ನನ್ನನ್ನು ಬಲಿಕೊಟ್ಟು ಚಾಮರಾಜ ಕ್ಷೇತ್ರದಲ್ಲಿ ಪ್ರತಾಪ್ ಸಿಂಹ ಸ್ಪರ್ಧಿಸಬೇಕಾ ?: ಎಲ್. ನಾಗೇಂದ್ರ ಆಕ್ರೋಶ

ಮಾಜಿ ಶಾಸಕ ಎಲ್. ನಾಗೇಂದ್ರ
ಮಾಜಿ ಶಾಸಕ ಎಲ್. ನಾಗೇಂದ್ರ
Published on
ಮೈಸೂರು: ರಾಜಕೀಯವಾಗಿ ನನ್ನನ್ನು ಬಲಿ ಪಡೆದು ಮಾಜಿ ಸಂಸದ ಪ್ರತಾಪ್ ಸಿಂಹ ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬೇಕಾ ಎಂದು ಮಾಜಿ ಶಾಸಕ, ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ ಆಕ್ರೋಶ ಹೊರಹಾಕಿದರು.
ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರತಾಪ್ ಸಿಂಹ ಅವರಿಗೆ ಚಾಮರಾಜ ಕ್ಷೇತ್ರವೇ ಬೇಕಾ? ನಾನು 30 ವರ್ಷಗಳಕಾಲ ಪಕ್ಷಕೋಸ್ಕರ ದುಡಿದಿಲ್ಲವೇ? ಪಕ್ಷಕ್ಕೆ ನೀವೇನು ಮಾಡಿದ್ದೀರಾ? ಯಾವ ನೈತಿಕತೆ ಇಟ್ಟುಕೊಂಡು ಈ ಕ್ಷೇತ್ರಕ್ಕೆ ಬರುತ್ತೀರ ಎಂದು ಪ್ರಶ್ನಿಸಿದರು.
2028ಕ್ಕೆ ಯಾರಿಗೆ ಮುಖಭಂಗ ಆಗುತ್ತೆ ಎಂಬುದನ್ನು ಕಾದು ನೋಡಿ. ನನ್ನನ್ನು ಜನರು ಎಂದಿಗೂ ಕೈ ಬಿಡುವುದಿಲ್ಲ. ಚಾಮರಾಜ ಕ್ಷೇತ್ರಕ್ಕೆ ನಾನೇ ಪಕ್ಷದ ಅಭ್ಯರ್ಥಿಯಾಗಿ ಗೆಲುವು ಸಾಧಿಸುತ್ತೇನೆ. ಸಂಸದ ಪ್ರತಾಪ್ ಸಿಂಹ ನೀಡಿರುವ ಹೇಳಿಕೆ ಪಕ್ಷದಲ್ಲ, ಅವರು ವೈಯಕ್ತಿಕವಾಗಿ ಹೇಳಿಕೆ ನೀಡಿದ್ದಾರೆ. ಸ್ಪರ್ಧೆ ವಿಚಾರವಾಗಿ ಹೈಕಮಾಂಡ್ ಎಲ್ಲಿಯೂ ಹೇಳಿಲ್ಲ. ಟಿಕೆಟ್ ಯಾರಿಗೆ ಕೊಡಬೇಕು, ಯಾರಿಗೆ ಕೊಡಬಾರದು ಎಂಬುದನ್ನು ಪಕ್ಷದ ಹೈಕಮಾಂಡ್ ನಿರ್ಧರಿಸಲಿದೆ ಎಂದರು.
ಈ ಹಿಂದೆ ನನ್ನನ್ನು ಬಿಟ್ಟು ಯಾರಿಗೆ ಲೋಕಸಭಾ ಟಿಕೆಟ್ ನೀಡುತ್ತಾರೆ ಎಂದು ಇದೇ ಪ್ರತಾಪ್ ಸಿಂಹ ಹೇಳಿದ್ದರು. ಕೊನೆಗೆ ಏನಾಯಿತು ಎಂಬುದು ಎಲ್ಲರಿಗೂ ತಿಳಿದಿದೆ. ಚಾಮರಾಜ ಕ್ಷೇತ್ರದ ಪ್ರತಿಯೊಂದು ಗಲ್ಲಿ, ಬಡಾವಣೆಗಳ ಮಾಹಿತಿ ನನಗಿದೆ. ಕಳೆದ 32 ವರ್ಷದಿಂದ ಪಕ್ಷದ ಕಾರ್ಯಕರ್ತನಿಂದ ಹಿಡಿದು ವಿವಿಧ ಜವಾಬ್ದಾರಿ ನಿಭಾಯಿಸುವ ಜತೆಗೆ ಪಕ್ಷ ಸಂಘಟನೆ ಮಾಡಿದ್ದೇನೆ. ಮೂರು ಬಾರಿ ಪಾಲಿಕೆ ಸದಸ್ಯ, ಒಮ್ಮೆ ಪಾಲಿಕೆ ಮೇಯರ್ ಹಾಗೂ ಮುಡಾ ಅಧ್ಯಕ್ಷನಾಗಿ ಜವಾಬ್ದಾರಿ ನಿಭಾಯಿಸಿದ್ದೇನೆ. ಎಲ್ಲಿಂದಲೋ ಬಂದು, ಈಗ ಚಾಮರಾಜ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ ಎಂದರೆ ಹೇಗೆ? ನನ್ನ ಹುಟ್ಟು, ಸಾವು ಇಲ್ಲೇ. ರಾಜ್ಯ ಮಟ್ಟದ ನಾಯಕ ಎಂದು ಬಿಂಬಿಸಿಕೊಳ್ಳುವ ಇವರು, ರಾಜ್ಯದಲ್ಲಿ ಬೇರೆಲ್ಲಿಯೂ ಸ್ಪರ್ಧಿಸಲು ಕ್ಷೇತ್ರಗಳು ಇಲ್ಲವಾ ಎಂದು ಪ್ರಶ್ನಿಸಿದರು.
ಚುನಾವಣೆಗೆ ಇನ್ನೂ ಎರಡೂವರೆ ವರ್ಷ ಬಾಕಿ ಇದೆ. ಆಗಲೇ ಅವರಿಗೆ ಹಗಲು ಕನಸು ಬಿದ್ದಿದೆ. ಅನಗತ್ಯವಾಗಿ ಇಂತಹ ಹೇಳಿಕೆ ನೀಡುವ ಮೂಲಕ ಕ್ಷೇತ್ರದ ಜನರು ಮತ್ತು ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಬಾರದು. ನನ್ನ ಸಂಘಟನಾ ಚತುರತೆ ಗುರುತಿಸಿ ಪಕ್ಷ ನನಗೆ ನಗರಾಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಿದೆ. ಹೀಗಾಗಿ ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬೆಲೆ ನೀಡಬೇಕೆ ವಿನಹ, ವ್ಯಕ್ತಿಗಳು ನೀಡುವ ಹೇಳಿಕೆಗೆಗಳಿಗೆ ಮನ್ನಣೆ ನೀಡಬಾರದು ಎಂದರು.
ಚಾಮರಾಜ ಕ್ಷೇತ್ರದಲ್ಲಿ ಈ ಹಿಂದೆ ಶಾಸಕನಾಗಿದ್ದಾಗ ಯಾರೊಬ್ಬರು ಬೆರಳು ತೋರಿಸದಂತೆ ಅಭಿವೃದ್ಧಿ ಕೆಲಸ ಮಾಡಿದ್ದೆ. ಇದೇ ಪ್ರತಾಪ್ ಸಿಂಹ ಅವರು ಆ ಸಂದರ್ಭ ಕ್ಷೇತ್ರದ ಅಭಿವೃದ್ಧಿಯ ಹರಿಕಾರ ಎಂದು ಕೊಂಡಾಡಿದ್ದರು. ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಅಭ್ಯರ್ಥಿಯಾಗಿದ್ದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪರ ಕ್ಷೇತ್ರದಲ್ಲಿ ಪ್ರಚಾರಕ್ಕೆ ಬರಲಿಲ್ಲ. ನನ್ನ ಪರವಾಗಿಯೂ ಪರವಾಗಿ ಪ್ರಚಾರಕ್ಕೆ ಬಂದಿಲ್ಲ. ಅವರು ಅಧಿಕಾರದಲ್ಲಿದ್ದ ಸಂದರ್ಭ ಒಬ್ಬರನ್ನೂ ಗೆಲ್ಲಿಸಿಲ್ಲ. ಪ್ರಧಾನಿ ಮೋದಿ ವರ್ಚಸ್ಸಿನಲ್ಲಿ ನಾವು, ನೀವು ಗೆದ್ದಿರುವುದು. ನಿಮ್ಮ ಗೆಲುವಿಗೆ ನಮ್ಮ ಕೊಡುಗೆಯೂ ಇದೆ ಎಂದು ಹೇಳಿದರು.
ಚಾಮರಾಜ ಕ್ಷೇತ್ರ ನನ್ನ ಧರ್ಮ, ಕರ್ಮ ಕ್ಷೇತ್ರ. ನಾನು ಇಲ್ಲೇ ಹುಟ್ಟಿ, ಇಲ್ಲೇ ಬೆಳೆದವನು. ಬೇರೆ ಎಲ್ಲಿಂದಲೋ ಇಲ್ಲಿಗೆ ಬಂದಿಲ್ಲ. ಅವರಿಗೆ ನೂರು ಜನ ಕಾರ್ಯಕರ್ತರಿದ್ದರೆ, ನನಗೆ ಸಾವಿರಾರು ಕಾರ್ಯಕರ್ತರು ಇದ್ದಾರೆ ಎಂದು ತಿರುಗೇಟು ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net