ಮೈವಿವಿ ಸಂಶೋಧನಾ ವಿದ್ಯಾರ್ಥಿಗಳ ಶಿಷ್ಯವೇತನದ ಕುರಿತು ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅಧಿಕಾರಿಗಳ ಸಭೆ ನಡೆಸಿದರು. ಪ್ರೊ.ಎನ್.ಕೆ.ಲೋಕನಾಥ್, ಎಂ.ಕೆ.ಸವಿತಾ, ಪ್ರೊ.ಎನ್.ನಾಗರಾಜ್ ಇನ್ನಿತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಮೈವಿವಿ ಸಂಶೋಧನಾ ವಿದ್ಯಾರ್ಥಿಗಳ ಹೋರಾಟಕ್ಕೆ ಸ್ಪಂದನೆ
ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ನೇತೃತ್ವದ ಸಭೆಯಲ್ಲಿ ನಿರ್ಧಾರ
ಮೈಸೂರು: ಶಿಷ್ಯವೇತನಕ್ಕೆ ಆಗ್ರಹಿಸಿ ಸತತ 27 ದಿನಗಳಿಂದ ಮೈಸೂರು ವಿಶ್ವವಿದ್ಯಾಲಯ ಕಾರ್ಯಸೌಧದ ಕ್ರಾಫರ್ಡ್ ಭವನದ ಎದುರು ಮೈವಿವಿ ಸಂಶೋಧನಾ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆಗೆ ಫಲ ಸಿಕ್ಕಿದ್ದು, ಪ್ರಮುಖ ಬೇಡಿಕೆಯಾದ 116 ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ಕೊಡಬೇಕೆಂಬ ಬೇಡಿಕೆಗೆ ಸ್ಪಂದನೆ ದೊರೆತಿದೆ.
ಬೆಂಗಳೂರಿನಲ್ಲಿ ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಮೈವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್, ಕುಲಸಚಿವೆ ಎಂ.ಕೆ.ಸವಿತಾ, ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಸ್ಯೆಯನ್ನು ತಕ್ಷಣ ಬಗೆಹರಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ತಲಾ 58 ವಿದ್ಯಾರ್ಥಿಗಳಿಗೆ ಹಂಚಿಕೆ:
ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ 116 ವಿದ್ಯಾರ್ಥಿಗಳಿಗೂ ಪ್ರವೇಶಾತಿ ನೀಡಬೇಕು ಎಂದು ಸಚಿವರು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಆದರೆ, ಮಂಡ್ಯ ಮತ್ತು ಚಾಮರಾಜನಗರ ವಿಶ್ವವಿದ್ಯಾಲಯಗಳು ಪ್ರತ್ಯೇಕಗೊಂಡಿರುವುದರಿಂದ ಮೈಸೂರು ವಿಶ್ವವಿದ್ಯಾಲಯಕ್ಕೆ ಆರ್ಥಿಕ ಸಂಪನ್ಮೂಲ ಕೊರತೆ ಎದುರಾಗಿದೆ. ಈ ಕಾರಣದಿಂದಾಗಿ ಇಷ್ಟೊಂದು ದೊಡ್ಡ ಮಟ್ಟದ ಆರ್ಥಿಕ ಹೊರೆಯನ್ನು ಸಂಪೂರ್ಣವಾಗಿ ಭರಿಸಲು ಹಾಗೂ ಇಷ್ಟು ಸಂಖ್ಯೆಯ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನೀಡಲು ವಿಶ್ವವಿದ್ಯಾಲಯಕ್ಕೆ ಸಾಧ್ಯವಾಗುವುದಿಲ್ಲ ಎಂದು ಮೈವಿವಿ ಕುಲಪತಿ ಸಭೆಯಲ್ಲಿ ಅಸಹಾಯಕತೆ ವ್ಯಕ್ತಪಡಿಸಿದರು.
ಇದಕ್ಕೆ ಪರ್ಯಾಯ ಮಾರ್ಗ ಸೂಚಿಸಿದ ಸಚಿವ ಡಾ.ಯತೀಂದ್ರ, 58 ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಹಾಗೂ ಉಳಿದ 58 ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದ ವತಿಯಿಂದ ಸ್ಕಾಲರ್‌ಶಿಪ್ ಹಂಚಿಕೆ ಮಾಡಿ ನೀಡುವಂತೆ ಜಂಟಿ ತೀರ್ಮಾನಕ್ಕೆ ಬರಲು ಸೂಚಿಸಿದರು. ಸಚಿವರ ಈ ಸೂಕ್ತ ನಿರ್ಧಾರಕ್ಕೆ ಸಮಾಜ ಕಲ್ಯಾಣ ಇಲಾಖೆ ಮತ್ತು ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳು ಸಮ್ಮತಿಸಿದರು.
ಮೈಸೂರು ವಿಶ್ವವಿದ್ಯಾಲಯದಲ್ಲಿ ಮಾರ್ಗದರ್ಶಕರು ತಮ್ಮ ಸಾಮರ್ಥ್ಯ ಮೀರಿ ವಿದ್ಯಾರ್ಥಿಗಳನ್ನು ಸಂಶೋಧನೆಗೆ ತೆಗೆದುಕೊಂಡಿದ್ದಾರೆ. ಆ ಕಾರಣದಿಂದಾಗಿಯೇ ಪ್ರಸ್ತುತ ಈ ಸಮಸ್ಯೆ ಉದ್ಭವಿಸಿದೆ. ಮುಂದಿನ ವರ್ಷಗಳಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ.
ಆದ್ದರಿಂದ ವಿದ್ಯಾರ್ಥಿಗಳು ಪರಿಸ್ಥಿತಿ ಅರ್ಥೈಸಿಕೊಂಡು ಸಹಕಾರ ನೀಡಬೇಕು ಎಂದು ತಿಳಿಸಿದರು.
ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ತುಳಸಿ ಮದ್ದಿನೇನಿ, ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್, ಜಂಟಿ ನಿರ್ದೇಶಕ ರಂಗೇಗೌಡ, ಮೈವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಎನ್.ನಾಗರಾಜ್ ಇನ್ನಿತರರಿದ್ದರು.
"
ಎಸ್‌ಸಿ, ಎಸ್‌ಟಿ ಸಂಶೋಧನಾ ವಿದ್ಯಾರ್ಥಿಗಳಿಗೆ ಶಿಷ್ಯವೇತನಕ್ಕೆ ಆಗ್ರಹಿಸಿ 27 ದಿನಗಳಿಂದ ನಡೆದ ಹೋರಾಟಕ್ಕೆ ಜಯ ದೊರೆತಿದೆ. ಇನ್ನಿತರ ಬೇಡಿಕೆಗಳಾದ ಸಂಶೋಧಕರಿಗೆ ಹಾಸ್ಟೆಲ್‌ನಲ್ಲಿ ಊಟ, ಸಂಶೋಧಕಿಯರಿಗೆ ಹಾಸ್ಟೆಲ್, ಲ್ಯಾಪ್‌ಟಾಪ್ ವಿತರಣೆಗೆ ನಮ್ಮ ಆಗ್ರಹ ಮುಂದುವರಿಯಲಿದೆ.