ಮೂರು ಜಲಮೂಲಗಳ ಪುನರುಜ್ಜೀವನ

ಜಲ ಭದ್ರತೆಗೆ ‘ಪ್ರಾಜೆಕ್ಟ್ ನನ್ನೀರ್’ ಬಲ
Revival of three water bodies in Haliyal
ಮೂರು ಜಲಮೂಲಗಳ ಪುನರುಜ್ಜೀವನ
Published on: 

ಉತ್ತರ ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಜಲ ಭದ್ರತೆ ಹಾಗೂ ಅಂತರ್ಜಲ ಮರುಪೂರಣಕ್ಕೆ ಒತ್ತು ನೀಡಿರುವ ಮೈಸೂರು ಮೂಲದ ಎಎಂಎಂ ಪ್ರತಿಷ್ಠಾನದ ‘ಪ್ರಾಜೆಕ್ಟ್ ನನ್ನೀರ್’ ಯೋಜನೆಯಡಿ ಹಳಿಯಾಳ ತಾಲ್ಲೂಕಿನ ಮೂರು ಪ್ರಮುಖ ಜಲಮೂಲಗಳನ್ನು ಪುನರುಜ್ಜೀವನಗೊಳಿಸಲಾಗಿದೆ.

ಹಳಿಯಾಳದ ತೇರಗಾಂವ ಗ್ರಾಮದ ಕುಂಬಾರಕೆರೆ, ಅಲ್ಲೋಳಿ ಹೊಂಡ ಹಾಗೂ ಹನುಮಂತ ಹೊಂಡಗಳ ಪುನರುಜ್ಜೀವನದಿಂದ ನೀರು ಸಂಗ್ರಹಣಾ ಸಾಮರ್ಥ್ಯ ಗಣನೀಯವಾಗಿ ಹೆಚ್ಚಿದ್ದು, 370ಕ್ಕೂ ಹೆಚ್ಚು ಕುಟುಂಬಗಳಿಗೆ ಕೃಷಿ ಹಾಗೂ ದೈನಂದಿನ ಅಗತ್ಯಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಲಾಗಿದೆ.

54.5 ಎಕರೆ ವಿಸ್ತೀರ್ಣದ ಕುಂಬಾರಕೆರೆಯ ನೀರು ಸಂಗ್ರಹ ಸಾಮರ್ಥ್ಯವನ್ನು 3,52,002 ಘನ ಮೀಟರ್‌ನಿಂದ 6,55,452 ಘನ ಮೀಟರ್‌ಗೆ ಹೆಚ್ಚಿಸಲಾಗಿದೆ. ಇದರಿಂದ ಸುಮಾರು 243 ಕುಟುಂಬಗಳಿಗೆ ಪ್ರಯೋಜನವಾಗಲಿದ್ದು, ಅಂತರ್ಜಲ ಮರುಪೂರಣ, ನೀರಾವರಿ ಹಾಗೂ ಬೇಸಿಗೆಯಲ್ಲಿ ನೀರಿನ ಲಭ್ಯತೆ ಸುಧಾರಿಸುವ ನಿರೀಕ್ಷೆಯಿದೆ.

ಅಲ್ಲೋಳಿ ಹೊಂಡದ ಸಂಗ್ರಹ ಸಾಮರ್ಥ್ಯ 27,280ರಿಂದ 87,296 ಘನ ಮೀಟರ್‌ಗೆ, ಹನುಮಂತ ಹೊಂಡದ ಸಾಮರ್ಥ್ಯ 10,115ರಿಂದ 24,276 ಘನ ಮೀಟರ್‌ಗೆ ಹೆಚ್ಚಿಸಲಾಗಿದೆ. ಹೂಳೆತ್ತುವುದು, ಕೆರೆಗಳ ಬದುಗಳನ್ನು ಬಲಪಡಿಸುವುದು ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.

ಹಳಿಯಾಳ ತಾಲ್ಲೂಕಿನಲ್ಲಿ ನೈಋತ್ಯ ಮುಂಗಾರು ಅವಧಿಯಲ್ಲಿ 1,500 ಮಿ.ಮೀ.ಗೂ ಅಧಿಕ ಮಳೆಯಾಗುತ್ತಿದ್ದರೂ, ಮಳೆನೀರನ್ನು ಸಮರ್ಪಕವಾಗಿ ಸಂಗ್ರಹಿಸಲು ಹಾಗೂ ಅಂತರ್ಜಲಕ್ಕೆ ಮರುಪೂರಣ ಮಾಡಲು ಇರುವ ಸೀಮಿತ ಸಾಮರ್ಥ್ಯದಿಂದ ನೀರಿನ ಕೊರತೆ ಎದುರಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯ ಜಲಮೂಲಗಳ ಪುನರುಜ್ಜೀವನಕ್ಕೆ ಯೋಜನೆ ಒತ್ತು ನೀಡಿದೆ.

ಇ.ಐ.ಡಿ. ಪಾರಿ ಇಂಡಿಯಾ ಲಿಮಿಟೆಡ್ ಸಿಇಒ ಹಾಗೂ ಪ್ರಾಜೆಕ್ಟ್ ನನ್ನೀರ್ ಅಧ್ಯಕ್ಷ ಮುತ್ತು ಮುರುಗಪ್ಪನ್ ಮಾತನಾಡಿ, ಜಲ ಭದ್ರತೆ ಸಮುದಾಯ ಮಟ್ಟದಿಂದಲೇ ಆರಂಭವಾಗಬೇಕು. ಸ್ಥಳೀಯ ಜಲಮೂಲಗಳ ಪುನರುಜ್ಜೀವನವು ಅಂತರ್ಜಲ ಲಭ್ಯತೆ, ಕೃಷಿ ಹಾಗೂ ಭವಿಷ್ಯದ ತಲೆಮಾರುಗಳಿಗೆ ನೆರವಾಗುವ ಸುಸ್ಥಿರ ಜಲ ನಿರ್ವಹಣೆಗೆ ಬದ್ಧತೆಯನ್ನು ತೋರಿಸುತ್ತದೆ ಎಂದು ಹೇಳಿದರು.

ಕುಂಬಾರಕೆರೆ ಪುನರುಜ್ಜೀವನದಿಂದ ಬೇಸಿಗೆಯಲ್ಲೂ ನೀರಾವರಿ ಸೌಲಭ್ಯ ಹೆಚ್ಚಾಗಲಿದೆ ಎಂದು ತೇರಗಾಂವ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ರೈತರಾದ ಪಿಶುನಾಥ ದೇವೇಂದ್ರ ಮಿರಶಿ ಮತ್ತು ನಾಗಪ್ಪ ಶಾಂತಪ್ಪ ಕಕ್ಕೇರಿ ತಿಳಿಸಿದ್ದಾರೆ.

ಹನುಮಂತ ಹೊಂಡದ ಪುನರುಜ್ಜೀವನವು ಬೇಸಿಗೆಯಲ್ಲಿ ಕಬ್ಬು ಬೆಳೆಗೆ ನೀರು ಒದಗಿಸಲು ನೆರವಾಗಲಿದೆ ಎಂದು ಹುಲ್ಲತ್ತಿ ಗ್ರಾಮದ ರೈತರಾದ ರುದ್ರಪ್ಪ ಪರಶುರಾಮ ಚವಾಣ್ ಮತ್ತು ಮಹಾದೇವ ಯಲ್ಲಪ್ಪನವರ್ ಹೇಳಿದ್ದಾರೆ.

ಅಲ್ಲೋಳಿ ಹೊಂಡದ ನೀರು ಸಂಗ್ರಹ ಸಾಮರ್ಥ್ಯ ಎರಡು ಪಟ್ಟಿಗಿಂತಲೂ ಹೆಚ್ಚಾಗಿದ್ದು, ಬೇಸಿಗೆಯಲ್ಲಿ ನೀರಾವರಿ ಮತ್ತು ಕುಡಿಯುವ ನೀರಿನ ಲಭ್ಯತೆಗೆ ನೆರವಾಗಲಿದೆ ಎಂದು ಅಲ್ಲೋಳಿಯ ರೈತರಾದ ಸಂದೀಪಕುಮಾರ್ ಉಡಚಪ್ಪ ಬೊಬಟಿ ಹಾಗೂ ನಾಗರಾ ಮಸನು ಗೌಡ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net