ಅರಮನೆ ಸುತ್ತಮುತ್ತ ಅನಧಿಕೃತ ಗೂಡಂಗಡಿಗಳ ತೆರವು

ಮೈಸೂರು ಅರಮನೆ
ಮೈಸೂರು ಅರಮನೆ
Published on

ಪ್ರಮುಖ ಮುಖ್ಯಾಂಶಗಳು

  • ಮತ್ತೆ ವ್ಯಾಪಾರಿಗಳ ಬರದಂತೆ ನೋಡಿಕೊಳ್ಳಲು ಕಮಾಂಡೋ ಪಡೆ ನಿಯೋಜನೆ
  • ಹೀಲಿಯಂ ಸಿಲಿಂಡರ್ ಸ್ಫೋಟ ಪ್ರಕರಣದ ಬಳಿಕ ಎಚ್ಚೆತ್ತುಕೊಂಡಿರುವ ಪೊಲೀಸರು
ಮೈಸೂರು: ಹೀಲಿಯಂ ಸಿಲಿಂಡರ್ ಸ್ಫೋಟ ಪ್ರಕರಣದ ಬಳಿಕ ಎಚ್ಚೆತ್ತುಕೊಂಡಿರುವ ಪೊಲೀಸರು, ಮೈಸೂರು ಅರಮನೆ ವರಾಹ ದ್ವಾರದ ಬಳಿ ಅನಧಿಕೃತ ಗೂಡಂಗಡಿಗಳನ್ನು ತೆರವು ಮಾಡಿದ್ದು, ಮತ್ತೆ ವ್ಯಾಪಾರಿಗಳ ಬರದಂತೆ ನೋಡಿಕೊಳ್ಳಲು ಕಮಾಂಡೋ ಪಡೆಯನ್ನು ನಿಯೋಜಿಸಲಾಗಿದೆ.
ಅರಮನೆ ಸುತ್ತಮುತ್ತ ಅನಧಿಕೃತ ಬೀದಿ ಬದಿ ವ್ಯಾಪಾರಿ ಹಾಗೂ ಅಪಾಯಕಾರಿ ಸ್ಥಿತಿಯಲ್ಲಿರುವ ಫಾಸ್ಟ್‌ಫುಡ್‌ಗಳನ್ನು ತೆರವು ಮಾಡುವಂತೆ ಸಾರ್ವಜನಿಕ ವಲಯದಿಂದ ಒತ್ತಾಯ ಕೇಳಿ ಬಂದಿತ್ತು.
 ಈ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ ವರ್ಷಾಚರಣೆಗಾಗಿ ಮೈಸೂರು ಅರಮನೆಗೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಹಾಗೂ ಸ್ಥಳೀಯರು ಆಗಮಿಸುವುದರಿಂದ ಸುರಕ್ಷತೆಗಾಗಿ ಅರಮನೆಯ ವರಾಹ (ಗನ್‌ಹೌಸ್) ಗೇಟ್ ಬಳಿ ಎರಡೂ ಬದಿಯಲ್ಲಿದ್ದ 50 ಗೂಡಂಗಡಿಗಳನ್ನು ತೆರವುಗೊಳಿಸಲಾಗಿದೆ. ಆಟಿಕೆ ಸೇರಿದಂತೆ ವಿವಿಧ ವಸ್ತುಗಳನ್ನು ಮಾರಾಟ ಮಾಡಲು ಗೂಡಂಗಡಿಗಳನ್ನು ಇಟ್ಟುಕೊಂಡಿದ್ದರು.
 ಮತ್ತೆ ವ್ಯಾಪಾರಿಗಳು ಗೂಡಂಗಡಿಗಳನ್ನು ಹಾಕದಂತೆ ತಡೆಗಟ್ಟಲು ಕಮಾಂಡೊ ಪಡೆ ನಿಯೋಜಿಸಲಾಗಿದೆ. 
ಗೂಡಂಗಡಿಗಳಿಗಾಗಿ ಬಳಸಿದ್ದ ಮರದ ಹಲಗೆಗಳನ್ನು ಪಕ್ಕದ ಪಾರ್ಕಿಂಗ್ ಸ್ಥಳಕ್ಕೆ ಹೊಂದಿಕೊಂಡ ಸ್ಥಳದಲ್ಲಿ ಸುರಿಯಲಾಗಿದೆ. ಗೂಡಂಗಡಿ ತೆರವು ಮಾಡಿರುವುದರಿಂದ ಅರಮನೆಯ ವರಾಹ ದ್ವಾರದ ಮುಂಭಾಗ ವಿಶಾಲವಾಗಿ ರೂಪುಗೊಂಡಿದ್ದು, ಪ್ರವಾಸಿಗರು ಅರಮನೆ ವೀಕ್ಷಣೆಗೆ ಸರಾಗವಾಗಿ ಓಡಾಡಲು ಅವಕಾಶ ಮಾಡಿಕೊಟ್ಟಂತಾಗಿದೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net