ಮೈಸೂರು: ಕೇಂದ್ರ ಸರ್ಕಾರದ ನಿವೃತ್ತ ನೌಕರರಿಗೆ ಸಂಬಂಧಿಸಿದ ಊರ್ಜಿತ ಕಾಯ್ದೆ ಹಾಗೂ 8ನೇ ವೇತನ ಆಯೋಗದ ನಿಯಮಾವಳಿಗಳಲ್ಲಿ ಪಿಂಚಣಿದಾರರಿಗೆ ಅನಾನುಕೂಲವಾಗುವ ನಿರ್ಧಾರಗಳನ್ನು ಖಂಡಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬುಧವಾರ ನಿವೃತ್ತ ನೌಕರರು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಪ್ರಸ್ತಾವನೆಯ ಪ್ರಕಾರ 1-1-2026 ರಿಂದ ಪೂರ್ವಾನ್ವಯವಾಗುವಂತೆ ಪಿಂಚಣಿದಾರರನ್ನು ವಿಭಜಿಸಿ ಮುಂದಿನ ದಿನಗಳಲ್ಲಿ ವೇತನ ಪರಿಷ್ಕರಣೆ ಹಾಗೂ ವಾರ್ಷಿಕವಾಗಿ ನೀಡುತ್ತಿದ್ದ ಎರಡು ತುಟ್ಟಿ ಭತ್ಯೆ ನೀಡಲು ಸಾಧ್ಯವಾಗುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವುದರಿಂದ ನಿವೃತ್ತ ನೌಕರರಲ್ಲಿ ಆತಂಕ ಹೆಚ್ಚಿಸಿದೆ ಎಂದು ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಿ.ಆರ್. ಉಮಾಕಾಂತ್ ಕಳವಳ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳಾದ ನಾಗೇಶ್, ಕೆ.ಎಂ. ನಾಗರಾಜು, ತಂಗವೇಲು, ಬಿ.ಎಸ್. ರಂಗಸ್ವಾಮಿ, ಕೆ.ವಿ. ರಾಜಶೇಖರ್, ರಾಚಯ್ಯ, ಪುಷ್ಪಲತಾ, ಜೆ.ವಿ. ನರಸಿಂಹ ಪ್ರಸಾದ್, ಶ್ರೀಕಂಠೇಶ್ ಹಾಗೂ ಇತರರು ಪಾಲ್ಗೊಂಡಿದ್ದರು.