ಕಲೆ, ಸಾಹಿತ್ಯ ಬೆಳವಣಿಗೆಯಿಂದ ಸಮಾಜ ಸದೃಢ

ನಗರದ ಕಿರು ರಂಗಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಧ್ವನಿ ಸ್ಕೂಲ್ ಆಫ್ ಮ್ಯೂಸಿಕ್ ಸಂಸ್ಥೆಯ ವಾರ್ಷಿಕೋತ್ಸವದಲ್ಲಿ ಕಲಾವಿದ ರಮೇಶ್ ಕುಮಾರ್ ದಂಪತಿಯನ್ನು ಸನ್ಮಾನಿಸಲಾಯಿತು. ನಾಗರಾಜ್ ವಿ.ಬೈರಿ, ಎಂ.ಆರ್.ಸತ್ಯನಾರಾಯಣ, ಜಯಪ್ಪ ಹೊನ್ನಾಳ್ಳಿ, ಡಾ ಎಂ.ಡಿ.ಸುದರ್ಶನ್, ರಶ್ಮಿಚಿಕ್ಕಮಗಳೂರು ಇದ್ದರು.
ನಗರದ ಕಿರು ರಂಗಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಧ್ವನಿ ಸ್ಕೂಲ್ ಆಫ್ ಮ್ಯೂಸಿಕ್ ಸಂಸ್ಥೆಯ ವಾರ್ಷಿಕೋತ್ಸವದಲ್ಲಿ ಕಲಾವಿದ ರಮೇಶ್ ಕುಮಾರ್ ದಂಪತಿಯನ್ನು ಸನ್ಮಾನಿಸಲಾಯಿತು. ನಾಗರಾಜ್ ವಿ.ಬೈರಿ, ಎಂ.ಆರ್.ಸತ್ಯನಾರಾಯಣ, ಜಯಪ್ಪ ಹೊನ್ನಾಳ್ಳಿ, ಡಾ ಎಂ.ಡಿ.ಸುದರ್ಶನ್, ರಶ್ಮಿಚಿಕ್ಕಮಗಳೂರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕ ಸುಗಮ ಸಂಗೀತ ಪರಿಷತ್ ಮೈಸೂರು ಜಿಲ್ಲಾಧ್ಯಕ್ಷ ನಾಗರಾಜ್ ವಿ.ಬೈರಿ ಅಭಿಮತ

ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪೋಷಿಸುವ ಸಂಘ-ಸಂಸ್ಥೆಗಳು ಉಳಿದರೆ ಸಮಾಜ ಸದೃಢವಾಗಿರುತ್ತದೆ. ಸಂಗೀತದ ಮೂಲಕ ನೆಮ್ಮದಿ ಮತ್ತು ಸಂತೋಷ ನೀಡುವುದು ಶ್ರೇಷ್ಠ ಸಮಾಜಸೇವೆಯಾಗಿದೆ ಎಂದು ಕರ್ನಾಟಕ ಸುಗಮ ಸಂಗೀತ ಪರಿಷತ್ ಮೈಸೂರು ಜಿಲ್ಲಾಧ್ಯಕ್ಷ ನಾಗರಾಜ್ ವಿ.ಬೈರಿ ಹೇಳಿದರು.

ನಗರದ ಕಿರು ರಂಗಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಧ್ವನಿ ಸ್ಕೂಲ್ ಆಫ್ ಮ್ಯೂಸಿಕ್ ಸಂಸ್ಥೆಯ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಸಂಗೀತದ ಮೂಲಕ ನೆಮ್ಮದಿ ಮತ್ತು ಸಂತೋಷ ನೀಡುವುದು ಮಹತ್ತರ ಸಮಾಜಸೇವೆ. ಇಂತಹ ಸೇವೆ ಸಲ್ಲಿಸುತ್ತಿರುವ ಎಲ್ಲರಿಗೂ ಅಭಿನಂದನೆ ಸಲ್ಲಿಸಬೇಕು. ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಪೋಷಣೆಗೆ ಸರ್ಕಾರ ಹೆಚ್ಚಿನ ಒತ್ತು ನೀಡಬೇಕು. ಸಮಾಜದಲ್ಲಿ ಇವುಗಳ ಬೆಳವಣಿಗೆ ಇಲ್ಲದಿದ್ದರೆ ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ವೆಚ್ಚ ಮಾಡಬೇಕಾಗುತ್ತದೆ. ಕಲೆ ಮತ್ತು ಸಾಹಿತ್ಯ ಬೆಳೆಯುವ ಸಮಾಜ ಸದೃಢ ಹಾಗೂ ಸಂಸ್ಕಾರಯುತವಾಗಿರುತ್ತದೆ ಎಂದರು.
ಮೈಸೂರಿನಲ್ಲಿ ಐದು ಸಾವಿರಕ್ಕೂ ಹೆಚ್ಚು ಕಲಾವಿದರಿದ್ದು, ಇಲ್ಲಿ ನಡೆಯುವಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲೂ ನಡೆಯಲ್ಲ. ಆದ್ದರಿಂದ ಕನ್ನಡ ಮತ್ತು ಸಂಸ್ಕೃ ಇಲಾಖೆ ಇಲ್ಲಿನ ಎಲ್ಲ ಕಾರ್ಯಕ್ರಮಗಳಿಗೆ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಿ ಅವಕಾಶಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ರಶ್ಮಿ ಅವರು ಕೇವಲ 8ನೇ ವಯಸ್ಸಿನಲ್ಲೇ ಸಂಗೀತಾಭ್ಯಾಸ ಆರಂಭಿಸಿದ್ದು, ಲಲಿತ ಕಲಾ ಕಾಲೇಜಿನಲ್ಲಿ ಪದವಿ ಪಡೆದು ಮೂರು ಚಿನ್ನದ ಪದಕಗಳನ್ನು ಗಳಿಸಿದ್ದಾರೆ. ಅವರ ಪ್ರತಿಭೆಯನ್ನು ಗುರುತಿಸಿ ಅದೇ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುವ ಅವಕಾಶ ದೊರೆತಿದೆ. ಸಂಗೀತದ ಸೊಗಡನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಮೈಸೂರು ಮತ್ತು ಮಂಡ್ಯದಲ್ಲಿ ಧ್ವನಿ ಸಂಗೀತ ಶಾಲೆಯನ್ನು ಸ್ಥಾಪಿಸಿ ಅನೇಕ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ. ಅಲ್ಲದೆ, ಅವರು ಅಕ್ಕ ಸಮ್ಮೇಳನದಲ್ಲಿಯೂ ಭಾಗವಹಿಸಿದ್ದು, ‘ಸುಗಮ ಸಂಗೀತಕ್ಕೆ ಮಹನೀಯರ ಕೊಡುಗೆ’ ವಿಷಯದ ಕುರಿತು ಪಿಎಚ್.ಡಿ ಪ್ರಬಂಧ ಸಲ್ಲಿಸಿದ್ದು, ಶೀಘ್ರದಲ್ಲೇ ಡಾಕ್ಟರೇಟ್ ಪಡೆಯಲಿದ್ದಾರೆ ಎಂದು ತಿಳಿಸಿದರು.
ವಿಜಯವಾಣಿ ಮೈಸೂರು ಆವೃತ್ತಿಯ ಮುಖ್ಯಸ್ಥ ಎಂ.ಆರ್.ಸತ್ಯನಾರಾಯಣ ಮಾತನಾಡಿ, ಸಂಗೀತ ಮನಸ್ಸನ್ನು ಅರಳಿಸುವ ಸಾಧನವಾಗಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಕರ್ಕಶ ಸಂಗೀತ ಮತ್ತು ಕಲುಷಿತ ಸಾಹಿತ್ಯದ ಕಡೆ ಜನರು ಆಕರ್ಷಿತರಾಗುತ್ತಿರುವುದು ವಿಷಾದನೀಯ. ರಶ್ಮಿ ಚಿಕ್ಕಮಗಳೂರು ಅವರು ಸಂಗೀತವನ್ನೇ ಉಸಿರಾಗಿಸಿಕೊಂಡು ಮೈಸೂರು ಮತ್ತು ಮಂಡ್ಯದಲ್ಲಿ ಮಕ್ಕಳಿಗೆ ಸಂಗೀತ ಶಿಕ್ಷಣ ನೀಡುವ ಮೂಲಕ ಉತ್ತಮ ಸಂಗೀತ ಸಂಸ್ಕೃತಿ ಬೆಳೆಸುತ್ತಿದ್ದಾರೆ. ಎಸ್.ಜಾನಕಿ, ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಗೂ ಸಿ.ಅಶ್ವತ್ಥ್ ಅವರಂತಹ ದಿಗ್ಗಜರೊಂದಿಗೆ ವೇದಿಕೆ ಹಂಚಿಕೊಂಡು ಹಾಡಿರುವುದು ಅವರ ಸಾಧನೆಗೆ ಸಾಕ್ಷಿಯಾಗಿದೆ. ಅವರ ಸಂಗೀತ ಸೇವೆ ಇನ್ನಷ್ಟು ವಿಸ್ತಾರವಾಗಲಿ ಎಂದು ಹಾರೈಸಿದರು.
ಸಾಹಿತಿ ಜಯಪ್ಪ ಹೊನ್ನಾಳ್ಳಿ ಮಾತನಾಡಿ, ಸಂಗೀತ ಕೇವಲ ಮನರಂಜನೆಯಲ್ಲ, ಚಿಕಿತ್ಸಕ ಗುಣಗಳನ್ನು ಹೊಂದಿರುವ ಗಂಧರ್ವ ಕಲೆಯಾಗಿದೆ. ಅನೇಕ ಕಾಯಿಲೆಗಳು ಹಾಗೂ ಮಾನಸಿಕ ಒತ್ತಡ ನಿವಾರಣೆಗೆ ಸಂಗೀತ ಸಹಕಾರಿಯಾಗಿದೆ. ಧ್ವನಿ ಸಂಸ್ಥೆ ವಾರ್ಷಿಕೋತ್ಸವ ಆಚರಿಸುತ್ತಿರುವುದು ಸಂತಸದ ಸಂಗತಿ. ಈ ಸಂಸ್ಥೆ ಇನ್ನಷ್ಟು ಬೆಳೆಯುತ್ತಾ ಶತಮಾನೋತ್ಸವ ಆಚರಿಸುವ ಮಟ್ಟಕ್ಕೆ ತಲುಪಲಿ ಎಂದು ಶುಭ ಹಾರೈಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ ಎಂ.ಡಿ.ಸುದರ್ಶನ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕೆಲವರು ಸಮರ್ಪಕ ಶೃತಿ ಮತ್ತು ಸಿದ್ಧತೆಯಿಲ್ಲದಿದ್ದರೂ ದೊಡ್ಡ ವೇದಿಕೆಗಳಲ್ಲಿ ಪ್ರದರ್ಶನ ನೀಡಲು ಮುಂದಾಗುತ್ತಾರೆ. ಆದರೆ ರಶ್ಮಿ ಚಿಕ್ಕಮಗಳೂರು ಅವರು ಗುಣಮಟ್ಟದ ಸಂಗೀತಕ್ಕೆ ಆದ್ಯತೆ ನೀಡುವ ಕಲಾವಿದೆಯಾಗಿದ್ದು, ತಮ್ಮ ಪ್ರತಿಭೆಯಿಂದ ವಿಶೇಷವಾಗಿ ಗುರುತಿಸಿಕೊಂಡಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಕಲಾವಿದ ರಮೇಶ್ ಕುಮಾರ್ ದಂಪತಿಯನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಸಂಸ್ಥಾಪಕಿ ರಶ್ಮಿ ಚಿಕ್ಕಮಗಳೂರು ಇದ್ದರು. ಬಳಿಕ ಸಂಸ್ಥೆಯ ವಿದ್ಯಾರ್ಥಿಗಳಿಂದ ನೃತ್ಯ ಮತ್ತು ಸಂಗೀತ ಕಾರ್ಯಕ್ರಮ ನೆರವೇರಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net