ಶಾರದಾವಿಲಾಸ ಔಷಧ ಮಹಾವಿದ್ಯಾಲಯದಲ್ಲಿ ಕೌಶಲ ಅಭಿವೃದ್ಧಿ ಕಾರ್ಯಕ್ರಮ

 ಮೈಸೂರಿನ ಶಾರದಾವಿಲಾಸ ಔಷಧ ಮಹಾವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಕೌಶಲ ಅಭಿವೃದ್ಧಿ ಕಾರ್ಯಕ್ರಮವನ್ನು ಶಾರದಾವಿಲಾಸ ಶಿಕ್ಷಣ ಸಂಸ್ಥೆ  ಗೌರವ ಕಾರ್ಯದರ್ಶಿ ಆರ್. ದಿನೇಶ್ ಉದ್ಘಾಟಿಸಿದರು. ಪ್ರೊ.ಟಿ.ಕೆ. ಉಮೇಶ್, ಡಾ.ಹನುಮಂತಚಾರ್ ಜೋಶಿ, ಶುಭಜೀತ್ ಘೋಷ್ ಇದ್ದರು.
ಮೈಸೂರಿನ ಶಾರದಾವಿಲಾಸ ಔಷಧ ಮಹಾವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಕೌಶಲ ಅಭಿವೃದ್ಧಿ ಕಾರ್ಯಕ್ರಮವನ್ನು ಶಾರದಾವಿಲಾಸ ಶಿಕ್ಷಣ ಸಂಸ್ಥೆ ಗೌರವ ಕಾರ್ಯದರ್ಶಿ ಆರ್. ದಿನೇಶ್ ಉದ್ಘಾಟಿಸಿದರು. ಪ್ರೊ.ಟಿ.ಕೆ. ಉಮೇಶ್, ಡಾ.ಹನುಮಂತಚಾರ್ ಜೋಶಿ, ಶುಭಜೀತ್ ಘೋಷ್ ಇದ್ದರು.
Published on
ಮೈಸೂರು: ವಿದ್ಯಾರ್ಥಿಗಳು ಕೇವಲ ಪದವಿ ಶಿಕ್ಷಣ ಪಡೆದರೆ ಮಾತ್ರ ಸಾಲದು, ಪದವಿಯೊಂದಿಗೆ ಕೌಶಲ ಪಡೆದರೆ ಮಾತ್ರ ಈ ಪೈಪೋಟಿಯ ಯುಗದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಶಾರದಾವಿಲಾಸ ಶಿಕ್ಷಣ ಸಂಸ್ಥೆ ಗೌರವ ಕಾರ್ಯದರ್ಶಿ ಆರ್. ದಿನೇಶ್ ಅಭಿಪ್ರಾಯಪಟ್ಟರು.
ಶಾರದಾವಿಲಾಸ ಔಷಧ ಮಹಾವಿದ್ಯಾಲಯ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಕೌಶಲ ಅಭಿವೃದ್ಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಫಾರ್ಮಸಿ ಶಿಕ್ಷಣ ಪಡೆದವರಿಗೆ ವಿಶ್ವದ ಹಲವು ಕಡೆಗಳಲ್ಲಿ ಉದ್ಯೋಗ ಪಡೆದುಕೊಳ್ಳುವ ಅವಕಾಶ ಇದೆ. ಆದರೆ, ಇದಕ್ಕೆ ಶಿಕ್ಷಣದ ಜತೆಗೆ ಅನುಭವ, ಕೌಶಲ, ವಿಷಯದ ಬಗ್ಗೆ ಅಪಾರವಾದ ಜ್ಞಾನ ಅವಶ್ಯಕ ಎಂದರು.
ಫಾರ್ಮಸಿಸ್ಟ್‌ಗಳಿಗೆ ಔಷಧಗಳ ಕುರಿತು ಸಂಪೂರ್ಣ ಜ್ಞಾನ ಇರಬೇಕು. ಜತೆಗೆ ಇಂದಿನ ತಾಂತ್ರಿಕತೆಯ ಪರಿಚಯ ಇರಬೇಕು. ಜಗತ್ತು ತಾಂತ್ರಿಕವಾಗಿ ಸಾಕಷ್ಟು ಮುಂದುವರೆಯುತ್ತಿದ್ದು, ಈ ಬದಲಾವಣೆಗೆ ಪೂರಕವಾಗಿ ನಾವು ಸಹ ಎಲ್ಲ ಮಾಹಿತಿಯನ್ನು ತಿಳಿದುಕೊಂಡಿರಬೇಕು. ಇದಕ್ಕೆ ನಿರಂತರ ಅಧ್ಯಯನದ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.
ಡಿಜಿಟಲ್ ಯುಗದಲ್ಲಿ ಔಷಧ ಸಹ ಜನರ ಮನೆ ಬಾಗಿಲಿಗೆ ತಲುಪುತ್ತಿದೆ. ಜತೆಗೆ ಕೃತಕ ಬುದ್ಧಿಮತ್ತೆ ಬಳಕೆ ಮಾಡಿಕೊಂಡು ಔಷಧ ತಯಾರಿಸಲಾಗುತ್ತಿದೆ. ವಿವಿಧ ಕಾಯಿಲೆಗಳಿಗೆ ಒಂದೇ ಔಷಧ ತಯಾರಿಸುವ ಪ್ರಯತ್ನ ನಡೆಯುತ್ತಿದೆ. ಈ ಎಲ್ಲ ವೈದ್ಯಕೀಯ ಬೆಳವಣಿಗೆಯ ಬಗ್ಗೆ ಮಾಹಿತಿ ಹೊಂದಿರಬೇಕು ಎಂದು ಹೇಳಿದರು.
ಫಾರ್ಮಸಿಸ್ಟ್‌ಗಳು ರೋಗಿಗಳಿಗೆ ಔಷಧ ನೀಡುವ ಸಂದರ್ಭ ಔಷಧವನ್ನು ಯಾವ ಸಂದರ್ಭದಲ್ಲಿ ಎಷ್ಟು ಪ್ರಮಾಣದಲ್ಲಿ ತೆಗೆದುಕೊ ಳ್ಳಬೇಕು ಹಾಗೂ ಅದರಿಂದ ಆಗುವ ಅಡ್ಡ ಪರಿಣಾಮಗಳು ಏನು ಎಂಬ ಕುರಿತು ರೋಗಿಗಳಿಗೆ ಮಾಹಿತಿ ನೀಡಬೇಕು. ಸಾಕಷ್ಟು ರೋಗಿಗಳು ವೈದ್ಯರಿಂದ ಸರಿಯಾದ ಮಾಹಿತಿ ಪಡೆದು ಬಂದಿರುವುದಿಲ್ಲ. ಅಂತಹವರಿಗೆ ಔಷಧದ ಕುರಿತು ಸಂಪೂರ್ಣ ಮಾಹಿತಿ ನೀಡುವ ಜವಾಬ್ದಾರಿ ಫಾಮಸಿಸ್ಟ್‌ಗಳ ಮೇಲಿದೆ ಎಂದರು.
ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಟಿ.ಕೆ. ಉಮೇಶ್ ಮಾತನಾಡಿ, ಕೋವಿಡ್ ನಂತರ ಔಷಧ ಕ್ಷೇತ್ರಕ್ಕೆ ಸಾಕಷ್ಟು ಬೇಡಿಕೆ ಹೆಚ್ಚಾಗಿದ್ದು, ಫಾರ್ಮಸಿಸ್ಟ್‌ಗಳಿಗೆ ಸಾಕಷ್ಟು ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ. ವರ್ಷಗಳು ಕಳೆದಂತೆ ಕಾಯಿಲೆಗಳ ಸಂಖ್ಯೆ ವೃದ್ಧಿಯಾಗುತ್ತಿದೆಯೇ ಹೊರತು ಕಡಿಮೆಯಾಗುತ್ತಿಲ್ಲ. ಹೀಗಾಗಿ ಫಾರ್ಮಸಿಸ್ಟ್‌ಗಳಿಗೂ ಬೇಡಿಕೆ ಹೆಚ್ಚಾಗಲಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಪ್ರಾಂಶುಪಾಲ ಡಾ.ಹನುಮಂತಚಾರ್ ಜೋಶಿ, ಪ್ಲೇಸ್ಮೆಂಟ್ ಆಫೀಸರ್ ಶುಭಜೀತ್ ಘೋಷ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net