ಕ್ಷೇತ್ರದ ಈಶಾನ್ಯ ದಿಕ್ಕಿನಲ್ಲಿರುವ ಹೆಬ್ಬಳ್ಳದ ತೊರೆಯಿಂದ ಗಂಗಾಪೂಜೆ ಮಾಡಿ ಕೇಲು ತರಲಾಗುತ್ತದೆ. ಬೆಳಗ್ಗೆ 9 ಗಂಟೆಗೆ ಭಕ್ತರು ಬಾಯಿಬೀಗ ಹರಕೆ, ಮುಡಿ ತೆಗೆಸುವ ಹರಕೆ ತೀರಿಸುತ್ತಾರೆ. ಸತ್ತಿಗೆಗಳು, ನಂದಿಧ್ವಜ, ಉಮಾಮಹೇಶ್ವರ ಸ್ವಾಮಿ ದೇವರ ರುದ್ರಾಕ್ಷಿ ಮಂಟಪದೊಂದಿಗೆ ಪಂಜಿನಸೇವೆ, ನಾದಸ್ವರ, ಬ್ಯಾಂಡ್‌ಸೆಟ್, ವೀರಗಾಸೆ ನೃತ್ಯ ಮತ್ತಿತರ ಕಲಾತಂಡಗಳೊಡನೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುತ್ತದೆ. ನಂತರ ಉಯ್ಯಲೆ ಸೇವೆ ಮೂಲಕ ಉತ್ಸವ ಮೂರ್ತಿಯನ್ನು ಗರ್ಭಗುಡಿಗೆ ತಂದು ಪಟ್ಟಕ್ಕೆ ಕುಳ್ಳಿರಿಸಿ ಗಣಪತಿ ಪೂಜೆ, ನವಗ್ರಹ ಪೂಜೆ, ಹೋಮ, ಸಹಸ್ರನಾಮ, ಪೂರ್ಣಾಹುತಿ, ಮಹಾಮಂಗಳಾರತಿ ನೆರವೇರಿಸಲಾಗುತ್ತದೆ.