ಯಾವುದೇ ರಾಜಕೀಯ ಪಕ್ಷಗಳಿಂದ ಸಮಾಜ ಉದ್ಧಾರವಾಗಿಲ್ಲ: ಸಿಪಿಕೆ ಕಿಡಿ
ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಗೊಂಡಿರುವ ಪ್ರೊ.ಅರವಿಂದ ಮಾಲಗತ್ತಿ ಅವರ ಸಮಗ್ರ ಸಾಹಿತ್ಯ ಸಂಪುಟವನ್ನು ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಬಿಡುಗಡೆಗೊಳಿಸಿದರು. ಡಾ.ಮಾನಸಾ, ಪ್ರೊ.ಎನ್.ಕೆ.ಲೋಲಾಕ್ಷಿ, ಡಾ.ಎಂ.ಪ್ರಸನ್ನಕುಮಾರ್, ಡಾ.ರಾಜೇಂದ್ರ ಬಡಿಗೇರ್, ಧರಣಿದೇವಿ ಮಾಲಗತ್ತಿ, ಕೆ.ಬಿ.ಕಿರಣ್ ಸಿಂಗ್ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಹೇಳಿಕೆ
ಭವಿಷ್ಯದಲ್ಲಿ ‘ತರಲೆ ಪಕ್ಷ’ ಬಂದರೂ ಆಶ್ಚರ್ಯವಿಲ್ಲ
ಕೊಟ್ಟ ಆಶ್ವಾಸನೆಗಳನ್ನು ಯಾರೂ ಕಾರ್ಯಗತಗೊಳಿಸಲ್ಲ
ಮೈಸೂರು:
ಈಗ ಜಿರಳೆ ಪಕ್ಷ(ಕೆಜೆಪಿ) ಹುಟ್ಟಿಕೊಂಡಿದೆ. ಮುಂದಿನ ದಿನಗಳಲ್ಲಿ ತರಲೆ ಪಕ್ಷ ಹುಟ್ಟಿಕೊಂಡರೂ ಆಶ್ಚರ್ಯ ಇಲ್ಲ. ಆದರೆ, ಯಾವುದೇ ರಾಜಕೀಯ ಪಕ್ಷಗಳಿಂದ ಜನಸಾಮಾನ್ಯರಿಗೆ ಏನು ಅನುಕೂಲ ಆಗಿಲ್ಲ ಎಂದು ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ (ಸಿಪಿಕೆ) ಅಭಿಪ್ರಾಯಿಸಿದರು
ಕನ್ನಡ ಪುಸ್ತಕ ಪ್ರಾಧಿಕಾರದಿಂದ ನಗರದ ಇಂಜಿನಿಯರ್‌ಗಳ ಸಂಸ್ಥೆಯ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಪ್ರೊ.ಅರವಿಂದ ಮಾಲಗತ್ತಿ ಅವರ ಸಮಗ್ರ ಸಾಹಿತ್ಯ ಸಂಪುಟ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯಾವುದೇ ರಾಜಕೀಯ ಪಕ್ಷಗಳಿಂದ ಸಮಾಜ ಉದ್ಧಾರವಾಗಿಲ್ಲ. ಎಲ್ಲರೂ ಆರಂಭಿಕ ಶೂರರೇ. ಕೊಟ್ಟ ಆಶ್ವಾಸನೆಗಳನ್ನು ಕಾರ್ಯಗತಗೊಳಿಸಲ್ಲ ಎಂದರು.
ಸಮಾಜ, ರಾಜಕೀಯ ಕುಲಷಿತವಾಗಿದೆ. ಇದನ್ನು ಹೋಗಲಾಡಿಸಲು ಸಾಹಿತ್ಯಿಕ ಕೆಲಸ ಮಾಡಬೇಕು. ಎಲ್ಲರೂ ಭ್ರಷ್ಟಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕಿದೆ ಎಂದರು.
ಈಗಿನ ಸಮಾಜ, ರಾಜಕೀಯ ಅಸ್ವಸ್ಥವಾಗಿದೆ. ಇದನ್ನು ಸ್ವಚ್ಛ ಮತ್ತು ಸ್ವಸ್ಥಗೊಳಿಸಬೇಕು. ಮಾನವೀಯಗೊಳಿಸಬೇಕಿದೆ ಸಹ. ಇದು ಸಾಹಿತ್ಯ, ಕಲೆಗಳಿಂದ ಸಾಧ್ಯ. ಆ ಕೆಲಸವನ್ನು ಪ್ರೊ.ಅರವಿಂದ ಮಾಲಗತ್ತಿ ಮಾಡಿದ್ದಾರೆ ಎಂದು ಹೇಳಿದರು.
‘ಆತ್ಮಕಥೆ ಏಕೆ ಬರೆದಿಲ್ಲ’ ಎಂದು ಬಹಳಷ್ಟು ಜನರು ಕೇಳುತ್ತಾರೆ. ಅದಕ್ಕೆ ನಾನು, ‘ನನಗೆ ಆತ್ಮವಿಲ್ಲ’ ಎಂದು ಪ್ರತಿ ಉತ್ತರ ಕೊಡುವೆ. ಬಹಳಷ್ಟು ಆತ್ಮಕಥೆಗಳು ಪ್ರಾಮಾಣಿಕವಾಗಿ ಇರಲ್ಲ. ಬದುಕಿನ ಎಲ್ಲ ಸಂಗತಿಗಳನ್ನೂ ಹೇಳಿಕೊಂಡರೆ ಮಾನ ಮರ್ಯಾದೆಯೇ ಉಳಿಯಲ್ಲ.
ಆದರೆ, ಪ್ರೊ.ಮಾಲಗತ್ತಿ ಅವರ ಆತ್ಮಕಥೆ ‘ಗೌರ್ಮೆಂಟ್ ಬ್ರಾಹ್ಮಣ’ ಕೃತಿಯಲ್ಲಿ ಆತ್ಮ ಇದೆ. ಅದು ಅವರ ಪತ್ನಿ ಧರಣಿದೇವಿ ಅವರೇ ಆ ಆತ್ಮ. ಅವರು ಜೀವನದ ಎಲ್ಲ ಸಂಗತಿಗಳನ್ನೂ ಮುಕ್ತವಾಗಿ ಬರೆದುಕೊಂಡಿದ್ದಾರೆ ಎಂದು ಪ್ರಶಂಸಿಸದರು.
ಪ್ರೊ.ಮಾಲಗತ್ತಿ ಅವರು ಕನ್ನಡ ಮಹತ್ವ ಪೂರ್ಣ, ಬಹುಮುಖಿ ಲೇಖಕ. ಅವರ ಅಷ್ಟ ಸಂಪುಟಗಳ ಸಂಗ್ರಹವು ದಿಗ್ಗಜ ಸಮಗ್ರ ಸಾಹಿತ್ಯ ಸಂಪುಟವಾಗಿ ಹೊರಬಂದಿದೆ. ಅವರ ಎಲ್ಲ ಸಾಧನೆಗಳ ಆಯಾಮದಲ್ಲೂ ಗಮನಿಸಿದರೆ ಅವರೊಬ್ಬ ದೈತ್ಯಸಾಧಕ. ಸಾಹಿತ್ಯವಷ್ಟೇ ಅಲ್ಲ, ವ್ಯಕ್ತಿತ್ವದಲ್ಲೂ ಅನೇಕ ನೆಲೆಗಳಲ್ಲಿ ಸಾಧಕರೇ. ಅವರ ಸಾಹಿತ್ಯವು ಮಾನವೀಯ, ಪಕ್ಷಾತೀತವಾಗಿದೆ ಎಂದು ಹೇಳಿದರು.
ಮೂಕ ಸಮುದಾಯಗಳ ಧ್ವನಿಯಾದವರು ಪ್ರೊ.ಮಾಲಗತ್ತಿ. ಒಂದು ಪರಂಪರೆಗೆ ಸೇರದ ಅವರದ್ದು ವಿಶಿಷ್ಟ ವ್ಯಕ್ತಿತ್ವ. ಅವರ ಪ್ರತಿಭೆ ಸಹ ವಿಶಿಷ್ಟವೇ. ಎಲ್ಲ ಸಾಹಿತ್ಯ ಪ್ರಕಾರದಲ್ಲೂ ಕೆಲಸ ಮಾಡಿದ್ದಾರೆ. ಆದರೆ, ಇಂತಹವರ ಸಂಖ್ಯೆ ವಿರಳ. ಅವರ ಅಕ್ಷರ ಕೃಷಿಯಲ್ಲಿ ದ್ವೇಷ, ಅಸೂಯೆ ಇಲ್ಲ. ಬಹುಸೃಷ್ಟಿಯ ಬರಹಗಾರ. ಶಿಸ್ತು ಅವರ ಜೀವನದ ಪ್ರಮುಖ ಲಕ್ಷಣ ಎಂದರು.
ಪ್ರೊ.ಮಾಲಗತ್ತಿ ಅವರದ್ದು ದಲಿತ, ಬಂಡಾಯ ಸಾಹಿತ್ಯವಷ್ಟೇ ಅಲ್ಲ, ಅದರಾಚೆ ಸಹ ಸಾಹಿತ್ಯ ಕೃಷಿ ಮಾಡಿದ್ದಾರೆ. ಅದರಲ್ಲಿ ವೈಚಾರಿಕತೆ, ದಾರ್ಶನಿಕತೆ ಇದೆ. ಅವರ ಸಾಹಿತ್ಯದಲ್ಲೂ ದೋಷ ಇರಬಹುದು. ಆದರೆ, ದ್ವೇಷ ಇಲ್ಲ ಎಂದರು.
ಎಲ್ಲ ಬರಹವೂ ಸೃಜನಶೀಲವೇ. ಪ್ರೇಮಪತ್ರ ಸಹ ಹೌದು. ಹಿಂದೆ ಸಾಹಿತ್ಯ ಕೃತಿಗಳ ಬಿಡಿಬಿಡಿಯಾದ ಕಾಲ. ಈಗ ಸಮಗ್ರ ಸಾಹಿತ್ಯ ಸಂಪುಟಗಳ ಕಾಲ. ಇದರಿಂದ ವಾಚಕರಿಗೆ ಅನುಕೂಲವಾಗುತ್ತದೆ ಎಂದರು.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಮಾತನಾಡಿ, ಭಕ್ತಿಯ ಸಂಕೇತವಾದ ದೇವಸ್ಥಾನ ಮನೆಯ ಹೊರಗೆ ಇರಬೇಕಿತ್ತು. ಜ್ಞಾನದ ಸಂಕೇತವಾದ ಗ್ರಂಥಾಲಯ ಮನೆಯೊಳಗೆ ಇರಬೇಕು. ಆದರೀಗ ಉಲ್ಟಾಪಲ್ಟಾ ಆಗಿದೆ. ಹೀಗಾಗಿಯೇ, ಮನೆಗೊಂದು ಗ್ರಂಥಾಲಯ ಕಾರ್ಯಕ್ರಮ ರೂಪಿಸಲಾಗಿದೆ. ಟೀಕೆಗಳ ನಡುವೆಯೂ ಇದಕ್ಕೆ ಉತ್ತಮ ಸ್ಪಂದನೆ ದೊರೆತಿದೆ ಎಂದರು ಹೇಳಿದರು.