ವೃತ್ತಿಯಲ್ಲಿ ನಿಷ್ಠೆ, ಪ್ರಾಮಾಣಿಕತೆ ಇದ್ದಲ್ಲಿ ಗುರುತಿಸಿಕೊಳ್ಳುವಿಕೆ ಸಾಧ್ಯ: ಡಾ.ಪ್ರತಿಭಾ ಸ್ವಾಮಿ
ಜೆಎಸ್‌ಎಸ್ ಸ್ಕೂಲ್ ಆಫ್ ನರ್ಸಿಂಗ್ ವಿದ್ಯಾರ್ಥಿಗಳ ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮದಲ್ಲಿ ಡಾ.ಪ್ರತಿಭಾಸ್ವಾಮಿ, ರೇಣುಕಾದೇವಿ, ಆರ್.ಮಹೇಶ್ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ತರಗತಿಯ ಕಲಿಕೆ ಮುಗಿದರೆ ಜವಾಬ್ದಾರಿ ಮುಗಿಯುತು ಎಂಬ ಭಾವನೆ ಬೇಡ. ಆ ಬಳಿಕವೇ ನಿಜವಾದ ಸವಾಲು ಆರಂಭವಾಗುವುದು
ನರ್ಸಿಂಗ್ ಉದ್ಯೋಗದಲ್ಲಿ ನೀವು ಬದುಕು ರೂಪಿಸಿಕೊಳ್ಳುವುದಲ್ಲದೆ ಇತರರ ಜೀವ ಕಾಪಾಡುವ ಕಾರ್ಯವನ್ನೂ ಮಾಡಬಹುದು
ಪ್ರತಿಜ್ಞಾವಿಧಿಯ ಆಶಯವನ್ನು ಪಾಲಿಸಿದರೆ ವೃತ್ತಿಪರತೆ ಎತ್ತಿ ಹಿಡಿಯಲು ಸಾಧ್ಯ
ಮೈಸೂರು:ವೃತ್ತಿಯ ಬಗ್ಗೆ ಬದ್ಧತೆ, ನಿಷ್ಠೆ ಹಾಗೂ ಪ್ರಾಮಾಣಿಕತೆ ಇರಿಸಿಕೊಂಡು ಕಾರ್ಯ ನಿರ್ವಹಿಸಿದಾಗ ಸಂಬಂಧಿಸಿದ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಸಾಧ್ಯ ಎಂದು ನಿಮ್ಹಾನ್ಸ್ ಕಾಲೇಜ್ ಆಫ್ ನರ್ಸಿಂಗ್ ಪ್ರಾಧ್ಯಾಪಕಿ ಡಾ.ಪ್ರತಿಭಾ ಸ್ವಾಮಿ ಹೇಳಿದರು.
ಜೆಎಸ್‌ಎಸ್ ಸ್ಕೂಲ್ ಆಫ್ ನರ್ಸಿಂಗ್, ಜೆಎಸ್‌ಎಸ್ ಮಹಾವಿದ್ಯಾಪೀಠದಿಂದ ಜೆಎಸ್‌ಎಸ್ ಆಸ್ಪತ್ರೆಯ ಶ್ರೀ ರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ಆಯೋಜಿಸಿದ್ದ ನರ್ಸಿಂಗ್ ವಿದ್ಯಾರ್ಥಿಗಳ ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ತರಗತಿಯ ಕಲಿಕೆ ಮುಗಿದರೆ ಜವಾಬ್ದಾರಿ ಮುಗಿಯುತು ಎಂಬ ಭಾವನೆ ಬೇಡ. ಆ ಬಳಿಕವೇ ನಿಜವಾದ ಸವಾಲು ಆರಂಭವಾಗುವುದು. ಯಾವುದೇ ಕಾರ್ಯವನ್ನು ಶ್ರದ್ಧೆ, ಬದ್ಧತೆಯಿಂದ ಮಾಡಬೇಕು. ಆಗಲೇ ನಿಮ್ಮ ಕಾರ್ಯದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಹೇಳಿದರು.
ಪ್ರತಿಜ್ಞಾವಿಧಿಯ ಆಶಯವನ್ನು ಪಾಲಿಸಿದರೆ ವೃತ್ತಿಪರತೆ ಎತ್ತಿ ಹಿಡಿಯಲು ಸಾಧ್ಯ. ನರ್ಸಿಂಗ್ ಉದ್ಯೋಗದಲ್ಲಿ ನೀವು ಬದುಕು ರೂಪಿಸಿಕೊಳ್ಳುವುದಲ್ಲದೆ ಇತರರ ಜೀವ ಕಾಪಾಡುವ ಕಾರ್ಯವನ್ನೂ ಮಾಡಬಹುದು ಎಂದು ಹೇಳಿದರು.
ನರ್ಸಿಂಗ್ ಕೋರ್ಸ್ ಕಲಿತ ವಿದ್ಯಾರ್ಥಿಗಳಿಗೆ ವಿಪುಲ ಉದ್ಯೋಗಾವಕಾಶಗಳೂ ಇವೆ. ಈಗ ಸರ್ಕಾರವು ಕಮ್ಯುನಿಟಿ ಹೆಲ್ತ್ ಆಫೀಸರ್‌ಗಳನ್ನು ನೇಮಿಸುತ್ತಿದೆ. ಸಮುದಾಯದ ಆರೋಗ್ಯ ಕಾಪಾಡುವ ಈ ಉದ್ಯೋಗವು ಭವಿಷ್ಯದಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದರು.
ಕೋರ್ಸ್ ಕಲಿತ ವಿದ್ಯಾರ್ಥಿಗಳೆಲ್ಲರಿಗೂ ಉದ್ಯೋಗ ದೊರೆತಿದೆ. ವಿದ್ಯಾರ್ಥಿಯ ಕೌಶಲಗಳು ಆತನ ಸ್ಥಾನವನ್ನು ನಿರ್ಧರಿಸುತ್ತವೆ. ಹೀಗಾಗಿ ದೃಢ ಸಂಕಲ್ಪ ಮಾಡಿಕೊಂಡು ಪರಿಶ್ರಮ ವಹಿಸಿ ಕಲಿಕೆ ಮುಂದುವರಿಸಿದರೆ ಉತ್ತಮವಾದ ಬದುಕು ಕಟ್ಟಿಕೊಳ್ಳಲು ಈ ಉದ್ಯೋಗದಿಂದ ಸಾಧ್ಯ ಎಂದರು.
ಜೆಎಸ್‌ಎಸ್ ಸಂಸ್ಥೆಯಲ್ಲಿ ಶಿಕ್ಷಣದೊಂದಿಗೆ ಶಿಸ್ತಿಗೂ ಮಹತ್ವ ನೀಡಲಾಗುತ್ತದೆ. ಸಂಸ್ಥೆಯು ಸ್ವಾಯತ್ತವಾಗಿದ್ದಾಗ ಇನ್ನಷ್ಟು ಬೆಳವಣಿಗೆ ಸಾಧಿಸಲು ಸಾಧ್ಯ ಎನ್ನುವುದಕ್ಕೆ ಸ್ಪಷ್ಟ ಉದಾಹರಣೆ. ಆ ಹಿನ್ನೆಲೆಯಲ್ಲಿ ಕಾಲೇಜಿಗೆ ಬೇಕಾದ ಅವಶ್ಯಕತೆಗಳನ್ನು ಪೂರೈಸಿದರೆ ವಿದ್ಯಾಭ್ಯಾಸದ ಅವಕಾಶಗಳೂ ಹೆಚ್ಚುತ್ತವೆ. ಪ್ರಸ್ತುತ ನೀಡುತ್ತಿರುವ ಶಿಕ್ಷಣದ ಪರಿಣಾಮವಾಗಿ ಮುಂದೆ ನರ್ಸಿಂಗ್ ಕ್ಷೇತ್ರದಲ್ಲೂ ಪ್ರೌಢತೆ ಹೆಚ್ಚುತ್ತದೆ. ಈ ಕ್ಷೇತ್ರದ ಬಗ್ಗೆ ಜನರಲ್ಲಿ ನಂಬಿಕೆ ಉಳಿಸಿಕೊಳ್ಳುವ ಕೆಲಸವನ್ನು ನಾವು ಮಾಡಬೇಕು ಎಂದು ಸಲಹೆ ನೀಡಿದರು.
ಜೆಎಸ್‌ಎಸ್ ನರ್ಸಿಂಗ್ ಕಾಲೇಜಿನಲ್ಲಿ ಪ್ರವೇಶಾತಿ ಪಡೆದಿರುವ ವಿದ್ಯಾರ್ಥಿಗಳು ನರ್ಸಿಂಗ್ ಕ್ಷೇತ್ರದ ಕೌಶಲಗಳನ್ನು ಕಲಿಯಬೇಕು. ಕಾಲೇಜಿನಲ್ಲಿ ಸಿಗುವ ಉತ್ತಮ ಬೋಧನೆಯನ್ನು ಸದುಪಯೋಗ ಪಡೆದುಕೊಂಡು ನರ್ಸಿಂಗ್ ಕ್ಷೇತ್ರದಲ್ಲಿ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ನರ್ಸಿಂಗ್ ಶಿಕ್ಷಣದ ಮಹತ್ವ ಹಾಗೂ ಅವಕಾಶಗಳ ಕುರಿತು ಮಾಹಿತಿ ನೀಡಿದರು. ವಾರ್ಷಿಕ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು
.
ಜೆಎಸ್‌ಎಸ್ ಸ್ಕೂಲ್ ಆಫ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ರೇಣುಕಾದೇವಿ ಪ್ರತಿಜ್ಞಾವಿಧಿ ಬೋಧಿಸಿದರು. ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್.ಮಹೇಶ್, ಸೀನಿಯರ್ ಟ್ಯೂಟರ್ ಆರ್.ಕೆ.ಮಹದೇವಸ್ವಾಮಿ, ಎಚ್.ಎಸ್.ಮಾನಸಾ, ಎಸ್.ನೀತಾ ದಳ್ವಿ ಇತರರು ಇದ್ದರು