ಸಂಕ್ರಾಂತಿ ಹಿನ್ನೆಲೆ : ಮೈಸೂರಿನಲ್ಲಿ ಖರೀದಿ ಜೋರು

ಮೈಸೂರಿನ ದೇವರಾಜ ಮಾರುಕಟ್ಟೆ ಆವರಣದಲ್ಲಿ ಸಂಕ್ರಾಂತಿ  ಹಬ್ಬಕ್ಕೆ ಖರೀದಿಯಲ್ಲಿ ತೊಡಗಿರುವ ಜನರು
ಮೈಸೂರಿನ ದೇವರಾಜ ಮಾರುಕಟ್ಟೆ ಆವರಣದಲ್ಲಿ ಸಂಕ್ರಾಂತಿ ಹಬ್ಬಕ್ಕೆ ಖರೀದಿಯಲ್ಲಿ ತೊಡಗಿರುವ ಜನರು
Published on
ಮೈಸೂರು: ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿಯನ್ನು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಗುರುವಾರ ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ನಗರದಲ್ಲಿ ಹಬ್ಬಕ್ಕೆ ಖರೀದಿ ಜೋರಾಗಿ ನಡೆಯಿತು.
ದಕ್ಷಿಣಾಯನದಿಂದ ಉತ್ತರಾಯಣದ ಕಡೆಗೆ ಸೂರ್ಯನ ಚಲನೆಯನ್ನು ಸಂಕ್ರಾಂತಿಯಾಗಿ ಆಚರಿಸಲಾಗುತ್ತದೆ. ಈ ಸಮಯದಲ್ಲಿ ಸೂರ್ಯದೇವ ತನ್ನ ಮಗ ಶನಿಯನ್ನು ಭೇಟಿ ಮಾಡುತ್ತಾನೆ ಎಂಬ ನಂಬಿಕೆ ಇದೆ. ಮೈಸೂರು ಭಾಗದಲ್ಲಿ ಜನರು ಹಬ್ಬದ ದಿನದಂದು ಬೇಗನೆ ಎದ್ದು ಸ್ನಾನ ಮಾಡಿ, ಸೂರ್ಯ ದೇವನಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಮನೆ ಮುಂಭಾಗ ಚಿತ್ತಾಕರ್ಷಕ ರಂಗೋಲಿ ಬಿಡಿಸಿ ಅದಕ್ಕೆ ಬಣ್ಣ ತುಂಬುತ್ತಾರೆ. ಮನೆಗಳನ್ನು ಅಲಂಕಾರ ಮಾಡಿ ಎಳ್ಳು-ಬೆಲ್ಲ ಹಂಚಲಾಗುತ್ತದೆ.
ಜಾನುವಾರುಗಳಿಗೆ ಅರಿಶಿಣ ಬಳಿದು ಪೂಜೆ ಸಲ್ಲಿಸಲಾಗುತ್ತದೆ. ಅಲ್ಲದೆ, ತ್ತುಗಳನ್ನು ಕಿಚ್ಚು ಹಾಯಿಸಲಾಗುತ್ತದೆ. ಜಾನುವಾರುಗಳನ್ನು ಅಲಂಕರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ನಂತರ ಕಿಚ್ಚು ಹಾಯಿಸುವುದು ಮೈಸೂರು ಭಾಗದ ಸಂಕ್ರಾಂತಿಯ ವೈಶಿಷ್ಟೃದಲ್ಲೊಂದಾಗಿದೆ. ಕಿಚ್ಚು ಹಾಯಿಸಿದ ಬಳಿಕ ಮನೆಗೆ ಮರಳುವ ರಾಸುಗಳಿಗೆ ಆರತಿ ಬೆಳಗಿ ಪೂಜೆ ಮಾಡಿ ಪ್ರಸಾದ ನೀಡಲಾಗುತ್ತದೆ.
ನಗರದ ದೇವರಾಜ ಮಾರುಕಟ್ಟೆ, ಚಿಕ್ಕ ಗಡಿಯಾರ ವೃತ್ತ, ಶಿವರಾಂಪೇಟೆ, ವಾಣಿವಿಲಾಸ, ಮಂಡಿ ಮಾರುಕಟ್ಟೆ, ಅಗ್ರಹಾರ ವೃತ್ತ, ನಂಜುಮಳಿಗೆ ವೃತ್ತ, ಜೆಕೆ ಮೈದಾನ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿರುವ ಪ್ರಮುಖ ಮಾರುಕಟ್ಟೆ, ವೃತ್ತಗಳು ಹಾಗೂ ರಸ್ತೆ ಬದಿಯಲ್ಲಿ ಹಬ್ಬಕ್ಕೆ ಅಗತ್ಯ ವಸ್ತುಗಳನ್ನು ಜನರು ಖರೀದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net