ಹಾಡು, ಕುಣಿತ, ಸಂಭ್ರಮ...

ಹಾಡು, ಕುಣಿತ, ಸಂಭ್ರಮ
ಹಾಡು, ಕುಣಿತ, ಸಂಭ್ರಮ
Published on
ಹೊಸ ವರ್ಷದ ಪ್ರಯುಕ್ತ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬುಧವಾರ ರಾತ್ರಿ ಸಂಭ್ರಮ ಮನೆ ಮಾಡಿತ್ತು. ತಡರಾತ್ರಿವರೆಗೂ ಹಾಡು, ಕುಣಿತದಲ್ಲಿ ಮುಳುಗಿದ ಜನತೆ 2025ಕ್ಕೆ ವಿದಾಯ ಹೇಳಿ 2026 ಅನ್ನು ಸಂಭ್ರಮದಿಂದ ಬರಮಾಡಿಕೊಂಡರು. ಹೊಸ ವರ್ಷದ ಸ್ವಾಗತಕ್ಕೆ ನಗರದ ಪ್ರಮುಖ ಹೋಟೆಲ್‌ಗಳು, ರೆಸಾರ್ಟ್‌ಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಹೋಟೆಲ್, ರೆಸಾರ್ಟ್‌ಗಳು ಬೆಳಕಿನ ವೈಭವದಲ್ಲಿ ಕಂಗೊಳಿಸಿದವು.
ಮಧ್ಯರಾತ್ರಿ 12 ಗಂಟೆ ಸಮೀಪಿಸುತ್ತಿದ್ದಂತೆ ಜನರು ಪಟಾಕಿಗಳನ್ನು ಸಿಡಿಸಿ, ಕೇಕ್ ಕತ್ತರಿಸಿ, ಹೊಸ ವರ್ಷದ ಶುಭಾಶಯ ವಿನಿಮಯ ಮಾಡಿಕೊಂಡರು. ಸಾಮಾನ್ಯವಾಗಿ ರಾತ್ರಿ 10 ಗಂಟೆಗೆ ಶಾಂತವಾಗುವ ನಗರ ಹೊಸವರ್ಷದ ಪ್ರಯುಕ್ತ ಮಧ್ಯರಾತ್ರಿವರೆಗೂ ಚಟುವಟಿಕೆಯಿಂದ ಕೂಡಿತ್ತು. ಪ್ರಮುಖ ರಸ್ತೆ, ಹೋಟೆಲ್, ರೆಸಾರ್ಟ್‌ಗಳಲ್ಲಿ ಜನಜಾತ್ರೆಯೇ ನೆರೆದಿತ್ತು. ಮಧ್ಯರಾತ್ರಿ 1 ಗಂಟೆ ಒಳಗೆ ಹೊಸ ವರ್ಷಾಚರಣೆ ಕಾರ್ಯಕ್ರಮ ಮುಕ್ತಾಯಗೊಳಿಸಬೇಕೆಂಬ ಪೊಲೀಸರ ನಿರ್ದೇಶನಕ್ಕೆ ಬಹುತೇಕರು ಬೆಲೆ ನೀಡಲಿಲ್ಲ. ಸಾಕಷ್ಟು ರೆಸಾರ್ಟ್, ಹೋಟೆಲ್‌ಗಳಲ್ಲಿ ತಡರಾತ್ರಿವರೆಗೂ ಸಂಭ್ರಮಾಚರಣೆ ಮುಂದುವರಿದಿತ್ತು.

ಬಿಗಿ ಪೊಲೀಸ್ ಬಂದೋಬಸ್ತ್

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ನೇತೃತ್ವದಲ್ಲಿ ಬುಧವಾರ ರಾತ್ರಿ ಬಿಗಿ ಪೊಲೀಸ್ ಬಂದೋಬಸ್ತ್ ಹಮ್ಮಿಕೊಳ್ಳಲಾಗಿತ್ತು. ಎಲ್ಲೆಡೆ ಪೊಲೀಸ್ ಕಣ್ಗಾವಲು ಏರ್ಪಡಿಸಲಾಗಿತ್ತು. ಅಹಿತಕರ ಘಟನೆಯನ್ನು ತಪ್ಪಿಸುವ ಸಲುವಾಗಿ ಚಾಮುಂಡಿಬೆಟ್ಟದಲ್ಲಿ ಬುಧವಾರ ರಾತ್ರಿ ಹೊಸ ವರ್ಷ ಆಚರಣೆ ನಿಷೇಧಿಸಲಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net