ನೆಪ ಹೇಳದೆ ನೀರಿನ ಸಮಸ್ಯೆ ಬಗೆಹರಿಸಿ

ಪಿರಿಯಾಪಟ್ಟಣದ ತಾಪಂ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಕೆ.ವೆಂಕಟೇಶ್ ಅಧಿಕಾರಿಗಳಿಂದ ಮಾಹಿತಿ ಪಡೆದರು. ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ, ಜಿಪಂ ಸಿಇಒ ಯುಕೇಶ್ ಕುಮಾರ್ ಇದ್ದರು.
ಪಿರಿಯಾಪಟ್ಟಣದ ತಾಪಂ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಕೆ.ವೆಂಕಟೇಶ್ ಅಧಿಕಾರಿಗಳಿಂದ ಮಾಹಿತಿ ಪಡೆದರು. ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ, ಜಿಪಂ ಸಿಇಒ ಯುಕೇಶ್ ಕುಮಾರ್ ಇದ್ದರು.
Published on
ಪಿರಿಯಾಪಟ್ಟಣ: ತಾಲೂಕಿನಲ್ಲಿ ನೀರಿನ ಸಮಸ್ಯೆ ಕಂಡು ಬಂದಲ್ಲಿ ಪಿಡಿಒಗಳು ಕಥೆ ಹೇಳದೆ ಕೂಡಲೇ ಕಾರ್ಯ ಪ್ರವೃತ್ತರಾಗಿ ಸಮಸ್ಯೆ ಬಗೆಹರಿಸಲು ಯೋಚಿಸಿ, ತುರ್ತು ಕೆಲಸಕ್ಕಾಗಿ ಅನುಮತಿಯ ನೆಪ ಹೇಳಬೇಡಿ ಎಂದು ಶಾಸಕ ಕೆ.ವೆಂಕಟೇಶ್ ತಾಕೀತು ಮಾಡಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾಲೂಕಿನ ಗ್ರಾಪಂ ವ್ಯಾಪ್ತಿಗಳಲ್ಲಿ ಇರುವ ನೀರಿನ ಸಮಸ್ಯೆ ಕುರಿತು ಮಾಹಿತಿ ಪಡೆದು ಮಾತನಾಡಿದರು.
ಪಿಡಿಒಗಳಿಗೆ ಸಾಮಾನ್ಯ ಜ್ಞಾನ ಇರಬೇಕು. ಜೆಜೆಎಂ ಸೇರಿದಂತೆ ಯಾವುದೇ ಯೋಜನೆಯಲ್ಲಿ ಕೆಲಸ ಪೂರ್ಣಗೊಂಡರೆ ಕ್ರಿಯಾ ಯೋಜನೆಯಂತೆ ಕಾಮಗಾರಿ ನಡೆದಿದೆಯೇ ಎಂದು ಪರೀಕ್ಷಿಸಿ ನಂತರ ಆ ಯೋಜನೆಯನ್ನು ಗ್ರಾಪಂ ವ್ಯಾಪ್ತಿಗೆ ತೆಗೆದುಕೊಳ್ಳಬೇಕು. ಸರಿಯಾಗಿ ಕೆಲಸ ಆಗದಿದ್ದಲ್ಲಿ ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಸೂಚಿಸಿದರು.
ಕಂಪಲಾಪುರ, ಬೆಕ್ಯ ಗೇಟ್, ಬಿಲ್ಲಹಳ್ಳಿ, ಪುನಾಡಹಳ್ಳಿ, ಆರ್.ತುಂಗಾ, ಹಿಟ್ನೆಹೆಬ್ಬಾಗಿಲು, ಹುಣಸವಾಡಿ, ದೊಡ್ಡಬೇಲಾಳು, ಅರೇನಹಳ್ಳಿಯಲ್ಲಿ, ಕೋಮಲಾಪುರ, ತೆಲುಗಿನ ಕುಪ್ಪೆ ಸೇರಿದಂತೆ ಕೆಲವು ಗ್ರಾಮಗಳಲ್ಲಿ ಅಂತರ್ಜಲದ ಸಮಸ್ಯೆ, ಬೋರ್‌ವೆಲ್‌ಗಳಲ್ಲಿ ನೀರು ಕಡಿಮೆಯಾಗಿರುವುದು, ವಿದ್ಯುತ್ ಸಂಪರ್ಕ ಬಾಕಿ ಇರುವುದು, ಪೈಪ್‌ಲೈನ್ ಕಾಮಗಾರಿ ಬಾಕಿ ಉಳಿದಿರುವುದು ಸೇರಿದಂತೆ ತಾಂತ್ರಿಕ ಕಾರಣದಿಂದ ನೀರು ಪೂರೈಕೆಗೆ ತೊಂದರೆಯಾಗುತ್ತಿದೆ ಎಂದು ಸಭೆಯಲ್ಲಿ ಪಿಡಿಒಗಳು ಸಮಸ್ಯೆ ವಿವರಿಸಿದರು.
ಜಿಪಂ ಸಿಇಒ ಯುಕೇಶ್ ಕುಮಾರ್ ಮಾತನಾಡಿ, ಕುಡಿಯುವ ನೀರು ಮತ್ತು ನೈರ್ಮಲೀಕರಣ ಇಲಾಖೆಯ ಎಇಇ ಕೃಷ್ಣಮೂರ್ತಿ ಮತ್ತು ತಾಪಂ ಇಒ ಸುನೀಲ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಸಮನ್ವಯದಿಂದ ಕೆಲಸ ಮಾಡಿ ಸಮಸ್ಯೆ ಬಗೆಹರಿಸಿ ಎಂದು ಆದೇಶಿಸಿದರು.
ತಾಲೂಕಿನಲ್ಲಿ ಪುನಾಡಹಳ್ಳಿ ಬಿಟ್ಟರೆ ಬೇರೆಡೆ ಇದೂವರೆಗೂ ಟ್ಯಾಂಕರ್ ಮೂಲಕ ನೀರು ಪೂರೈಸುವ ಪರಿಸ್ಥಿತಿ ಬಂದಿಲ್ಲ. ಬೋರ್‌ವೆಲ್ ಕೊರೆಸಲು ಒಂದೇ ಏಜೆನ್ಸಿಯನ್ನು ಗೊತ್ತು ಮಾಡಿಕೊಳ್ಳಲಾಗಿದೆ. ಇದರಿಂದ ತಕ್ಷಣ ಬೋರ್‌ವೆಲ್ ಕೊರೆಸಲು ಸಮಸ್ಯೆಯಾಗುತ್ತಿದೆ ಎಂದು ತಾ ಪಂ ಇಒ ಸಭೆಯ ಗಮನಕ್ಕೆ ತಂದರು.
ಬೇರೆಯವರಿಂದಲೂ ಬೋರ್‌ವೆಲ್ ಕೊರೆಸಲು ಶ್ರಮ ಹಾಕಿ. ಬರಗಾಲ ಪರಿಸ್ಥಿತಿಯಲ್ಲಿ ಜನರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಿ ಎಂದು ಸಿಇಒ ಯುಕೇಶ್ ಕುಮಾರ್, ಎಇಇ ಕೃಷ್ಣಮೂರ್ತಿಯವರಿಗೆ ಶಾಸಕರು ಸೂಚಿಸಿದರು.
ತಾಲೂಕಿನಲ್ಲಿ ಆಶ್ರಯ ಯೋಜನೆಯಲ್ಲಿ ನಿವೇಶನ ನೀಡಲು 34 ಗ್ರಾಪಂಗಳಲ್ಲೂ ಜಾಗ ಗುರುತಿಸಲಾಗಿದ್ದು ಈಗಾಗಲೇ ಎಲ್ಲೆಲ್ಲಿ ಫಲಾನುಭವಿಗಳ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಅಧಿಕಾರಿಗಳಿಂದ ಮಾಹಿತಿ ಕೇಳಿದರು.
ಕಣಗಾಲು ಮತ್ತು ಸಂಗರ ಶೆಟ್ಟಳ್ಳಿ ಗ್ರಾಮಗಳನ್ನು ಹೊರತುಪಡಿಸಿ ಎಲ್ಲ ಗ್ರಾಪಂಗಳಲ್ಲೂ ಈಗಾಗಲೇ ನಿವೇಶನ ಗುರುತಿಸಲಾಗಿದೆ ಎಂದು ಪಿಡಿಒಗಳು ಮಾಹಿತಿ ನೀಡಿದರು. ಆದರೆ ಫಲಾನುಭವಿಗಳ ಆಯ್ಕೆಗೆ ಗ್ರಾಮ ಸಭೆ ಕರೆಯಲು ತಡ ಮಾಡುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ಗ್ರಾಮ ಪಂಚಾಯಿತಿಯ ಆಡಳಿತ ಅಧಿಕಾರಿಗಳಾಗಿ ಕೆಲಸ ಮಾಡುತ್ತಿರುವ ಗೆಜೆಟೆಡ್ ಅಧಿಕಾರಿಗಳು ಕೂಡಲೇ ಗ್ರಾಮಸಭೆ ಕರೆದು ಫಲಾನುಭವಿಗಳ ಪಟ್ಟಿ ಕಳುಹಿಸಿಕೊಡುವಂತೆ ಸೂಚಿಸಿದರು.
ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಮಾತನಾಡಿ, ಮುಖ್ಯಮಂತ್ರಿಗಳು ಜಿಲ್ಲೆಯಲ್ಲಿ 50,000 ನಿವೇಶನ ಗುರುತಿಸಿ ಹಂಚಿಕೆ ಮಾಡುವಂತೆ ಸೂಚನೆ ನೀಡಿದ್ದಾರೆ. ಜಿಲ್ಲೆಯಲ್ಲಿ 1,700 ಎಕರೆ ಭೂಮಿ ಗುರುತಿಸಲಾಗಿದ್ದು, ತಾಲೂಕಿನಲ್ಲಿ 350 ಎಕರೆ ಭೂಮಿ ಗುರುತಿಸಲಾಗಿದೆ. ಇದು ನಿವೇಶನ ರಚಿಸಲು ಸೂಕ್ತವೇ ಎಂದು ಗ್ರಾಪಂ ಪಿಡಿಒಗಳು ಸ್ಥಳ ಪರಿಶೀಲಿಸಿ ಕೂಡಲೇ ವರದಿ ನೀಡಿದರೆ ನಿವೇಶನ ಹಂಚಿಕೆ ಮಾಡಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಟೌನ್ ಪ್ಲಾನಿಂಗ್‌ನಿಂದ ಅನುಮತಿ ದೊರೆತಿಲ್ಲ ಎಂದು ನೆಪ ಹೇಳದೆ ಗ್ರಾಮ ಸಭೆ ನಡೆಸಿ. ತಡ ಮಾಡಿದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸಭೆಯಲ್ಲಿ ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿಯಿಂದ ಸ್ಪಷ್ಟನೆ : ಪಿರಿಯಾಪಟ್ಟಣ: ತಾಲೂಕನ್ನು ಬರಗಾಲ ಪೀಡಿತ ಪ್ರದೇಶದ ಪಟ್ಟಿಗೆ ಸೇರಿಸಲಿಲ್ಲ ಎಂದು ನನ್ನ ಮೇಲೆ ಗೂಬೆಕೂರಿಸಲಾಗುತ್ತಿದೆ ಇದರ ಬಗ್ಗೆ ಜಿಲ್ಲಾಧಿಕಾರಿಗಳೇ ಸ್ಪಷ್ಟನೆ ನೀಡಬೇಕು ಎಂದು ಶಾಸಕ ಕೆ.ವೆಂಕಟೇಶ್ ತಿಳಿಸಿದರು.
ಮಾಹಿತಿ ನೀಡಿದ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ, ನಾವು ಬೇಕಾಬಿಟ್ಟಿಯಾಗಿ ಯಾವುದೇ ತಾಲೂಕನ್ನು ಬರಪೀಡಿತ ಎಂದು ಘೋಷಿಸಲು ಸಾಧ್ಯವಿಲ್ಲ. ಎನ್‌ಡಿಆರ್‌ಎಫ್ ಮಾರ್ಗಸೂಚಿಯ ಪ್ರಕಾರ ಮಾತ್ರ ಬರಪೀಡಿತ ಎಂದು ಘೋಷಿಸಲು ಸಾಧ್ಯ. ಇದಕ್ಕಾಗಿ ಉಪಗ್ರಹ ಆಧಾರಿತ ಅಂಕಿ ಅಂಶಗಳನ್ನು ತೆಗೆದುಕೊಳ್ಳಲಾಗುತ್ತದೆ. ಪ್ರಮುಖವಾಗಿ ಸತತ ಮೂರು ವಾರ ಶೇ.50ಕ್ಕಿಂತ ಕಡಿಮೆ ವಾಡಿಕೆ ಮಳೆ ಆಗಿರಬೇಕು. ಆಗ ಸ್ವಯಂ ಬರಪೀಡಿತ ಪಟ್ಟಿಗೆ ಸೇರಲಿದೆ. ಪಿರಿಯಾಪಟ್ಟಣ ತಾಲೂಕು ಮುಂದಿನ ಎರಡು ಮೂರು ದಿನಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾದರೆ ಬರಪೀಡಿತ ಪಟ್ಟಿಗೆ ಸೇರ್ಪಡೆಯಾಗಲಿದೆ ಎಂದು ಸ್ಪಷ್ಟಪಡಿಸಿದರು.
ಸಭೆಯಲ್ಲಿ ತಹಸೀಲ್ದಾರ್ ನಿಸರ್ಗ ಪ್ರಿಯ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಪಿಡಿಒಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net