ಮನ್ ಕಿ ಬಾತ್‌ನಲ್ಲಿ ಬೈಲುಕುಪ್ಪೆಯ ಟಿಬೆಟಿಯನ್ ಕ್ಯಾಂಪ್ ಉಲ್ಲೇಖ

ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆಯಲ್ಲಿರುವ ಟಿಬೆಟಿಯನ್ ಕ್ಯಾಂಪ್
ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆಯಲ್ಲಿರುವ ಟಿಬೆಟಿಯನ್ ಕ್ಯಾಂಪ್
Published on

ಪ್ರಮುಖ ಮುಖ್ಯಾಂಶಗಳು

  • ಪ್ರಧಾನಿ ಮೋದಿಯಿಂದ ಪ್ರಕೃತಿ ಸಂರಕ್ಷಣೆಗೆ ಶ್ಲಾಘನೆ
  • ಬೈಲುಕುಪ್ಪೆಯ ಪ್ರಸಿದ್ಧ ಬೌದ್ಧವಿಹಾರ
ಮೈಸೂರು: ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆಯಲ್ಲಿರುವ ಟಿಬೆಟಿಯನ್ ಕ್ಯಾಂಪ್ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ನಡೆದ ‘ಮನ್ ಕಿ ಬಾತ್’ ಬಾನುಲಿ ರೇಡಿಯೊ ಕಾರ್ಯಕ್ರಮದಲ್ಲಿ ಉಲ್ಲೇಖಿಸಿದ್ದಾರೆ.
ಅಲ್ಲಿ ಪ್ರಕೃತಿ ಸಂರಕ್ಷಣೆ ನಿಟ್ಟಿನಲ್ಲಿ ನಡೆದಿರುವ ಪ್ರಯತ್ನಗಳು ಗಮನಾರ್ಹವಾಗಿವೆ ಎಂದು ಶ್ಲಾಘಿಸಿದ್ದಾರೆ. ಬೌದ್ಧ ಸಂಪ್ರದಾಯವು ಪ್ರಕೃತಿಯೊಂದಿಗೆ ಹೊಂದಿರುವ ಸಂಬಂಧವನ್ನು ಈ ಬೌದ್ಧವಿಹಾರ ರುಜುವಾತು ಪಡಿಸುತ್ತದೆ. ಭಗವಾನ್ ಬುದ್ಧರು ಮರದ ಕೆಳಗೆ ಜ್ಞಾನೋದಯ ಪಡೆದರು. 
ನಿಸರ್ಗ ನಮ್ಮ ಜೀವನದ ಅವಿಭಾಜ್ಯ ಅಂಗ. ಇದಕ್ಕೆ ಬೈಲುಕುಪ್ಪೆಯಲ್ಲಿರುವ ಟಿಬೆಟಿಯನ್ ಕ್ಯಾಂಪ್ ನಿದರ್ಶನ ಎಂದು ಹೇಳಿದ್ದಾರೆ
ಕರ್ನಾಟಕದಲ್ಲಿ ಈ ಪ್ರದೇಶವು 100 ಎಕರೆಗಳಲ್ಲಿ ಹರಡಿದೆ. ಇಲ್ಲಿ 700ಕ್ಕೂ ಹೆಚ್ಚು ಸ್ಥಳೀಯ ಪ್ರಭೇದದ ಮರಗಳನ್ನು ಸಂರಕ್ಷಿಸಿ, ನಳನಳಿಸುವ ಅರಣ್ಯವನ್ನಾಗಿ ಪರಿವರ್ತಿಸಲಾಗಿದೆ. ಧರ್ಮಗುರು ಸಮೈನಿಂಗ್ರಾ ರಿನ್‌ಪೋಚೆ ಮಾರ್ಗದರ್ಶನದಲ್ಲಿ ಬರಡಾಗಿದ್ದ ಭೂಮಿಯನ್ನು ಸಮೃದ್ಧ ಅರಣ್ಯವಾಗಿಸಲಾಗಿದೆ ಎಂದು ಪ್ರಸ್ತಾಪಿಸಿದ್ದಾರೆ.
ಇದು 1995ರಲ್ಲಿ ರಿನ್‌ಪೋಚೆ ಅವರು ಪರಿಸರ ಸಂರಕ್ಷಣೆ ಮತ್ತು ಪ್ರಕೃತಿ ಪುನರುಜ್ಜೀವನದ ಧೈಯದೊಂದಿಗೆ ಸ್ಥಾಪಿಸಿದ ಬೋಧಿಸತ್ವ ಟ್ರಸ್ಟ್ ಅಡಿ ಕಾರ್ಯನಿರ್ವಹಿಸುತ್ತಿದೆ. ಈ ಟ್ರಸ್ಟ್ ನಳಂದ ಶಾಲೆಯನ್ನೂ ನಡೆಸುತ್ತಿದೆ. ಇದು ಸನ್ಯಾಸಿಗಳಿಗೆ ಸುಸ್ಥಿರ ಜೀವನ ಪದ್ಧತಿಗಳಲ್ಲಿ ತರಬೇತಿಯ ಜತೆಗೆ ಶಿಕ್ಷಣವನ್ನೂ ಪಡೆಯುವ ಗುರುಕುಲ ಪದ್ಧತಿಯ ಸಂಸ್ಥೆಯಾಗಿದೆ.
 ಬುದ್ಧ ಪೂರ್ಣಿಮೆಯ ಶುಭಾಶಯಗಳನ್ನು ಸಲ್ಲಿಸಿರುವ ಪ್ರಧಾನಿ, ಬುದ್ಧ ಹಿಂದೆಂದಿಗಿಂತಲೂ ಈಗ ಹೆಚ್ಚು ಪ್ರಸ್ತುತವಾಗಿದ್ದು, ಇದೀಗ ಜಾಗತಿಮಟ್ಟದಲ್ಲಿ ಸೃಷ್ಟಿಯಾಗಿರುವ ಉದ್ವಿಗ್ನತೆ ಮತ್ತು ಸಂಘರ್ಷಗಳ ನಡುವೆ ಬುದ್ಧನ ಶಾಂತಿ ಹಾಗೂ ಕರುಣೆಯ ಸಂದೇಶವು ಇನ್ನಷ್ಟು ಮಹತ್ವದ್ದಾಗಿದೆ ಎಂದು ಹೇಳಿದ್ದಾರೆ.

ಅತಿದೊಡ್ಡ ನಿರಾಶ್ರಿತರ ನೆಲೆ

ಬೈಲುಕುಪ್ಪೆ ವಿಶ್ವದ ಅತಿ ದೊಡ್ಡ ನಿರಾಶ್ರಿತರ ನೆಲೆಗಳಲ್ಲೊಂದು. ಇಲ್ಲಿ ಸುಮಾರು 20,000 ಟಿಬೆಟಿಯನ್ನರು ಹಾಗೂ 7000 ಬೌದ್ದ ಭಿಕ್ಷುಗಳಿದ್ದಾರೆ. ದೇಶದ ವಿವಿಧೆಡೆ ನೆಲೆಸಿರುವ ಟಿಬೆಟಿಯನ್ನರಿಗೆ ಬೈಲುಕುಪ್ಪೆ ಒಂದು ಪವಿತ್ರ ಯಾತ್ರಾ ಸ್ಥಳ. 
ನಿರಾಶ್ರಿತ ಟಿಬೆಟಿಯನ್ನರ ಕೇಂದ್ರ ಸ್ಥಾನ ಹಿಮಾಚಲ ಪ್ರದೇಶದ ಧರ್ಮಶಾಲಾ. ಜಿಲ್ಲೆಯ ಬೈಲುಕುಪ್ಪೆ ಪ್ರವಾಸಿ ತಾಣವಾಗಿ ಪ್ರಖ್ಯಾತಿ ಪಡೆಯಲು ಇಲ್ಲಿ ನಿರ್ಮಿಸಲ್ಪಟ್ಟಿರುವ ಸ್ವರ್ಣ ದೇಗುಲವೇ (ಗೋಲ್ಡನ್ ಟೆಂಪಲ್) ಪ್ರಮುಖ ಕಾರಣ. ಸ್ವರ್ಣಮಂದಿರ ಸೇರಿದಂತೆ ಸುಮಾರು 15ಕ್ಕೂ ಹೆಚ್ಚು ವಿವಿಧ ದೇಗುಲಗಳು, ಧ್ಯಾನಕೇಂದ್ರ, ಸನ್ಯಾಸಿನಿಯರ ಬೌದ್ದ ವಿಹಾರ, ಬೌದ್ಧ ಬಿಕ್ಕುಗಳ ಮಹಾವಿದ್ಯಾಲಯ, ಆಸ್ಪತ್ರೆ, ಬೌದ್ಧ ವಿಹಾರದ ಸುತ್ತ 1300 ಪ್ರಾರ್ಥನಾ ಚಕ್ರಗಳು, 8 ಸ್ತೂಪಗಳು ಸೇರಿದಂತೆ ಹಲವಾರು ವೈಶಿಷ್ಟ್ಯಗಳಿಂದ ಪ್ರವಾಸಿಗರನ್ನು ಸೆಳೆಯುತ್ತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net