

ಯಶಸ್ವಿಯಾಗಿ ಮೊದಲ ಹಂತದ ಭಾರ ಹೊರುವ ತಾಲೀಮು ಪೂರ್ಣಗೊಳಿಸಿರುವ ದಸರಾ ಗಜಪಡೆ, ಬುಧವಾರ ಎರಡನೇ ಹಂತದ ಭಾರ ಹೊರುವ ತಾಲೀಮು ಆರಂಭಿಸಿದೆ.
ಮೊದಲ ಹಂತದಲ್ಲಿ 600ರಿಂದ 700 ಕೆ.ಜಿ. ಹೊರುವಲ್ಲಿ ಯಶಸ್ವಿಯಾಗಿದ್ದ ಧನಂಜಯ ಆನೆ ಬುಧವಾರ 800 ರಿಂದ 1000 ಕೆ.ಜಿ.ತೂಕದ ಭಾರವನ್ನು ಹೊತ್ತು ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ ಗಾಂಭೀರ್ಯದಿಂದ ಹೆಜ್ಜೆ ಹಾಕಿತು.
ಮಧ್ಯಾಹ್ನ 3.50ಕ್ಕೆ ಅರಮನೆ ಆವರಣದಿಂದ ಹೊರಟ ಧನಂಜಯ, ಯಾವುದೇ ಆತಂಕ ಅಥವಾ ಆಯಾಸವಿಲ್ಲದೆ ಸಂಜೆ 5.30 ಗಂಟೆ ವೇಳೆಗೆ ಬನ್ನಿಮಂಟಪ ತಲುಪಿತು. ಧನಂಜಯ ಭಾರ ಹೊತ್ತು ಗಾಂಭೀರ್ಯದಿಂದ ಮುಂದೆ ಸಾಗುತ್ತಿದ್ದರೆ, ಅದರ ಹಿಂದೆ ಕಾವೇರಿ, ಲಕ್ಷ್ಮೀ, ರೂಪಾ, ಚೈತ್ರಾ, ಪ್ರಶಾಂತ, ಸುಗ್ರೀವ, ಶ್ರೀಕಂಠ, ಮಹೇಂದ್ರ, ಗೋಪಿ, ಏಕಲವ್ಯ ಹಾಗೂ ಶ್ರೀರಾಮ ಆನೆಗಳು ಹೆಜ್ಜೆ ಹಾಕಿ ಸಾಥ್ ನೀಡಿದವು. ಬನ್ನಿಮಂಟಪ ತಲುಪಿದ ಬಳಿಕ ಕೆಲಕಾಲ ವಿಶ್ರಾಂತಿ ಪಡೆದ ಗಜಪಡೆ, ಬಳಿಕ ಅರಮನೆ ಆವರಣಕ್ಕೆ ಮರಳಿತು.