ಮಾನವ-ವನ್ಯಜೀವಿ ಸಂಘರ್ಷಕ್ಕೆ ಬೇಕಿದೆ ಪರಿಹಾರ: ಅರಣ್ಯ ಇಲಾಖೆ ನಿವೃತ್ತ ಕಾರ್ಯದರ್ಶಿ ಲಕ್ಷ್ಮಣ ಸಲಹೆ
ನಿವೃತ್ತ ಅರಣ್ಯಾಧಿಕಾರಿಗಳ ಸಂಘದಿಂದ ನಗರದಲ್ಲಿ ಸರೀನಾ ಸಿಕ್ಕಲಿಗಾರ, ಪಿ.ಎ.ಸೀಮಾ ಅವರನ್ನು ಸನ್ಮಾನಿಸಲಾಯಿತು. ಎ.ಸಿ.ಲಕ್ಷ್ಮಣ, ಚಂಗಪ್ಪ, ಎಂ.ಕೆ.ಅಪ್ಪಯ್ಯ, ಟಿ..ಬಾಲಚಂದ್ರ, ಯಾಲಕ್ಕಿ, ಎಚ್.ಸಿ.ಕಾಂತರಾಜು, ಶ್ರೀಧರ್, ರಾಮಲಿಂಗೇಗೌಡ, ನಾಗರಾಜ ಆಚಾರ್ ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಅರಣ್ಯ ಹರಿದು ಹಂಚಿ ಹೋಗಿ ಸಂಘರ್ಷ ಪರಾಕಾಷ್ಠೆ ತಲುಪಿ ಜನ ತೊಂದರೆ ಅನುಭವಿಸುವಂತಾಗಿದೆ
ಜನ ನೆಮ್ಮದಿಯಿಂದ ಇರಬೇಕೆಂದರೆ ಅರಣ್ಯ ಸಂರಕ್ಷಣೆ ಅತಿ ಮುಖ್ಯ
ಮೈಸೂರು:ಅರಣ್ಯ ಹಾಗೂ ಪರಿಸರ ನಾಶದಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಸನ್ನಿವೇಶ ನಿರ್ಮಾಣವಾಗುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಯೋಜನೆ ರೂಪಿಸಿ ಜಾರಿಗೊಳಿಸಬೇಕಾಗಿದೆ ಎಂದು ಅರಣ್ಯ ಇಲಾಖೆ ನಿವೃತ್ತ ಕಾರ್ಯದರ್ಶಿ ಎ.ಸಿ.ಲಕ್ಷ್ಮಣ ಹೇಳಿದರು.
ನಿವೃತ್ತ ಅರಣ್ಯಾಧಿಕಾರಿಗಳ ಸಂಘದಿಂದ ನಗರದ ರೇಸ್‌ಕ್ಲಬ್‌ನಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.
ಅರಣ್ಯ ನಾಶದ ಪರಿಣಾಮವನ್ನು ನಾವು ವನ್ಯಜೀವಿ ಹಾಗೂ ಮಾನವ ಸಂಘರ್ಷದ ರೂಪದಲ್ಲಿ ನೋಡುತ್ತಿದ್ದೇವೆ. ಅರಣ್ಯ ಹರಿದು ಹಂಚಿ ಹೋಗಿ ಸಂಘರ್ಷ ಪರಾಕಾಷ್ಠೆ ತಲುಪಿ ಜನ ತೊಂದರೆ ಅನುಭವಿಸುವಂತಾಗಿದೆ. ಇದಕ್ಕೆಲ್ಲ ಪರಿಹಾರ ಕಂಡುಕೊಂಡರೆ ಮಾತ್ರ ಅರಣ್ಯ, ವನ್ಯಜೀವಿಗಳು ಉಳಿದು ನಾಡು ರಕ್ಷಣೆಯಾಗಲಿದೆ ಎಂದರು.
ಜನ ನೆಮ್ಮದಿಯಿಂದ ಇರಬೇಕೆಂದರೆ ಅರಣ್ಯ ಸಂರಕ್ಷಣೆ ಅತಿ ಮುಖ್ಯ. ವಿಜ್ಞಾನಿಗಳು, ಅರಣ್ಯ ಸಂರಕ್ಷಕರು, ಆಡಳಿತಗಾರರು ಇದಕ್ಕಾಗಿ ಸಹಭಾಗಿತ್ವ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಹೇಳಿದರು.
ಅರಣ್ಯ ಇಲಾಖೆಯಲ್ಲಿ ಹಲವು ಅಧಿಕಾರಿಗಳು ದಕ್ಷತೆಯಿಂದ ಕೆಲಸ ಮಾಡಿದ್ದಾರೆ. ಸಿಬ್ಬಂದಿ ಕೈಜೋಡಿಸಿ ಕೆಲಸ ಮಾಡಿದ್ದರಿಂದಲೇ ದೇಶದಲ್ಲಿ ಕರ್ನಾಟಕದ ಅರಣ್ಯಕ್ಕೆ ತನ್ನದೇ ಆದ ಮಹತ್ವವಿದೆ. ಈಗಿನ ತಲೆಮಾರಿನ ಹಲವು ಅಧಿಕಾರಿಗಳು ಅದೇ ರೀತಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಎಂತಹ ಒತ್ತಡ ಬಂದರೂ ಸಂಯಮ, ಸಮಚಿತ್ತತೆ, ಸ್ನೇಹಮಯವಾಗಿ ಕೆಲಸ ಮಾಡುವುದು. ಮುಂದಾಳತ್ವ ವಹಿಸುವುದು ಅತಿಮುಖ್ಯ ಎಂದರು.
ಅರಣ್ಯ ಇಲಾಖೆಯಲ್ಲಿ ಹಲವು ವರ್ಷ ಕೆಲಸ ಮಾಡಿದ ಚಂಗಪ್ಪ ಅವರು ಈಗಲೂ ಸೇವಾಪರತೆಯನ್ನು ಮುಂದುವರಿಸಿದ್ದಾರೆ. ಮೈಸೂರು ರೇಸ್‌ಕ್ಲಬ್‌ನ ಸ್ಟೀವರ್ಡ್ ಆಗಿ ಆಯ್ಕೆಯಾಗಿರುವುದು ಸಂತಸದ ವಿಚಾರ ಎಂದು ಹೇಳಿದರು.
ಸದ್ಯ ಹಿಂದೆ ವಿಜಯಪುರ, ಬೆಂಗಳೂರು ನಂತರ ಈಗ ಕೋಲಾರದಲ್ಲಿ ಡಿಸಿಎಫ್ ಆಗಿ ಅರಣ್ಯ ಒತ್ತುವರಿ ತೆರವು ಮಾಡಲು ಶ್ರಮ ಹಾಕುತ್ತಿರುವ ಸರೀನಾ ಸಿಕ್ಕಲಿಗಾರ, ಕೊಡಗು, ಮಂಡ್ಯ, ಹುಣಸೂರು ನಂತರ ಈಗ ನಾಗರಹೊಳೆ ಹುಲಿ ಯೋಜನೆ ನಿರ್ದೇಶಕರಾಗಿ ಸಂರಕ್ಷಣೆ ಜತೆಗೆ ಗಿರಿಜನರ ಹಿತರಕ್ಷಣೆಗೆ ಒತ್ತು ನೀಡುತ್ತಿರುವ ಪಿ.ಎ.ಸೀಮಾ ಅವರನ್ನು ಸನ್ಮಾನಿಸಲಾಯಿತು.
ನಿವೃತ್ತ ಅರಣ್ಯಾಧಿಕಾರಿಗಳಾದ ಎಂ.ಕೆ.ಅಪ್ಪಯ್ಯ, ಟಿ.ಬಾಲಚಂದ್ರ, ಯಾಲಕ್ಕಿ, ಎಚ್.ಸಿ.ಕಾಂತರಾಜು, ಶ್ರೀಧರ್, ರಾಮಲಿಂಗೇಗೌಡ, ನಾಗರಾಜ ಆಚಾರ್ ಇತರರು ಇದ್ದರು.