ರೈತಸಂಘದ ರಾಜ್ಯಾಧ್ಯಕ್ಷ ಬಡಗಲಾಪುರ ನಾಗೇಂದ್ರ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ತಂಬಾಕು ಬೆಳೆಗಾರರ ರಕ್ಷಣೆಗೆ ಬರಲು ಮನವಿ ಸಲ್ಲಿಸಲಾಯಿತು. ಹೊಸೂರು ಕುಮಾರ್, ಚಾಮರಾಜ ಪಾಟೀಲ್, ವೀರಸಂಗಯ್ಯ ಇತರರಿದ್ದಾರೆ.
ಹುಣಸೂರು: ತಂಬಾಕುದರ ಕುಸಿತ ಸೇರಿದಂತೆ ತಂಬಾಕು ಬೆಳೆಗಾರರ ಸಮಸ್ಯೆಗಳನ್ನು ಪರಿಹರಿಸಲು ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರೈತಸಂಘದ ನಿಯೋಗ ಮನವಿ ಸಲ್ಲಿಸಿತು.
ಇತ್ತೀಚೆಗೆ ಬೆಂಗಳೂರಿನಲ್ಲಿ ರೈತಸಂಘದ ರಾಜ್ಯಾಧ್ಯಕ್ಷ ಬಡಗಲಾಪುರ ನಾಗೇಂದ್ರ ನೇತೃತ್ವದ ರೈತಮುಖಂಡರ ನಿಯೋಗ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ತಂಬಾಕು ಬೆಳೆಗಾರರ ಸಂಕಷ್ಟದ ಸ್ಥಿತಿಯ ಕುರಿತು ಮಾಹಿತಿ ನೀಡಿ ಪರಿಹರಿಸಲು ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಬಡಗಲಾಪುರ ನಾಗೇಂದ್ರ, ಕಳೆದೊಂದು ತಿಂಗಳಿನಿಂದ ದಿಢೀರನೆ ತಂಬಾಕಿನ ಬೆಲೆ ಕೆಜಿಗೆ 50-60 ರೂ.ಗಳಷ್ಟು ಕುಸಿದಿದೆ. ಖರೀದಿ ಕಂಪನಿಗಳು ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡಿ ರೈತರನ್ನು ಸಂಕಷ್ಟಕ್ಕೀಡು ಮಾಡಿವೆ. ಕೇಂದ್ರ ಸರ್ಕಾರ ವಿಧಿಸಿದ ಅಬಕಾರಿ ಸುಂಕ ಮತ್ತು ಜಿಎಸ್‌ಟಿ ಏರಿಕೆಯ ವಿರುದ್ಧ ಖರೀದಿ ಬಂದ್ ಮಾಡಿ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಂಡ ನಂತರವೂ ರೈತರಿಗೆ ನ್ಯಾಯಯುತ ಬೆಲೆ ನೀಡುತ್ತಿಲ್ಲ. ಈ ಕುರಿತು ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ರೈತರ ರಕ್ಷಣೆಗೆ ಬರಬೇಕೆಂದು ಆಗ್ರಹಿಸಿದರು.
ರೈತಸಂಘದ ಮೈಸೂರು ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಮಾರುಕಟ್ಟ ಆರಂಭದಲ್ಲಿ ಖರೀದಿ ಕಂಪನಿಗಳು ಉತ್ತಮ ದರ ನೀಡುವ ಭರವಸೆ ನೀಡಿ ಇದೀಗ ಮೋಸ ಮಾಡುತ್ತಿವೆ. ಹಾಕಿದ ಬಂಡವಾಳ ಕೂಡ ಬರದಂತಾಗಿದೆ. ಇನ್ನು ಶೇ.50 ಬೆಳೆ ರೈತರ ಬಳಿಯೇ ಇದೆ. ಕೊಟ್ಟ ಮಾತಿಗೆ ತಪ್ಪುವುದಾದರೆ ಹೇಗೆ? ಮುಂದಿನ ಸಾಲಿನಲ್ಲಿ ತಂಬಾಕು ಬೆಳೆಯಬೇಕೋ ಬೇಡವೋ ಎನ್ನುವುದು ನಿರ್ಧಾರವಾಗಬೇಕಿದೆ ಎಂದರು.
ಮನವಿ ಸ್ವೀಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತು ಪರಿಶೀಲಿಸುವುದಾಗಿ ಭರವಸೆ ನೀಡಿದರು. ಸಂಘದ ಗೌರವಾಧ್ಯಕ್ಷ ಚಾಮರಾಜ ಪಾಟೀಲ್, ಕಾರ್ಯಾಧ್ಯಕ್ಷ ವೀರಸಂಗಯ್ಯ, ವಿಭಾಗೀಯ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಹುಣಸೂರು ತಾಲೂಕು ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ ನಿಯೋಗದಲ್ಲಿ ಇದ್ದರು.