ಪರವಾನಗಿ ಭೂಮಾಪಕರ ಸಮಸ್ಯೆ ಪರಿಹರಿಸಿ

 ಹೊಸೂರು ಕುಮಾರ್
ಹೊಸೂರು ಕುಮಾರ್
Published on

ಪ್ರಮುಖ ಮುಖ್ಯಾಂಶಗಳು

  • licensed land surveyors
ಹುಣಸೂರು: ಕಳೆದ ಮೂರು ತಿಂಗಳಿನಿಂದ ರಾಜ್ಯ ಪರವಾನಗಿ ಭೂಮಾಪಕರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆಯಲ್ಲಿ ತೊಡಗಿದ್ದು, ದುರಸ್ತು ಇನ್ನಿತರ ಸೇವೆಗಳಿಗಾಗಿ ಅರ್ಜಿ ಸಲ್ಲಿಸಿರುವ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದರೂ ಸರ್ಕಾರ ಮೌನವಹಿಸಿರುವುದು ಖಂಡನೀಯ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ದೂರಿದ್ದಾರೆ.
ಕರ್ನಾಟಕದಲ್ಲಿ ಭೂದಾಖಲೆಗಳ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದ 3 ಲಕ್ಷ ಬಾಕಿ ಪ್ರಕರಣಗಳನ್ನು ಇತ್ಯರ್ಥಗೊಳಿಸಬೇಕಿದೆ. 1999ರಲ್ಲಿ ಸರ್ಕಾರವೇ ಪರವಾನಗಿ ಭೂಮಾಪಕ ವ್ಯವಸ್ಥೆಯನ್ನು ರೂಪಿಸಿತು. ಎರಡೂವರೆ ದಶಕಗಳ ನಂತರ, ರಾಜ್ಯದ 6000ಕ್ಕೂ ಹೆಚ್ಚು ಭೂಮಾಪಕರು 11ಇ ನಕ್ಷೆ, ತತ್ಕಾಲ್ ಪೋಡಿ, ಭೂಪರಿವರ್ತನೆ, ಸ್ವಾಮಿತ್ವ ಯೋಜನೆ, ಇ-ಸ್ವತ್ತು ಸೇರಿದಂತೆ 19 ಬಗೆಯ ಕೆಲಸಗಳನ್ನು ನಿಭಾಯಿಸುತ್ತಿದ್ದಾರೆ. ಪರವಾನಗಿ ಭೂಮಾಪಕರಿಗೆ ವೇತನ ತಾರತಮ್ಯ ಇದೆ ಎಂದು ಆರೋಪಿಸುತ್ತಿದ್ದಾರೆ. ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ಸುಪ್ರೀಂಕೋರ್ಟ್ ಆದೇಶವನ್ನು ಸರ್ಕಾರ ಮರೆತಂತಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಟೀಕಿಸಿದ್ದಾರೆ.
ಗ್ರಾಮೀಣ ಪ್ರದೇಶದ ರೈತರು ಕಚೇರಿಗಳಿಂದ ಕಚೇರಿಗೆ ಅಲೆದಾಡುತ್ತಿದ್ದಾರೆ. ಆದ್ದರಿಂದ ಆದಷ್ಟು ಶೀಘ್ರವಾಗಿ ಪರವಾನಗಿ ಭೂಮಾಪಕರ ಸಮಸ್ಯೆಯನ್ನು ಬಗೆಹರಿಸದಿದ್ದಲ್ಲಿ ರೈತ ಸಂಘಟನೆಗಳು ಹೋರಾಟವನ್ನು ನಡೆಸಬೇಕಾದೀತು ಎಂದು ಎಚ್ಚರಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net