ಮೈಸೂರು ವಿವಿ ಪ್ರಸಾರಾಂಗದ ಪಠ್ಯಪುಸ್ತಕಗಳ ಜೆರಾಕ್ಸ್ ಪ್ರತಿ ಮಾರಾಟ : ಕಾನೂನು ಕ್ರಮದ ಎಚ್ಚರಿಕೆ

ಮೈಸೂರಿನ ಯುವರಾಜ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಪ್ರಚಾರೋಪನ್ಯಾಸ ಕಾರ್ಯಕ್ರಮವನ್ನು ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗ ನಿರ್ದೇಶಕ ಪ್ರೊ.ಎಂ. ನಂಜಯ್ಯ ಹೊಂಗನೂರು ಉದ್ಘಾಟಿಸಿದರು. ಪ್ರೊ.ಎಸ್. ಮಹದೇವಮೂರ್ತಿ,  ಅಂಶಿ ಪ್ರಸನ್ನಕುಮಾರ್, ಸಿ.ಡಿ. ಪರಶುರಾಮ, ವಿಜಯಕುಮಾರ್ ಬೊರಟ್ಟಿ, ರವಿಚಂದ್ರ ಇದ್ದರು.
ಮೈಸೂರಿನ ಯುವರಾಜ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಪ್ರಚಾರೋಪನ್ಯಾಸ ಕಾರ್ಯಕ್ರಮವನ್ನು ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗ ನಿರ್ದೇಶಕ ಪ್ರೊ.ಎಂ. ನಂಜಯ್ಯ ಹೊಂಗನೂರು ಉದ್ಘಾಟಿಸಿದರು. ಪ್ರೊ.ಎಸ್. ಮಹದೇವಮೂರ್ತಿ, ಅಂಶಿ ಪ್ರಸನ್ನಕುಮಾರ್, ಸಿ.ಡಿ. ಪರಶುರಾಮ, ವಿಜಯಕುಮಾರ್ ಬೊರಟ್ಟಿ, ರವಿಚಂದ್ರ ಇದ್ದರು.
Published on
ಮೈಸೂರು: ಪ್ರಸಾರಾಂಗ ಪ್ರಕಟಿಸಿರುವ ಪಠ್ಯಪುಸ್ತಕಗಳನ್ನು ಕೆಲವರು ಜೆರಾಕ್ಸ್ ಮಾಡಿ ಮಾರಾಟ ಮಾಡುತ್ತಿದ್ದು, ಇದರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗ ನಿರ್ದೇಶಕ ಪ್ರೊ.ಎಂ. ನಂಜಯ್ಯ ಹೊಂಗನೂರು ಎಚ್ಚರಿಕೆ ನೀಡಿದ್ದಾರೆ.
ಯುವರಾಜ ಕಾಲೇಜಿನ ಸಂವಿಧಾನ ವಿಭಾಗ ಮತ್ತು ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗ ವತಿಯಿಂದ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಪ್ರಚಾರೋಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಮೈಸೂರು ವಿವಿಯು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಕಾಲದಲ್ಲಿ ಪಠ್ಯಪುಸ್ತಕಗಳನ್ನು ಮುದ್ರಿಸಿ ಪೂರೈಸುತ್ತಿದೆ. ಆದರೂ ಲ್ಯಾನ್ಸ್‌ಡೌನ್ ಬಿಲ್ಡಿಂಗ್ ಬಳಿ ಕೆಲವರು ಜೆರಾಕ್ಸ್ ಮಾಡಿ ಮಾರಾಟ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ಕುಲಪತಿ ಹಾಗೂ ಕುಲಸಚಿವರ ಗಮನಕ್ಕೆ ತಂದು ನೋಟಿಸ್ ನೀಡಲಾಗುವುದು ಎಂದರು.
ಆರ್ಥಿಕ ಸಂಕಷ್ಟದ ನಡುವೆಯೂ ಪ್ರಸಾರಾಂಗ ಸಕಾಲದಲ್ಲಿ ಪಠ್ಯಪುಸ್ತಕಗಳನ್ನು ಮುದ್ರಿಸುತ್ತಿದೆ. ಆದರೂ ಖಾಸಗಿಯವರು ಈ ರೀತಿ ಮಾಡಿದಲ್ಲಿ ನಮಗೆ ಆರ್ಥಿಕವಾಗಿ ನಷ್ಟವಾಗುತ್ತದೆ. ಆದ್ದರಿಂದ ಕಾನೂನು ಕ್ರಮಕ್ಕೆ ಮುಂದಾಗಿದ್ದೇವೆ. ದೆಹಲಿಯ ವೆಬ್‌ಸೆಟ್ ಒಂದು ಈ ರೀತಿ ನಮ್ಮ ಪ್ರಕಟಣೆಗಳ ನಕಲು ಮಾಡಿ ಮಾರಾಟ ಮಾಡುತ್ತಿದ್ದು, ಅವರ ವಿರುದ್ಧವೂ ಕಾನೂನು ಸಮರ ನಡೆಸಲಾಗುವುದು ಎಂದು ಹೇಳಿದರು.
ಪ್ರಸಾರಾಂಗವು ಕಳೆದ ತಿಂಗಳು ಹಮ್ಮಿಕೊಂಡಿದ್ದ ವಿಶೇಷ ರಿಯಾಯ್ತಿ ಮಾರಾಟದಲ್ಲಿ 30 ಲಕ್ಷ ರೂ. ಮೌಲ್ಯದ ಪುಸ್ತಕಗಳು ಮಾರಾಟ ವಾಗಿದೆ. ಸುಮಾರು 5 ಸಾವಿರ ಜನರು ಭೇಟಿ ನೀಡಿದ್ದರು. ರಿಯಾಯಿತಿ ಮಾರಾಟದಿಂದ ಪ್ರಸಾರಾಂಗಕ್ಕೆ 15 ಲಕ್ಷ ರೂ. ಬಂದಿದೆ. ಈ ತಿಂಗಳಾಂತ್ಯದವರೆಗೂ ಪ್ರಸಾರಾಂಗ ಹಾಗೂ ರಾಮಸ್ವಾಮಿ ವೃತ್ತದ ಮಳಿಗೆಯಲ್ಲಿ ರಿಯಾಯ್ತಿ ಮಾರಾಟ ಮುಂದುವರೆಯಲಿದೆ ಎಂದರು.
ಪ್ರಸಾರಾಂಗದಲ್ಲಿ 800 ಶೀರ್ಷಿಕೆಗಳ ಕೃತಿಗಳು ಲಭ್ಯವಿವೆ. ಈವರೆಗೆ 800 ಪ್ರಚಾರೋಪನ್ಯಾಸಗಳು ನಡೆದಿದ್ದು, 400 ಸಣ್ಣ ಸಣ್ಣ ಪುಸ್ತಕಗಳನ್ನು ಪ್ರಕಟಿಸಲಾಗಿದೆ. ಮೊದಲು 25ಪೈ ಇದ್ದಿದ್ದು ಈಗ 20 ರೂ. ಆಗಿದೆ. ಈ ಬಾರಿ ಸರಣಿಯಲ್ಲಿ 15 ಪುಟ್ಟ ಕೃತಿಗಳನ್ನು ಪ್ರಕಟಿಸಲಾಗುವುದು ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಎಸ್. ಮಹದೇವಮೂರ್ತಿ, ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಸಿ.ಡಿ. ಪರಶುರಾಮ, ಸಂವಿಧಾನ ವಿಭಾಗದ ಸಂಯೋಜಕ ಡಾ.ರವಿಚಂದ್ರ, ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಪ್ರೊ.ವಿಜಯಕುಮಾರ್ ಬೊರಟ್ಟಿ, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್ ಹಾಗೂ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net