ಗೂಡು ಕಟ್ಟುವ ಹಂತದಲ್ಲಿ ಎಡುವುತ್ತಿರುವ ಬೆಳೆಗಾರರು

ನಂಜನಗೂಡು ತಾಲೂಕು ತಗಡೂರು ಗ್ರಾಮದಲ್ಲಿ ರೇಷ್ಮೆ ಇಲಾಖೆ ಪುನಶ್ಚೇತನ ಕಟ್ಟಡ ಉದ್ಘಾಟನೆ, ರೇಷ್ಮೆ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮವನ್ನು ನಿವೃತ್ತ ಉಪನಿರ್ದೇಶಕ ಡಾ.ವೈ.ಎನ್.ಚಿಗರಿ ಉದ್ಘಾಟಿಸಿದರು. ನಾಗರಾಜ್, ಶೈಲಾ ಇದ್ದರು.
ನಂಜನಗೂಡು ತಾಲೂಕು ತಗಡೂರು ಗ್ರಾಮದಲ್ಲಿ ರೇಷ್ಮೆ ಇಲಾಖೆ ಪುನಶ್ಚೇತನ ಕಟ್ಟಡ ಉದ್ಘಾಟನೆ, ರೇಷ್ಮೆ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮವನ್ನು ನಿವೃತ್ತ ಉಪನಿರ್ದೇಶಕ ಡಾ.ವೈ.ಎನ್.ಚಿಗರಿ ಉದ್ಘಾಟಿಸಿದರು. ನಾಗರಾಜ್, ಶೈಲಾ ಇದ್ದರು.
Published on
ನಂಜನಗೂಡು: ರೇಷ್ಮೆ ಬೆಳೆಗಾರರು ಉತ್ತಮ ಇಳುವರಿ ಪಡೆಯುತ್ತಿದ್ದು ಗೂಡು ಕಟ್ಟುವ ಹಂತದಲ್ಲಿ ಎಡುವುತ್ತಿದ್ದಾರೆ. ಆದ್ದರಿಂದಲೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತದ ರೇಷ್ಮೆ ಗೂಡಿಗೆ ಸರಿಯಾದ ಬೇಡಿಕೆ ಸಿಗುತ್ತಿಲ್ಲ ಎಂದು ರೇಷ್ಮೆ ಇಲಾಖೆ ನಿವೃತ್ತ ಉಪ ನಿರ್ದೇಶಕ ಡಾ.ವೈ.ಎನ್.ಚಿಗರಿ ಅಭಿಪ್ರಾಯಪಟ್ಟರು.
ತಾಲೂಕಿನ ತಗಡೂರು ಗ್ರಾಮದಲ್ಲಿ ಶುಕ್ರವಾರ ರೇಷ್ಮೆ ಇಲಾಖೆ ಪುನಶ್ಚೇತನ ಕಟ್ಟಡದ ಕಾಮಗಾರಿ ಉದ್ಘಾಟನೆ, ಕ್ಷೇತ್ರೋತ್ಸವ ಹಾಗೂ ಒಂದು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಲವು ವರ್ಷಗಳಿಂದ ಗ್ರಾಮದಲ್ಲಿದ್ದ ರೇಷ್ಮೆ ಕಟ್ಟಡ ನಿರ್ಲಕ್ಷೃಕ್ಕೆ ಒಳಗಾಗಿತ್ತು. ಹಲವು ಅಧಿಕಾರಿಗಳು ಈ ಭಾಗದಲ್ಲಿ ಕೆಲಸ ನಿರ್ವಹಿಸಿದ್ದರು ಕೂಡ ಕಟ್ಟಡ ಬಳಕೆಯಾಗದೆ ನಿರುಪಯುಕ್ತವಾಗಿತ್ತು. ಆದರೆ, ಇಂದು ಕಚೇರಿಗೆ ಕಾಯಕಲ್ಪ ದೊರೆತಿರುವುದು ರೈತರಿಗೆ ಅನುಕೂಲವಾಗಿದೆ. ಈ ಭಾಗದಲ್ಲಿ ಕೇವಲ ಸಿನಿಚಿ ರೇಷ್ಮೆ ಬೆಳೆಯುತ್ತಿದ್ದರು. ಈಗ ಕಾಲ ಬದಲಾದಂತೆ ಈ ಭಾಗದಲ್ಲಿ ಬೈಯೋಲ್ಟಿನ್ ಬೆಳೆಯುತ್ತಿರುವುದು ಸಂತೋಷ ತಂದಿದೆ. ಈ ಬೆಳೆ ಬೆಳೆಯುವುದರಿಂದ ಹೆಚ್ಚಿನ ದರ ಕೂಡ ಸಿಗುತ್ತದೆ. ಎಲ್ಲ ಬೆಳೆಗಳಿಗೆ ಹೋಲಿಸಿದರೆ ರೇಷ್ಮೆ ಬೆಳೆಯಲ್ಲಿ ಸಾಕಷ್ಟು ಲಾಭವಿದೆ. ರೇಷ್ಮೆ ಬೆಳೆಗಾರರು ಸೊಪ್ಪು, ವಾತಾವರಣ, ಸ್ವಚ್ಛತೆ, ಮೊಟ್ಟೆಗಳ ಬಗ್ಗೆ ಸಾಕಷ್ಟು ಗಮನಹರಿಸಬೇಕಾಗಿದೆ ಎಂದರು.
ಕುದೇರು ರೇಷ್ಮೆ ಇಲಾಖೆ ಉಪನಿರ್ದೇಶಕ ಮಂಜುನಾಥ್ ಮಾತನಾಡಿ, ರೈತರು ರೇಷ್ಮೆ ಬೆಳೆ ಬೆಳೆಯಲು ತಾಂತ್ರಿಕವಾಗಿ ಸಾಕಷ್ಟು ಸುಧಾರಣೆಗಳನ್ನು ಅನುಸರಿಸಬೇಕು. ಮುಖ್ಯವಾಗಿ ರೇಷ್ಮೆ ಬೆಳೆಯಲು ಸೊಪ್ಪು ಗುಣಮಟ್ಟದಿಂದ ಕೂಡಿರಬೇಕು. ಸೊಪ್ಪಿಗೆ ತೆಗೆದುಕೊಳ್ಳುವ ರೋಗಗಳನ್ನು ಗುರುತಿಸಿ, ಔಷಧಗಳನ್ನು ಸಿಂಪಡಣೆ ಮಾಡಬೇಕು. ಬೇವಿನ ಎಣ್ಣೆಯನ್ನು ಉಪಯೋಗಿಸುವುದು ಬಹಳ ಉತ್ತಮವಾಗಿದೆ. ಹಿಪ್ಪು ನೇರಳೆ ಕಡ್ಡಿಯನ್ನು ಬಿಸಾಡುವ ಬದಲು ಟ್ರೆಂಚಿಂಗ್, ಮಲ್ಚಿಂಗ್ ಪದ್ಧತಿ ಅನುಸರಿಸಿದರೆ ಸೊಪ್ಪು ಫಲವತ್ತಾಗಿ ಬೆಳೆಯುತ್ತದೆ ಎಂದು ಹೇಳಿದರು.
ನಂಜನಗೂಡು ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜು, ತಗಡೂರು ರೇಷ್ಮೆ ವಿಸ್ತರಣಾಧಿಕಾರಿ ಶೈಲಾ, ನಿವೃತ್ತ ಸಹಾಯಕ ನಿರ್ದೇಶಕ ಶಿವಣ್ಣ, ಪಿಡಿಒ ಮಾರಶೆಟ್ಟಿ, ಪರಮೇಶ್ವರಪ್ಪ, ಸತ್ಯನಾರಾಯಣ, ಅಶ್ವಿನ್, ತಾಪಂ ಮಾಜಿ ಸದಸ್ಯ ನಾಗಪ್ಪ, ಚಿನ್ನಂಬಳ್ಳಿ ಚಿಕ್ಕ ಬುದ್ಧಿ, ಮಹೇಶ್ ದೊಡ್ಡಯ್ಯ, ನಾಗರಾಜು, ಮಂಜು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net