ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ನಡೆದ ಮ್ಯಾನ್.ಕಾಮ್ ಫೆಸ್ಟ್‌ನಲ್ಲಿ ಸೇಫಿಯಂಟ್ ಕಾಲೇಜಿಗೆ ಸಮಗ್ರ ಪ್ರಶಸ್ತಿಯನ್ನು ಮೈವಿವಿ ಹಣಕಾಸು ಅಧಿಕಾರಿ ಕೆ.ಎಸ್. ರೇಖಾ ಪ್ರದಾನ ಮಾಡಿದರು. ಅಂಶಿ ಪ್ರಸನ್ನಕುಮಾರ್, ವಿದ್ಯಾಸಾಗರ ಮರಾಲ, ಮೇಘನಾ ರವಿಕುಮಾರ್, ಡಾ.ರೇಚಣ್ಣ, ಡಾ.ವಿ. ಗಂಗಾಧರಸ್ವಾಮಿ ಇದ್ದರು.
Published on:
Copied
Follow Us
ಮೈಸೂರು: ವಿದ್ಯಾರ್ಥಿಗಳಿಗೆ ಸೃಜನಾತ್ಮಕತೆ ಹಾಗೂ ಸಾಮಾಜಿಕ ಜವಾಬ್ದಾರಿ ಮುಖ್ಯ ಎಂದು ಮೈಸೂರು ವಿಶ್ವವಿದ್ಯಾಲಯ ಹಣಕಾಸು ಅಧಿಕಾರಿ ಕೆ.ಎಸ್.ರೇಖಾ ಹೇಳಿದರು.
ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರ ವಿಭಾಗದ ವತಿಯಿಂದ ಶನಿವಾರ ಆಯೋಜಿಸಿದ್ದ ‘ಆವಿಷ್ಕಾರ-2026 ಆರೋಹಣ’ ರಾಜ್ಯ ಮಟ್ಟದ ಮ್ಯಾನ್.ಕಾಮ್ ಫೆಸ್ಟ್ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಬೇರೆಯವರ ಜತೆ ಹೋಲಿಕೆ ಮಾಡಿಕೊಳ್ಳುವುದನ್ನು ಬಿಡಬೇಕು. ನಿಮ್ಮೊಂದಿಗೆ ನಿಮ್ಮ ಸ್ಪರ್ಧೆ ಇರಬೇಕು. ಇದರಿಂದ ಅತ್ಯುತ್ತಮ ಬದಲಾವಣೆ ಆಗಿ ಮುತ್ತಮ ಜೀವನ ರೂಪಿಸಿಕೊಳ್ಳಬಹುದು. ಹೀಗಾಗಿ ವಿದ್ಯಾರ್ಥಿಗಳು ಆಯ್ದುಕೊಳ್ಳುವ ಕ್ಷೇತ್ರದಲ್ಲಿ ಶ್ರದ್ಧೆಯಿಂದ ತೊಡಗಿಸಿಕೊಂಡು ಸಾಧನೆಯತ್ತ ಮುನ್ನುಗ್ಗಬೇಕು. ಸಾಮಾಜಿಕ ಜವಾಬ್ದಾರಿಯನ್ನು ರೂಢಿಸಿಕೊಂಡು ದೇಶದ ಪ್ರಗತಿಗೆ ಕೈಜೋಡಿಸಬೇಕು. ಪರಿಸರ, ಸ್ವಚ್ಛತೆ, ಪ್ಲಾಸ್ಟಿಕ್ ನಿರ್ಮೂಲನೆ ಮೊದಲಾದ ಸುತ್ತಮುತ್ತಲಿನ ವಿಷಯಗಳ ಬಗ್ಗೆ ಕೂಡ ಗಮನ ನೀಡಬೇಕು. ಸಾಮಾಜಿಕ ಜಾಲತಾಣವನ್ನು ಜ್ಞಾನಕ್ಕಾಗಿ ಮಾತ್ರ ಬಳಸಬೇಕು ಎಂದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಉದ್ಯೋಗಾವಕಾಶಕ್ಕಾಗಿ ವಿದ್ಯಾರ್ಥಿಗಳು ಕೇವಲ ಪದವಿ ಪಡೆದರೆ ಸಾಲದು. ಕೌಶಲ ಹಾಗೂ ಸಂವಹನ ಕೌಶಲವನ್ನು ಬೆಳೆಸಿಕೊಳ್ಳಬೇಕು ಎಂದರು.
ಪ್ರಸ್ತುತ ಸಂದರ್ಭದಲ್ಲಿ ನಿರ್ವಹಣಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಉದ್ಯೋಗವಕಾಶಗಳು ದೊರೆಯುತ್ತವೆ. ದೇಶದ ಆರ್ಥಿಕ ಪ್ರಗತಿಯಲ್ಲಿ ಇವರು ಗಣನೀಯ ಪಾತ್ರವಹಿಸುತ್ತಾರೆ. ವಾಣಿಜ್ಯ ಶಾಸ್ತ್ರದ ವಿದ್ಯಾರ್ಥಿಗಳಿಗೆ ಒಂದು ವಸ್ತುವಿನ ಉತ್ಪಾದನೆ ಮತ್ತು ಮಾರಾಟ ಮಾಡುವ ಕುಶಲತೆ ಇರುತ್ತದೆ ಎಂದರು.
ನಾಯಕತ್ವದ ಗುಣ ಮತ್ತು ಸದೃಢವಾದ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಇಂತಹ ವೇದಿಕೆಗಳು ಪ್ರಧಾನ ಪಾತ್ರವನ್ನು ವಹಿಸುತ್ತವೆ. ಭೂಮಿಯಿಂದ ಆಕಾಶದವರೆಗೆ ಮಹಿಳೆಯರು ಗಣನೀಯ ಸಾಧನೆ ಮಾಡಿದ್ದಾರೆ. ತಾವೆಲ್ಲರೂ ಕೌಶಲತೆಯನ್ನು ರೂಢಿಸಿಕೊಳ್ಳಿ ಎಂದರು.
ಬ್ಯಾಂಕ್ ಆಫ್ ಬರೋಡದ ಉಪ ಪ್ರಾದೇಶಿಕ ಮುಖ್ಯಸ್ಥ ವಿದ್ಯಾಸಾಗರ್ ಮರಾಲ ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ವಾಣಿಜ್ಯಶಾಸ್ತ್ರವು ಪ್ರಮುಖ ಜ್ಞಾನಶಾಖೆಯಾಗಿದೆ. ಇಂತಹ ವೇದಿಕೆಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಜೀವನದಲ್ಲಿ ಪ್ರಗತಿ ಸಾಧಿಸಿ, ಉನ್ನತ ಶಿಕ್ಷಣದಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ಎಂದು ಸಲಹೆ ನೀಡಿದರು.
ಮೇರಾ ಈವೆಂಟನ್ಸ್ ಸಂಸ್ಥಾಪಕಿಯಾದ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಮೇಘನಾ ರವಿಕುಮಾರ್ ಅವರು ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡಿ, ಜೆಎಸ್‌ಎಸ್ ಸಂಸ್ಥೆ ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿರುವ ಕೊಡುಗೆಯನ್ನು ಶ್ಲಾಘಿಸಿ, ಜೀವನದಲ್ಲಿ ಪೂರ್ಣತ್ವ ಸಾಧಿಸಲು ಕ್ರಿಯಾಶೀಲ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ ಎಂದರು.
ಪ್ರಾಂಶುಪಾಲ ಡಾ. ರೇಚಣ್ಣ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ವಿ. ಗಂಗಾಧರಸ್ವಾಮಿ, ಫೆಸ್ಟ್ ಸಂಚಾಲಕಿ ಎಂ.ಕೆ. ಉಷಾರಾಣಿ, ಸಹ ಸಂಚಾಲಕಿ ಡಾ.ಎಸ್. ಗೀತಾ ಇದ್ದರು.