ನಂಜನಗೂಡು ತಾಲೂಕು ಶೇಷಾದ್ರಿಪುರಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಅಂತರ್ ಪದವಿ ಪೂರ್ವ ಕಾಲೇಜಿನ ವಾಲಿಬಾಲ್ ಪಂದ್ಯಾವಳಿಗೆ ಗಣ್ಯರು ಚಾಲನೆ ನೀಡಿದರು. ನಾಡೋಜ ಡಾ.ವೂಡೆ ಪಿ. ಕೃಷ್ಣ, ಡಾ.ಕೆ.ರಾಮ ನರಸಿಂಹ, ಮುರಳಿ, ಸುದರ್ಶನ ಇತರರಿದ್ದರು.
ಕ್ರೀಡೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವದ ವಿಕಸನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಶಿಸ್ತು, ಆತ್ಮವಿಶ್ವಾಸ, ಪರಿಶ್ರಮ ಮತ್ತು ನಾಯಕತ್ವದಂತಹ ಗುಣಗಳನ್ನು ಬೆಳೆಸಲು ಸಹಕಾರಿ ಎಂದು ಶೇಷಾದ್ರಿಪುರಂ ಎಜುಕೇಷನಲ್ ಟ್ರಸ್ಟ್‌ನ ಗೌರವ ಪ್ರಧಾನ ಕಾರ್ಯದರ್ಶಿ ನಾಡೋಜ ಡಾ.ವೂಡೆ ಪಿ. ಕೃಷ್ಣ ತಿಳಿಸಿದರು.
ತಾಲೂಕಿನ ಅಡಕನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಶೇಷಾದ್ರಿಪುರಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕ್ರೀಡಾಂಗಣದಲ್ಲಿ 2 ದಿನಗಳ ಕಾಲ ಆಯೋಜಿಸಿರುವ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಅಂತರ್ ಕಾಲೇಜು ವಾಲಿಬಾಲ್ ಪಂದ್ಯಾವಳಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿದರು. ಕ್ರೀಡೆಯಿಂದ ಏಕಾಗ್ರತೆ, ಬದ್ಧತೆ, ಸಮಯ ನಿರ್ವಹಣೆ ಹಾಗೂ ಸಕಾರಾತ್ಮಕ ಮನೋಭಾವ ಬೆಳೆಸಿಕೊಳ್ಳಲು ಸಾಧ್ಯ. ಸ್ಪರ್ಧಿಗಳು ತಮಗೆ ದೊರೆಯುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಕ್ರೀಡೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಗುಂಪು ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಸಹಕಾರ, ನಾಯಕತ್ವ, ಸ್ನೇಹಭಾವ ಮತ್ತು ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಗುಣ ಬೆಳೆಯುತ್ತದೆ. ಕ್ರೀಡೆಗಳು ಸಮಯಪಾಲನೆ, ಶಿಸ್ತು ಮತ್ತು ನಿರಂತರ ಪ್ರಯತ್ನದ ಮಹತ್ವವನ್ನು ಕಲಿಸುತ್ತವೆ. ಪ್ರತಿಯೊಬ್ಬರೂ ತಮ್ಮ ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ತಕ್ಕಂತೆ ಯಾವುದಾದರೂ ಕ್ರೀಡೆಯಲ್ಲಿ ನಿಯಮಿತವಾಗಿ ಭಾಗವಹಿಸಬೇಕು ಎಂದರು.
ಶೇಷಾದ್ರಿಪುರಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪ್ರಾಂಶುಪಾಲ ಡಾ.ಕೆ.ರಾಮ ನರಸಿಂಹ, ದೈಹಿಕ ಶಿಕ್ಷಣ ಶಿಕ್ಷಕರಾದ ಮುರಳಿ, ಮೈಸೂರಿನ ರಾಮಕೃಷ್ಣ ವಿದ್ಯಾಶಾಲೆಯ ದೈಹಿಕ ಶಿಕ್ಷಣ ನಿರ್ದೇಶಕ ಸುದರ್ಶನ, ದೈಹಿಕ ಶಿಕ್ಷಣ ನಿರ್ದೇಶಕ ಡಾ.ರಾಘವೇಂದ್ರ, ತರಬೇತುದಾರರು ಭಾಗವಹಿಸಿದ್ದರು.