡು ಶ್ರೀ ಬೀರೇಶ್ವರಸ್ವಾಮಿ ದೇವಾಲಯ.
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯದ ವಿವಿಧೆಡೆಯಿಂದ ಭಕ್ತರು ಆಗಮನ
ಮೈಸೂರು: ತಾಲೂಕಿನ ವರಕೋಡು ಗ್ರಾಮದ ಶ್ರೀ ಬೀರೇಶ್ವರಸ್ವಾಮಿ ದೇವಾಲಯದ ಮರು ಪ್ರತಿಷ್ಠಾಪನೆ ಕುಂಭಾಭಿಷೇಕದ ಪೂಜಾ ಮಹೋತ್ಸವ ಮಾ.10ರಿಂದ 14ರವರೆಗೆ ವಿಜೃಂಭಣೆಯಿಂದ ನೆರವೇರಲಿದೆ. 
ಈ ದೇವಾಲಯವನ್ನು ಮರು ನಿರ್ಮಾಣ ಮಾಡಲಾಗಿದ್ದು, ನೂತನವಾಗಿ ನಿರ್ಮಿಸಿರುವ ದೇವಾಲಯದ ಸಂಪ್ರೋಕ್ಷಣ, ಮರು ಪ್ರತಿಷ್ಠಾಪನೆ, ಕುಂಭಾಭಿಷೇಕ ಹಾಗೂ ಮಹಾದ್ವಾರ ಪೂಜಾ ಮಹೋತ್ಸವ ನಡೆಯಲಿದ್ದು, ಕಾಗಿನೆಲೆ ಮಹಾಸಂಸ್ಥಾನದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಶಾಖಾ ಮಠದ ಶ್ರೀ ಶಿವಾನಂದಪುರಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ವರಕೋಡು ಗಡಿ ಗುರುಮಠದ ಶ್ರೀಗುರುಸ್ವಾಮಿ, ಗುರುದೇವು ಹಾಗೂ ಗಡಿ ದೇವಾಲಯದ ಗುಡ್ಡಪ್ಪರ ಸಮ್ಮುಖದಲ್ಲಿ ಇದು ವಿಜೃಂಭಣೆಯಿಂದ ನೆರವೇರಲಿದೆ.
ರಾಜ್ಯದ ವಿವಿಧೆಡೆಯಿಂದ ಭಕ್ತರು ಆಗಮಿಸಲಿದ್ದಾರೆ. ದುದ್ದಗೆರೆ, ತಾಯೂರು, ಸಿದ್ದರಾಮನಹುಂಡಿ, ಕಾಳಿಸಿದ್ದನಹುಂಡಿ, ಬಿದರಹಳ್ಳಿಹುಂಡಿ, ಅಹಲ್ಯ ಗಡಿ ಗ್ರಾಮದ ದೇವರಕೂಟ, ಪೂಜೆ, ಬಸವ ಹಾಗೂ ವೀರಮಕ್ಕಳು ಪೂಜಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮದ ಅಂಗವಾಗಿ ಮಾ.9 ಬೆಳಗ್ಗೆಯಿಂದ ವರಕೋಡು ಗಡಿ ಗ್ರಾಮವಾದ ಮೂಡಲಹುಂಡಿ, ಬಡಗಲಹುಂಡಿ, ಕೆಂಪೇಗೌಡನಹುಂಡಿ, ಹೊಸಹುಂಡಿ ಗ್ರಾಮದಲ್ಲಿರುವ ಎಲ್ಲ ಮೂಲ ದೇವರ ದೇವಾಲಯಗಳಲ್ಲಿ ಅರ್ಚಕ ಗಣೇಶ್ ದೀಕ್ಷಿತ್ ನೇತೃತ್ವದಲ್ಲಿ ಪೂಜಾ ಕೈಂಕರ್ಯ ನಡೆಯಲಿದೆ.
ದೇವಾಲಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಎಂಎಲ್‌ಸಿ ಡಾ.ಯತೀಂದ್ರ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಚಿವ ಭೈರತಿ ಸುರೇಶ್, ಸಂಸದ ಸುನೀಲ್ ಬೋಸ್, ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.
ಮಾ.10ರಂದು ಬೆಳಗ್ಗೆ ಬಡಗಲಹುಂಡಿದ ಬನ್ನಿಮಹಾಕಾಳೇಶ್ವರಿ ದೇವಾಲಯದಲ್ಲಿ ಹೋಮ ನಡೆಯಲಿದೆ. ಮಾ.11ರಂದು ಗಣಪತಿ ಹೋಮ, ಮೂಲದೇವರ ಪ್ರಾರ್ಥನೆ, ವರಕೋಡು ಕಲ್ಯಾಣಿಯಿಂದ ಮಂಗಳವಾದ್ಯದೊಂದಿಗೆ ದೀಪದಾರತಿ, ಗಡಿಕೂಟಗಳ ಆಗಮನವಾಗಲಿದೆ. 
ಮಾ.12ರಂದು ಬೆಳಗ್ಗೆ 7.30ಕ್ಕೆ ಬೀರೇಶ್ವರಸ್ವಾಮಿ ದೇವಾಲಯದಲ್ಲಿ ಗಣಪತಿ ಪೂಜೆ, ನವಗ್ರಹ ಪೂಜೆ, ಗೋಪೂಜೆ, ಯೋಗಶಾಲ ಪ್ರವೇಶ, ಕಲ್ಯಾಣಿಯಿಂದ 101 ಹೆಣ್ಣು ಮಕ್ಕಳೊಂದಿಗೆ ಖೇಲು ಬಸವದೇವರ ಮೇಲೆ ಮಜ್ಜನ, ನಂದಿ ಧ್ವಜ, ಪೂಜಾ ಕುಣಿತ, ಬಸವ ಸತ್ತಿಗೆ ಸೂರಿಪಾನಿ, ವೀರಗಾಸೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಮೆರವಣಿಗೆ ಏರ್ಪಡಿಸಲಾಗಿದೆ. 
ಪ್ರಸಾದ ವಿತರಿಸಲಾಗುತ್ತದೆ. ಅಂದು ಸಂಜೆ 7 ಗಂಟೆಗೆ ಮೂಡಲಹುಂಡಿದಲ್ಲಿ  ‘ದಕ್ಷಯಜ್ಞ ಅಥವಾ ‘ಭೃಗುಮುನಿಯ ಗರ್ವಭಂಗ ಪೌರಾಣಿಕ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.
ಮಾ.13ರಂದು ಬೆಳಗ್ಗೆ 5.10ರಿಂದ 6.10ರೊಳಗೆ ಸಲ್ಲುವ ಬ್ರಾಹ್ಮಿ ಮುಹೂರ್ತದಲ್ಲಿ ಬೀರೇಶ್ವರಸ್ವಾಮಿ ಲಿಂಗ ಪ್ರತಿಷ್ಠಾಪನೆ, ಕುಂಭ ಕಳಸ ಪ್ರತಿಷ್ಠಾಪನೆ, ಕುಂಭಾಭಿಷೇಕ ನೆರವೇರಲಿದೆ. ನಂತರ ಮಧ್ಯಾಹ್ನ 1ಕ್ಕೆ ಪ್ರಸಾದ ವಿನಿಯೋಗ ನಡೆಯಲಿದೆ. ಮಾ.14ರಂದು ಬೆಳಗ್ಗೆ 9 ಗಂಟೆಗೆ ಕೂಟ ವಿಸರ್ಜನೆಯಾಗಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net