ಆಟೋ ಗ್ಯಾಸ್‌ಗಾಗಿ ಪರದಾಟ

 ನಗರದ ಧನ್ವಂತರಿ ರಸ್ತೆಯಲ್ಲಿರುವ ಎಲ್‌ಪಿಜಿ ಗ್ಯಾಸ್‌ಗಾಗಿ ಸಾಲುಗಟ್ಟಿ ನಿಂತಿರುವ ಆಟೋರಿಕ್ಷಾಗಳು.
ನಗರದ ಧನ್ವಂತರಿ ರಸ್ತೆಯಲ್ಲಿರುವ ಎಲ್‌ಪಿಜಿ ಗ್ಯಾಸ್‌ಗಾಗಿ ಸಾಲುಗಟ್ಟಿ ನಿಂತಿರುವ ಆಟೋರಿಕ್ಷಾಗಳು.
Published on

ಪ್ರಮುಖ ಮುಖ್ಯಾಂಶಗಳು

  • ಸಂಕಷ್ಟಕ್ಕೆ ಸಿಲುಕಿರುವ ಚಾಲಕರು
  • ಎಲ್‌ಪಿಜಿ ದರ ಏರಿಕೆ, ಹೆಚ್ಚಳವಾಗಿಲ್ಲ ಪ್ರಯಾಣ ದರ

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಆಟೋಗ್ಯಾಸ್‌ಗಾಗಿ ಚಾಲಕರು ಪರದಾಡುವಂತಾಗಿದೆ. ಅನಿಲವಿಲ್ಲದೆ ದುಡಿಯುವ ಚಕ್ರಗಳು ಸ್ಥಗಿತಗೊಂಡಿರುವುದರಿಂದ ರಿಕ್ಷಾವಾಲಾಗಳು ಕಂಗೆಟ್ಟಿದ್ದಾರೆ.
ಇರಾನ್ ಮೇಲೆ ಅಮೆರಿಕಾ, ಇಸ್ರೇಲ್ ಜಂಟಿಯಾಗಿ ಸಮರ ಸಾರಿದವು. ತಿಂಗಳ ಬಳಿಕ ಕದನ ವಿರಾಮ ಘೋಷಿಸಿ ಪಾಕಿಸ್ತಾನದಲ್ಲಿ ನಡೆದ ಸಂದಾನ ಮಾತುಕತೆಯೂ ವಿಫಲವಾಯಿತು.
 ಇದೀಗ ಸಂಘರ್ಷ ಮತ್ತೊಂದು ಆಯಾಮ ಪಡೆದುಕೊಳ್ಳುವ ಮುನ್ಸೂಚನೆ ದೊರೆಯುತ್ತಿದೆ. ಈ ನಡುವೆ, ಗಲ್ಫ್ ರಾಷ್ಟ್ರಗಳಿಂದ ಭಾರತಕ್ಕೆ ಬರಬೇಕಿದ್ದ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇದರಿಂದ ಪರಿಣಾಮ ಆಟೋರಿಕ್ಷಾಗಳಿಗೂ ಬಲವಾಗಿಯೇ ತಟ್ಟಿದೆ. ಈ ನಡುವೆ, ಕೆಲವು ಬಂಕ್‌ಗಳಲ್ಲಿ ಗ್ಯಾಸ್ ದರ ಹೆಚ್ಚಿಸಿ ಮತ್ತೊಂದು ಸಂಕಟಕ್ಕೆ ತಳ್ಳಿದ್ದಾರೆ.
ಆಟೋರಿಕ್ಷಾಗಳಲ್ಲಿ ಸಾಮಾನ್ಯವಾಗಿ ಎರಡು ರೀತಿಯ ಗ್ಯಾಸ್ ಬಳಸಲಾಗುತ್ತದೆ. ಎಲ್‌ಪಿಜಿ (ದ್ರವೀಕೃತ ಪೆಟ್ರೋಲಿಯಂ ಅನಿಲ) ಹಳೆಯ ಮತ್ತು ಸಾಮಾನ್ಯ ಆಟೋಗಳಲ್ಲಿ ಬಳಕೆಯಾಗುವ ಅನಿಲ ಇದು. ಮತ್ತೊಂದು ಸಿಎನ್‌ಜಿ (ಸಾಂದ್ರೀಕೃತ ನೈಸರ್ಗಿಕ ಅನಿಲ) ಆಧುನಿಕ ಆಟೋಗಳಲ್ಲಿ ಬಳಸಲಾಗುವ ಅನಿಲ ಇದು. ಕಡಿಮೆ ಮಾಲಿನ್ಯವನ್ನು ಇದು ಉಂಟು ಮಾಡುತ್ತದೆ. 
ಮೈಸೂರು ನಗರದಲ್ಲಿ ಅಂದಾಜು 45 ಸಾವಿರ ಆಟೋರಿಕ್ಷಾಗಳಿವೆ. ಈ ಪೈಕಿ ಶೇ.50ರಷ್ಟ ಎಲ್‌ಪಿಜಿ ಆಟೋಗಳು. ಶೇ.20ರಷ್ಟು ಮಾತ್ರ ಸಿಎನ್‌ಜಿ ಆಟೋಗಳಿವೆ. ಶೇ.2ರಷ್ಟು ಎಲೆಕ್ಟ್ರಿಕಲ್ ಆಟೋಗಳಿವೆ. ಎಲ್‌ಪಿಜಿ ಆಟೋಗಳು ಇನ್ನೂ ಸಿಎನ್‌ಜಿಗೆ ಪರಿವರ್ತನೆಗೊಂಡಿಲ್ಲ. 
ಹೊಸದಾಗಿ ಬರುವ ಆಟೋಗಳೆಲ್ಲ ಸಿಎನ್‌ಜಿ ಆಗಿಯೇ ರಸ್ತೆಗಿಳಿಯುತ್ತಿವೆ. ಈ ಪೈಕಿ ಎಲ್‌ಪಿಜಿ ಅವಲಂಬಿತ ಆಟೋಗಳು ಇದೀಗ ಅಡಕತ್ತರಿಯಲ್ಲಿ ಸಿಲುಕಿಕೊಂಡಿವೆ. ಅವುಗಳಿಗೆ ಎಲ್‌ಪಿಜಿ ಅಭಾವ ಸೃಷ್ಟಿಯಾಗಿದೆ. ಗ್ಯಾಸ್ ತುಂಬಿಸಿಕೊಳ್ಳಲು ದಿನವಿಡೀ ಸರದಿಯಲ್ಲಿ ಕಾಯ್ದು ಪರಿಸ್ಥಿತಿ ಎದುರಾಗಿದೆ. ಪೂರ್ಣಪ್ರಮಾಣದಲ್ಲಿ ಆಟೋಗಳು ಓಡಿಸಲಾಗುತ್ತಿಲ್ಲ, ಆದಾಯವೂ ಬರುತ್ತಿಲ್ಲ ಎಂಬುದು ಆಟೋರಿಕ್ಷಾ ಚಾಲಕರ ಅಳಲಾಗಿದೆ.
ನಗರದಲ್ಲಿ 9 ಎಲ್‌ಪಿಜಿ ಬಂಕ್‌ಗಳು, 7 ಸಿಎನ್‌ಜಿ ಬಂಕ್‌ಗಳಿವೆ. ಇದರಲ್ಲಿ ಸಿಎನ್‌ಜಿ ಪೂರೈಕೆಯಲ್ಲಿ ವ್ಯತ್ಯಯವೇನೂ ಆಗಿಲ್ಲ. ಅಂತಹ ಸಮಸ್ಯೆಯೂ ಸೃಷ್ಟಿಯಾಗಿಲ್ಲ. ಆದರೆ, ಎಲ್‌ಪಿಜಿಯೇ ಸಿಗುತ್ತಿಲ್ಲ. ಗ್ಯಾಸ್ ಬಂಕ್‌ಗಳ ಬಳಿ ನೂರಾರು ಆಟೋಗಳು ಸರದಿ ಸಾಲಿನಲ್ಲಿ ನಿಂತುಕೊಂಡಿರುವುದು ಕಣ್ಣಿಗೆ ರಾಚುತ್ತಿದೆ.
ಮೈಸೂರಿನ ವಿವಿಧೆಡೆ ಇರುವ ಗ್ಯಾಸ್ ಬಂಕ್‌ಗಳಲ್ಲಿ ಹೆಚ್ಚು ದರ ವಸೂಲಿ ಮಾಡುತ್ತಿರುವುದರಿಂದ ಆಟೋ ಚಾಲಕರು ಧನ್ವಂತರಿ ರಸ್ತೆಯಲ್ಲಿರುವ ವಿಜಯ ಸರ್ವಿಸ್ ಸ್ಟೇಷನ್‌ನಲ್ಲಿ ಗ್ಯಾಸ್ ತುಂಬಿಸಿಕೊಳ್ಳಲು ಮುಗಿಬಿದ್ದರು. ಇದರಿಂದ ಒಂದು ಕಿ.ಮೀ.ದೂರದವರೆಗೂ ಆಟೋ ರಿಕ್ಷಾಗಳು ಸಾಲುಗಟ್ಟಿ ನಿಂತಿದ್ದವು. 
ದಿವಾನ್ಸ್ ರಸ್ತೆಯಿಂದ ನಂಜರಾಜ ಬಹದ್ದೂರ್ ಛತ್ರ ಮುಂಭಾಗದ ವಿನೋಬಾ ರಸ್ತೆಯಲ್ಲಿ ಸಾಗಿ ಮೇಜರ್ ಜನರಲ್ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಿಂದ ಜೆಎಲ್‌ಬಿ ರಸ್ತೆ ಮೂಲಕದ ದಾಸಪ್ಪ ವೃತ್ತದಿಂದ ಧನ್ವಂತರಿ ರಸ್ತೆ ಮೂಲಕ ದಿವಾನ್ಸ್ ರಸ್ತೆಯ ಜಂಕ್ಷನ್‌ನಲ್ಲಿರುವ ಪೆಟ್ರೋಲ್ ಬಂಕ್‌ವರೆಗೂ ಆಟೋ ರಿಕ್ಷಾಗಳು ಸರದಿ ಸಾಲಿನಲ್ಲಿ ನಿಂತಿದ್ದವು. ಸುಮಾರು ಒಂದು ಕಿ.ಮೀ.ದೂರ ಆಟೋ ರಿಕ್ಷಾಗಳು ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡು ಸಾರ್ವಜನಿಕರು ಆಶ್ಚರ್ಯಗೊಂಡರು. ಇದೇ ಸ್ಥಿತಿ ಬೇರೆ ಎಲ್‌ಪಿಜಿ ಗ್ಯಾಸ್‌ಬಂಕ್‌ಗಳಲ್ಲೂ ಇದೆ.
ಕೆಲ ಆಟೋಗ್ಯಾಸ್ ಬಂಕ್ ಎದುರು ‘ನೋ ಸ್ಟಾಕ್’ ಫಲಕವನ್ನೂ ಹಾಕಿದ್ದವು. ಸರದಿಯಲ್ಲಿ ನಿಂತು ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ಬಂಕ್‌ನಲ್ಲಿ ಗ್ಯಾಸ್ ದೊರೆತರೆ, ಮತ್ತೊಂದರಲ್ಲಿ ಸಿಗುತ್ತಿಲ್ಲ. ಬೆಳಗ್ಗೆ 5ಗಂಟೆಗೆ ಬಂದು ಕ್ಯೂ ನಿಲ್ಲುವಂತಾಗಿದೆ. ಗ್ಯಾಸ್ ಪೂರೈಕೆಯಲ್ಲಿ ಕೊರತೆ ಮುಂದುವರಿದಿದೆ. ಆಟೋದಲ್ಲಿ ಗ್ಯಾಸ್ ಖಾಲಿಯಾಗಿದೆ. ಕೆಲವೆಡೆ ಬಂಕ್ ಮುಚ್ಚಿದ್ದಾರೆ. ಈಗ ಮತ್ತೊಂದು ಕಡೆಗೆ ಹೋಗಿ ನೋಡಬೇಕು. ಎಲ್ಲಿಯೂ ಇಲ್ಲವೆಂದರೆ ಆಟೋ ನಿಲ್ಲಿಸಬೇಕಷ್ಟೇ. ಇಂತಹ ಪರಿಸ್ಥಿತಿಯಿಂದ ಜೀವನಕ್ಕೆ ಬಹಳ ಕಷ್ಟವಾಗಿದೆ ಎಂದು ಚಾಲಕ ನಾಗರಾಜು ಹೇಳಿದ್ದಾರೆ.
ಎಲ್‌ಪಿಜಿ ಪೂರೈಕೆ ನಿಗದಿಯಷ್ಟು ಆಗುತ್ತಿಲ್ಲ. ಇದರಿಂದಲೇ ಸಮಸ್ಯೆ ಸೃಷ್ಟಿಯಾಗಿದೆ. ನಮ್ಮಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನ ಹಣ ಸಂಗ್ರಹಿಸಿಲ್ಲ. ಆ ಕಾರಣದಿಂದ ಹೆಚ್ಚಿನ ಆಟೋ ರಿಕ್ಷಾ ಚಾಲಕರು ಬರುತ್ತಾರೆ. ದಿನಕ್ಕೆ ಟನ್‌ಗಟ್ಟಲೇ ಗ್ಯಾಸ್ ಖಾಲಿಯಾಗಿದೆ. ಸಾವಿರಾರು ಆಟೋ ರಿಕ್ಷಾ ಮಾತ್ರವಲ್ಲದೆ ಕಾರ್‌ಗಳಿಗೂ ಗ್ಯಾಸ್ ನೀಡಲಾಗಿದೆ. ಒಂದು ಆಟೋ ರಿಕ್ಷಾಗೆ ಒಂದು ಸಾವಿರ ರೂ.ಗೆ ಮಾತ್ರ ಗ್ಯಾಸ್ ನೀಡಲಾಗುತ್ತಿದೆ ಎಂದು ಧನ್ವಂತರಿ ರಸ್ತೆಯಲ್ಲಿರುವ ವಿಜಯ ಸರ್ವಿಸ್ ಸ್ಟೇಷನ್‌ನ ಮಾಲೀಕ ರಮೇಶ್ ತಿಳಿಸಿದರು.

ದರ ಏರಿಕೆಯ ಬಿಸಿ:

ಆಟೋಗ್ಯಾಸ್ ದರ ಏರಿಕೆ ಮಾಡಿದ್ದು, ಆಟೋ ರಿಕ್ಷಾ ಡ್ರೈವರ್‌ಗಳನ್ನು ಕಂಗೆಡಿಸಿದೆ. ಒಂದು ಲೀಟರ್ ಎಲ್‌ಪಿಜಿ ಗ್ಯಾಸ್‌ಗೆ ಸರ್ಕಾರ ನಿಗದಿ ಮಾಡಿರುವ ದರ 83.53 ರೂ.ಮಾತ್ರ. ಆದರೀಗ ಮನಸೋ ಇಚ್ಛೆ ದರ ಏರಿಕೆ ಮಾಡಿಕೊಳ್ಳಲಾಗಿದೆ.
 ಒಂದೊಂದು ಬಂಕ್‌ನಲ್ಲಿ ಒಂದು ದರ ನಿಗದಿಪಡಿಸಲಾಗಿದೆ. ಪ್ರತಿ ಲೀಟರ್‌ಗೆ 97 ರೂ., 100 ರೂ. ಹೀಗೆ ತರಹೇವಾರಿ ದರವನ್ನು ಆಟೋ ಚಾಲಕರಿಂದ ವಸೂಲು ಮಾಡಲಾಗುತ್ತಿದೆ. ಜತೆಗೆ, ಸಿಎನ್‌ಜಿ ದರ ಸಹ ಹೆಚ್ಚಳವಾಗಿದೆ. ಪ್ರತಿ ಲೀಟರ್ 85 ರೂ.ಗೆ ಇದ್ದ ದರವನ್ನು ಏಕಾಏಕಿ 88.50 ರೂ.ಗೆ ಏರಿಕೆ ಮಾಡಲಾಗಿದೆ. ಆಟೋಚಾಲಕರಿಗೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ. 

ಆಟೋರಿಕ್ಷಾ ಪ್ರಯಾಣ ದರ ಹೆಚ್ಚಾಗಿಲ್ಲ:

ನಗರದಲ್ಲಿ ಜನವರಿ 1ರಿಂದ ಜಾರಿಯಾಗಬೇಕಿದ್ದ ಆಟೋರಿಕ್ಷಾ ಪ್ರಯಾಣ ದರ ಪರಿಷ್ಕರಣೆ ಆಗಿಲ್ಲ. ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ ಅಧ್ಯಕ್ಷತೆಯಲ್ಲಿ 2025ರ ಡಿಸೆಂಬರ್‌ನಲ್ಲಿ ನಡೆದಿದ್ದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ದರ ಏರಿಕೆಗೆ ತೀರ್ಮಾನಿಸಲಾಗಿತ್ತು.
 ಬೆಂಗಳೂರು ಮಾದರಿಯಲ್ಲಿ ಕನಿಷ್ಠ ದರ 36 ರೂ., ಆ ನಂತರ ಪ್ರತಿ ಕಿಲೋಮೀಟರ್‌ಗೆ 18 ರೂ.ದರ ಏರಿಕೆ ಮಾಡಲು ನಿರ್ಣಯಿಸಲಾಗಿತ್ತು. ನಾಲ್ಕು ತಿಂಗಳೂ ಗತಿಸಿದರೂ ಇದು ಕಾರ್ಯರೂಪಕ್ಕೆ ಬಂದಿಲ್ಲ.
ಮನೆ ಬಾಡಿಗೆ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಆಟೋ ರಿಕ್ಷಾ ಬಿಡಿಭಾಗಗಳ ಬೆಲೆಯೂ ಹೆಚ್ಚಾಗಿದೆ. ಆದರೆ, ನಗರದಲ್ಲಿ ಕಳೆದ ನಾಲ್ಕು ವರ್ಷದಿಂದ ಆಟೋರಿಕ್ಷಾ ಪ್ರಯಾಣ ದರವನ್ನು ಮಾತ್ರ ಪರಿಷ್ಕರಿಸಿಲ್ಲ. 
ಇದರಿಂದ ದೊಡ್ಡಮಟ್ಟದಲ್ಲಿ ಆದಾಯ ಖೋತಾ ಆಗುತ್ತಿದೆ. ಆಟೋರಿಕ್ಷಾ ನಂಬಿ ಜೀವನ ನಡೆಸುವುದೇ ಕಷ್ಟಕರವಾಗಿದೆ ಎಂದು ಆಟೋ ಚಾಲಕರ ಅಭಿಪ್ರಾಯವಾಗಿದೆ. ರ‌್ಯಾಪಿಡೋ ಬೈಕ್, ವೈಟ್ ಬೋರ್ಡ್ ಟ್ಯಾಕ್ಸಿ, ಕೇರಳ, ಮಹಾರಾಷ್ಟ್ರದ ಆಟೋರಿಕ್ಷಾಗಳ ಹಾವಳಿಗೆ ಕಡಿವಾಣ ಹಾಕಿಲ್ಲ. ಹೊಸ ಆಟೋ ರಿಕ್ಷಾಗಳಿಗೆ ಎಗ್ಗಿಲ್ಲದೇ ಪರವಾನಗಿ ಕೊಡಲಾಗುತ್ತಿದೆ. ಇದರಿಂದ ಆಟೋರಿಕ್ಷಾ ಚಾಲನೆಯೇ ತೊಂದರೆಗೆ ಸಿಲುಕಿದೆ.
"

ನಗರದಲ್ಲಿ ಎಲ್‌ಪಿಜಿ ಬಳಕೆ ಮಾಡುವ ಆಟೋಗಳಿಗೂ ತೊಂದರೆಯಾಗಿದೆ. ಪರಿಸ್ಥಿತಿ ಲಾಭ ಪಡೆದುಕೊಂಡು ಏಕಾಏಕಿ 10-12 ರೂ.ದರ ಏರಿಕೆ ಮಾಡಲಾಗಿದೆ. ಹೇಳಿದಷ್ಟು ಗ್ಯಾಸ್ ಹಾಕುತ್ತಿಲ್ಲ. ಈ ಸಮಸ್ಯೆಯಿಂದ ರಿಕ್ಷಾಗಳು ಸರಿಯಾಗಿ ಓಡಿಸಲು ಆಗುತ್ತಿಲ್ಲ. ಬಂಕ್ ಎದುರೇ ಗ್ಯಾಸ್‌ಗಾಗಿ ಸಮಯ ಕಳೆದುಹೋಗುತ್ತಿದೆ. ಇದರಿಂದಾಗಿ ಅರ್ಧದಷ್ಟು ಆದಾಯ ಕಡಿತಗೊಂಡಿದ್ದು, ಜೀವನ ನಿರ್ವಹಣೆ ಕಷ್ಟಕರವಾಗಿದೆ. ಕೇಂದ್ರ, ರಾಜ್ಯ ಸರ್ಕಾರ ಈ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net