ಸಿದ್ಧಗಂಗಾಶ್ರೀ ಆದರ್ಶ ಅನುಕರಣೀಯ

ಶ್ರೀ ಡಾ. ಶಿವಕುಮಾರ ಸ್ವಾಮೀಜಿಗಳ 119ನೇ ಜಯಂತಿ ಅಂಗವಾಗಿ ಪಿರಿಯಾಪಟ್ಟಣದಲ್ಲಿ ಅನ್ನ ಸಂತರ್ಪಣೆ ನಡೆಸಲಾಯಿತು.
ಶ್ರೀ ಡಾ. ಶಿವಕುಮಾರ ಸ್ವಾಮೀಜಿಗಳ 119ನೇ ಜಯಂತಿ ಅಂಗವಾಗಿ ಪಿರಿಯಾಪಟ್ಟಣದಲ್ಲಿ ಅನ್ನ ಸಂತರ್ಪಣೆ ನಡೆಸಲಾಯಿತು.
Published on
ಪಿರಿಯಾಪಟ್ಟಣ : ನಡೆದಾಡುವ ದೇವರು, ತ್ರಿವಿಧ ದಾಸೋಹಿ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ದಾಸೋಹ ಕಾರ್ಯದಲ್ಲಿ ವಿಶ್ವಕ್ಕೆ ಮಾದರಿಯಾಗಿದ್ದು, ಅವರ ಬದುಕಿನ ಆದರ್ಶ, ಚಿಂತನೆ, ಕಾರ್ಯಗಳು ಅಜರಾಮರವಾಗಿವೆ ಎಂದು ಪುರಸಭೆ ಮಾಜಿ ಸದಸ್ಯ ಎಚ್.ಕೆ.ಮಂಜುನಾಥ್ ತಿಳಿಸಿದರು.
ಪಟ್ಟಣದಲ್ಲಿ ಶ್ರೀ ಡಾ. ಶಿವಕುಮಾರ ಸ್ವಾಮೀಜಿಗಳ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಶ್ರೀಗಳ 119ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. 12ನೇ ಶತಮಾನದ ಶರಣರ ಸಾಮಾಜಿಕ ಕ್ರಾಂತಿಯನ್ನು 20ನೇ ಶತಮಾನದಲ್ಲಿ ಅನುಷ್ಠಾನಗೊಳಿಸಿದ ಕೀರ್ತಿ ಸಿದ್ಧಗಂಗಾಶ್ರೀಗಳಿಗೆ ಸಲ್ಲುತ್ತದೆ. ಅಸಂಖ್ಯ ಭಕ್ತರ ಹೃದಯದಲ್ಲಿ ನೆಲೆಯಾಗಿ ನಿಂತಿದ್ದು ಭವ್ಯ ಭಾರತ, ಆದರ್ಶ ಸಮಾಜ ನಿರ್ಮಿಸಲು ಶಿವಕುಮಾರ ಸ್ವಾಮೀಜಿ ಅವಿರತವಾಗಿ ಶ್ರಮಿಸಿದ್ದಾರೆ ಎಂದರು. 
ನಿವೃತ್ತ ಪಿಡಿಒ ಶಿವಯೋಗಿ ಮಾತನಾಡಿ, ನಾಡಿನ ಮೂಲೆ ಮೂಲೆಯಿಂದ ಬರುವ ನಿರ್ಗತಿಕ, ಬಡ ಕೂಲಿ ಕಾರ್ಮಿಕರ ಮಕ್ಕಳಿಗೆ ಮಠದಲ್ಲಿ ಆಶ್ರಯ ನೀಡಿ ಅವರ ಬದುಕನ್ನು ಹಸನುಗೊಳಿಸಿದ ಶಿವಕುಮಾರ ಸ್ವಾಮೀಜಿ ಅವರ ಕಾರ್ಯ ಸದಾ ಸ್ಮರಣೀಯವಾದುದು. ಸಿದ್ಧಗಂಗಾ ಮಠವು ಬಹಳ ಹಿಂದಿನಿಂದಲೂ ಅನ್ನ, ಅಕ್ಷರ ಹಾಗೂ ಆಶ್ರಯಕ್ಕೆ ಹೆಸರಾಗಿದೆ. ಅವರ ಶೈಕ್ಷಣಿಕ ಕ್ರಾಂತಿ ನನ್ನಂತಹ ಲಕ್ಷಾಂತರ ಜನರಿಗೆ ಬದುಕು ರೂಪಿಸಿದೆ ಎಂದರು.
ಈ ಸಂದರ್ಭದಲ್ಲಿ ಶ್ರೀ ಡಾ.ಶಿವಕುಮಾರ ಸ್ವಾಮೀಜಿ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ನಂತರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ಪಟ್ಟಣದ ಟ್ಯಾಕ್ಸಿ ಸ್ಟಾೃಂಡ್ ಬಳಿ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಸಲಾಯಿತು.
ಮಾಜಿ ಶಾಸಕ ಎಚ್.ಸಿ.ಬಸವರಾಜು, ಬಳಗದ ಅಧ್ಯಕ್ಷ ಮಹೇಶ್, ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಎಚ್.ಜಿ.ಪರಮೇಶ್, ಸಾರ್ವಜನಿಕ ಆಸ್ಪತ್ರೆ ಆಡಳಿತ ಅಧಿಕಾರಿ ಡಾ.ಶಶಿಧರ್, ತಾಪಂ ಮಾಜಿ ಸದಸ್ಯೆ ಬಿ.ವಿ.ಅನಿತಾ, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಆವರ್ತಿ ಚಂದ್ರಶೇಖರ್, ಪುರಸಭೆ ಮಾಜಿ ಸದಸ್ಯರಾದ ನಂಜುಂಡಸ್ವಾಮಿ, ನಿರಂಜನ್, ಮುಖಂಡರಾದ ರೇಣುಕಾ ಸ್ವಾಮಿ, ಸ್ಟೂಡಿಯೋ ಆನಂದ್, ಪಿ.ಎಂ.ಕುಮಾರ, ವಾಸವಿ ಗಿರೀಶ್, ಕಿರಂಗೂರು ಮಂಜುನಾಥ್, ವಿಜೇತ ಕುಮಾರ್, ಸುಂಡವಾಳು ವೆಂಕಟೇಶ್, ಪಂಚವಳ್ಳಿ ಸಂತೋಷ್, ಮುಕೇಶ್, ಕೆಂಪಣ್ಣ, ಶರತ್, ಉಲ್ಲಾಸ್, ಪುಟ್ಟ, ಚರಣ್, ಅನಿತಾ ಶರತ್, ವಿನಯ್, ನಾಗನಂದ್, ಭವ್ಯ ಮಂಜುನಾಥ್ , ಚಂದ್ರಶೇಖರ್, ಕಾರ್ ಮಹೇಶ್, ಡಿ.ಜೆ.ಮಹೇಶ್, ದೇವರಾಜ್, ಮಹಾದೇವ್, ಅಭಿ ಕಿರಂಗೂರ್, ಆನಂದ, ಮಂಜುನಾಥ್ ಸೇರಿದಂತೆ ಮತ್ತಿತರರು ಸಾವಿರಾರು ಭಕ್ತರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net