ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕಿ ಪಿ.ವಿ. ಉಷಾಕುಮಾರಿ ಮಾಹಿತಿ
ಎಚ್‌ಡಿಕೆ ಅಧ್ಯಕ್ಷತೆಯಲ್ಲಿ ದಿಶಾ ಸಭೆ
ಮೈಸೂರು: ಮೈಸೂರು ವಿಮಾನ ನಿಲ್ದಾಣ ವಿಸ್ತರಣೆಗಾಗಿ ಮೇಲ್ಭಾಗದಲ್ಲಿ ರನ್‌ವೇ ಮತ್ತು ಅದರ ಕೆಳಭಾಗದಲ್ಲಿ ಸುರಂಗ ಮಾರ್ಗದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾಯ್ದು ಹೋಗಲಿದೆ. ಇದರ ಸಮಗ್ರ ಯೋಜನಾ ವರದಿ(ಡಿಪಿಆರ್) ಅಂತಿಮವಾಗಿದ್ದು, ಅನುಮೋದನೆಯೊಂದೇ ಬಾಕಿ ಇದೆ ಎಂದು ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕಿ ಪಿ.ವಿ. ಉಷಾಕುಮಾರಿ ತಿಳಿಸಿದರು.
ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ(ದಿಶಾ) ಸಭೆಯಲ್ಲಿ ಈ ಮಾಹಿತಿ ನೀಡಿದರು.
ವಿಮಾನ ನಿಲ್ದಾಣ ಉನ್ನತೀಕರಣಕ್ಕಾಗಿ ರನ್‌ವೇ ವಿಸ್ತರಣೆ ಅಗತ್ಯವಾಗಿದ್ದು, ಅದಕ್ಕಾಗಿ ಸುರಂಗ ಮಾರ್ಗ ನಿರ್ಮಿಸಲಾಗುತ್ತಿದೆ. ಮೈಸೂರು-ನಂಜನಗೂಡು ರಾಷ್ಟ್ರೀಯ ಹೆದ್ದಾರಿಗೆ ತಿರುವು ನೀಡಿ ಮೂರು ಕಿ.ಮೀ. ಹೊಸದಾಗಿ ಹೆದ್ದಾರಿ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ, ವಿಮಾನ ನಿಲ್ದಾಣದ ವಿಸ್ತರಣೆಗಾಗಿ ಭೂಸ್ವಾಧೀನ ಪ್ರಕ್ರಿಯೆ ಬಹುತೇಕ ಅಂತಿಮವಾಗಿದೆ. ಭೂಮಿ ಕಳೆದುಕೊಂಡವರಿಗೆ ಪರಿಹಾರ ವರ್ಗಾವಣೆವೊಂದೇ ಬಾಕಿ ಇದೆ. ಸದ್ಯಕ್ಕೆ ಬಾಕಿ ಇರುವ 7 ಎಕರೆಯ ಕಂದಾಯ ಭೂಮಿಯಲ್ಲಿ ಬಡಾವಣೆ ನಿರ್ಮಿಸಲಾಗಿದೆ. ಅದನ್ನು ಸ್ವಾಧೀನಕ್ಕೆ ಪಡೆದುಕೊಳ್ಳಲಾಗುವುದು. ಉಳಿದಂತೆ ಯಾವುದೇ ಅಡೆತಡೆಗಳಿಲ್ಲ ಎಂದು ಸಭೆಗೆ ತಿಳಿಸಿದರು.
3 ಕಿ.ಮೀ. ತಿರುವಿನ ಹೆದ್ದಾರಿ ಕಾಮಗಾರಿಗೆ ಮೊದಲ 500 ಕೋಟಿ ರೂ. ನಿಗದಿಯಾಗಿತ್ತು. ಅದರ ವೆಚ್ಚ ಇದೀಗ 600 ಕೋಟಿ ರೂ. ಏರಿಕೆಯಾಗಿದೆ. ಹೆಚ್ಚುವರಿ 100 ಕೋಟಿ ರೂಪಾಯಿಯನ್ನು ಹೆದ್ದಾರಿ ಪ್ರಾಧಿಕಾರ ಅಥವಾ ವಿಮಾನಯಾನ ಪ್ರಾಧಿಕಾರದಲ್ಲಿ ಯಾರು ಭರಿಸಬೇಕೆಂಬುದು ಗೊಂದಲ ಸೃಷ್ಟಿಯಾಗಿದೆ ಎಂದು ಡಿಸಿ ತಿಳಿಸಿದರು.
ವಿಮಾನ ನಿಲ್ದಾಣದ ಸುತ್ತ ‘ಕೆಂಪು ವಲಯ’:
ವಿಮಾನ ನಿಲ್ದಾಣದ ಸುತ್ತಲಿನ 4 ಕಿ.ಮೀ. ವ್ಯಾಪ್ತಿಯನ್ನು ಕೆಂಪು ವಲಯ ಎಂದು ಘೋಷಿಸಲಾಗಿದ್ದು, ಈ ಪ್ರದೇಶದಲ್ಲಿ ಅನಧಿಕೃತ ಕಟ್ಟಡಗಳು ನಿರ್ಮಾಣದಿಂದ ವಿಮಾನಯಾನದ ಸುರಕ್ಷತೆ ತೊಂದರೆಯಾಗಿದೆ ಎಂದು ನಿರ್ದೇಶಕಿ ಪಿ.ವಿ.ಉಷಾಕುಮಾರಿ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಡಿಸಿ, ಕಡಕೊಳ ಪಟ್ಟಣ ಪಂಚಾಯಿತಿ, ಮೈಸೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ವಿಮಾನ ನಿಲ್ದಾಣ ಪ್ರಾಧಿಕಾರದ ಮಾರ್ಗಸೂಚಿ ಪ್ರಕಾರವೇ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಬೇಕೆಂದು ಸೂಚಿಸಲಾಗಿದೆ ಎಂದು ತಿಳಿಸಿದರು.
ಸಂಸದ ಯದುವೀರ್ ಮಾತನಾಡಿ, ನಂಜನಗೂಡು-ಮೈಸೂರು ರಸ್ತೆಯ ಸುರಂಗ ಮಾರ್ಗದ ಪ್ರಾಥಮಿಕ ಭದ್ರತಾ ಪರಿಶೀಲನಾ ವರದಿಯನ್ನು 6 ತಿಂಗಳಿಂದ ಪಡೆದಿಲ್ಲ. ಇಲ್ಲಿ ಸುರಕ್ಷತೆಗೆ ಆದ್ಯತೆ ಕೊಡಬೇಕು ಎಂದು ತಿಳಿಸಿದರು.
ಕುಶಾಲನಗರ ಹೆದ್ದಾರಿ ಒಂದುವರೆ ವರ್ಷದಲ್ಲಿ ಪೂರ್ಣ:
ಮೈಸೂರು-ಕುಶಾಲನಗರ 92 ಕಿ.ಮೀ. ಚತುಷ್ಪಥ ಹೆದ್ದಾರಿ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಒಂದೂವರೆ ವರ್ಷದೊಳಗೆ ಪೂರ್ಣಗೊಳ್ಳಲಿದೆ. 2500 ಕೋಟಿ ರೂ. ವೆಚ್ಚದಲ್ಲಿ 5 ಹಂತಗಳಲ್ಲಿ ಕಾಮಗಾರಿ ನಡೆಯುತ್ತಿದ್ದು, ಈಗಾಗಲೇ 3 ಹಂತದ ಕಾಮಗಾರಿಗಳಿಗೆ ಚಾಲನೆ ದೊರೆತಿದೆ.
ಈವರೆಗೆ ಭೌತಿಕ ಪ್ರಗತಿ ಶೇ.11ರಷ್ಟಾಗಿದೆ. 6.25 ಕಿಮೀ ಉದ್ದವೂ ಪೂರ್ಣಗೊಂಡಿದೆ. ಜಿಲ್ಲೆಯಲ್ಲಿ ವಿವಿಧ ಹೆದ್ದಾರಿಗಳಲ್ಲಿರುವ 8 ಕಡೆ ಅಪಘಾತ ವಲಯಗಳನ್ನು ಗುರುತಿಸಲಾಗಿದೆ. ಈ ಸಮಸ್ಯೆ ನಿವಾರಣೆಗಾಗಿ ಕೆಳಸೇತುವೆ, ವಿಸ್ತರಣೆ ಇನ್ನಿತರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಮಾಹಿತಿ ನೀಡಿದರು.
ಈ ಹೆದ್ದಾರಿಗಾಗಿ ಭೂಮಿ ಪಡೆಯಲು ತಕರಾರು ಇರುವ ಕಡೆ ಬಗೆಹರಿಸಬೇಕು ಎಂದು ಸಚಿವ ಕುಮಾರಸ್ವಾಮಿ ಸೂಚಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಈ ಹೆದ್ದಾರಿ ನಿರ್ಮಾಣಕ್ಕೆ ಬೇಕಾಗಿರುವ ಭೂಮಿಯನ್ನು ಪಡೆಯಲಾಗಿದೆ. ಆದರೂ ಕೆಲವು ಕಡೆ ತಕರಾರು ಇದೆ. ಭೂಮಿಯನ್ನು ವಶಕ್ಕೆ ಪಡೆದು ಹೆದ್ದಾರಿ ಪ್ರಾಧಿಕಾರಕ್ಕೆ ಈಗಾಗಲೇ ಹಸ್ತಾಂತರಿಸಲಾಗಿದೆ. ಪೊಲೀಸ್ ಭದ್ರತೆಯಲ್ಲಿ ಕಾಮಗಾರಿ ನಡೆಸಲಾಗುವುದು ಎಂದು ಸಭೆಗೆ ತಿಳಿಸಿದರು.