ಸ್ಥಳ ಮಹತ್ವವನ್ನು ತಿಳಿದುಕೊಳ್ಳಬೇಕಾದರೆ ಇತಿಹಾಸ, ಭೂಗೋಳ, ಸ್ಥಳೀಯ ಭಾಷೆ ಮತ್ತು ಶಿಲಾ ಶಾಸನಗಳ ಅರಿವು ಅವಶ್ಯ ಎಂದು ಪ್ರಸಾರಾಂಗದ ಕಾರ್ಯನಿರ್ವಾಹಕ ಸಂಪಾದಕಿ ಕೆ.ಪಿ.ಲಲಿತಾ ತಿಳಿಸಿದರು.
ಮೈಸೂರು ವಿವಿ ಪ್ರಸಾರಾಂಗ ಹಾಗೂ ಹಿಂದೂಸ್ಥಾನ ಕಾಲೇಜಿನ ಸಹಯೋಗದಲ್ಲಿ ಬುಧವಾರ ನಡೆದ ಪ್ರಚಾರ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ಥಳನಾಮಗಳು, ಆ ಸ್ಥಳದ ಸಂಸ್ಕೃತಿ ಆಚಾರ-ವಿಚಾರಗಳು, ಹೆಸರಿನ ಮೂಲಸ್ವರೂಪದ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. ಅದಕ್ಕೆ ಆಳವಾದ ಜ್ಞಾನ, ಸಂಶೋಧನಾ ಮನೋಭಾವ ಅಗತ್ಯವಾಗಿದೆ. ಅದಕ್ಕೆ ಭೂಗೋಳ, ಇತಿಹಾಸ, ನಾಣ್ಯಗಳ ಅಧ್ಯಯನ ಸಹಕಾರಿಯಾಗಿದೆ ಎಂದರು.
19ನೇ ಶತಮಾನದಿಂದ ಜರ್ಮನಿಯಲ್ಲಿ ಮೊದಲ ಬಾರಿಗೆ ಸ್ಥಳನಾಮಗಳ ಬಗ್ಗೆ ಅಧ್ಯಯನ ಆರಂಭವಾಯಿತು. ತದನಂತರ ಐರೋಪ್ಯ ರಾಷ್ಟ್ರಗಳು ಪ್ರಾರಂಭ ಮಾಡಿದವು. ಹಾಗೆ ನೋಡಿದರೆ ಬ್ರಿಟಿಷರ ಉಚ್ಚಾರಣೆಯ ಕೊರತೆಯಿಂದ ಹಲವು ಗ್ರಾಮಗಳ ಹೆಸರುಗಳು ಬದಲಾಗಿವೆ. ಕುಳಿಗಲ್ ಕುಣಿಗಾಲ್, ಕೂರ್ಗ್ ಕೊಡಗಾಗಿದೆ, ತಿತಿಲಮತಿ ತಿತಿಮತಿ, ಹೀಗೆ ಸಾಕಷ್ಟು ಬದಲಾವಣೆಗಳು ಆಗಿವೆ ಎಂದು ತಿಳಿಸಿದರು.
ಪ್ರಸಾರಾಂಗದ ನಿರ್ದೇಶಕ ಪ್ರೊ.ಎಂ.ನಂಜಯ್ಯ ಹೊಂಗನೂರು ಮಾತನಾಡಿ, ಪ್ರಸಾರಾಂಗ ವಿಶ್ವವಿದ್ಯಾಲಯಕ್ಕೆ ಆದಾಯ ತಂದು ಕೊಡುವ ಒಂದು ಸಂಸ್ಥೆಯಾಗಿದೆ. ಆದರೆ, ಅದರ ಸೂಕ್ತ ನಿರ್ವಹಣೆಯಿಂದ ಅದು ಸಾಧ್ಯವಾಗಲಿದೆ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಸಿ.ಜೆ.ಪ್ರಿಯ, ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಶಿವಕುಮಾರ್, ಪ್ರಸಾರಾಂಗದ ಅಧೀಕ್ಷಕ ಚನ್ನಬಸಪ್ಪ ಮತ್ತಿತರು ಇದ್ದರು.