ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಹಕರಿಸಿ

ಹುಣಸೂರಿನ ವಿನೋಬಾ ಕಾಲನಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಬುಧವಾರ ಮೈಸೂರಿನ ರವಿಸಂತು ಗೆಳೆಯರ ಬಳಗದ ವತಿಯಿಂದ ಕಲಿಕೋಪಕರಣ ಹಾಗೂ ಕ್ರೀಡಾ ಸಾಮಗ್ರಿಗಳನ್ನು ವಿತರಿಸಲಾಯಿತು. ರವಿ ಸಂತೋಷ್, ಕೆ.ರಮೇಶ್, ನಂಜಾಪುರ ಮನುಕುಮಾರ್, ಮಾಲಾ ಇತರರಿದ್ದರು.
ಹುಣಸೂರಿನ ವಿನೋಬಾ ಕಾಲನಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಬುಧವಾರ ಮೈಸೂರಿನ ರವಿಸಂತು ಗೆಳೆಯರ ಬಳಗದ ವತಿಯಿಂದ ಕಲಿಕೋಪಕರಣ ಹಾಗೂ ಕ್ರೀಡಾ ಸಾಮಗ್ರಿಗಳನ್ನು ವಿತರಿಸಲಾಯಿತು. ರವಿ ಸಂತೋಷ್, ಕೆ.ರಮೇಶ್, ನಂಜಾಪುರ ಮನುಕುಮಾರ್, ಮಾಲಾ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರವಿಸಂತು ಗೆಳೆಯರ ಬಳಗದ ಅಧ್ಯಕ್ಷ ರವಿಸಂತೋಷ್ ಮನವಿ
  • ವಿನೋಬಾ ಕಾಲನಿ ಹಾಗೂ ಹನುಮಂತಪುರ ಹಿರಿಯ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ ವಿವಿಧ ಪರಿಕರ ವಿತರಣೆ
ಹುಣಸೂರು : ಗ್ರಾಮೀಣ ಭಾಗದ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳ ಅಭಿವೃದ್ಧಿ ಮತ್ತು ಉಳಿವಿಗಾಗಿ ದಾನಿಗಳು ಹಾಗೂ ಪಾಲಕರು ಕೈ ಜೋಡಿಸಬೇಕು ಎಂದು ಮೈಸೂರಿನ ರವಿಸಂತು ಗೆಳೆಯರ ಬಳಗದ ಅಧ್ಯಕ್ಷ ರವಿಸಂತೋಷ್ ಹೇಳಿದರು.
ತಾಲೂಕಿನ ವಿನೋಬಾ ಕಾಲನಿ ಹಾಗೂ ಹನುಮಂತಪುರ ಹಿರಿಯ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ ಬುಧವಾರ ಬಳಗದ ವತಿಯಿಂದ ವಾಟರ್‌ಬಾಟಲ್, ನೋಟ್ ಬುಕ್, ಸ್ಟೇಷನರಿ, ಕ್ರೀಡಾ ಸಾಮಗ್ರಿ ವಿತರಿಸಿ ಮಾತನಾಡಿದರು. ಇತ್ತೀಚಿನ ವರ್ಷಗಳಲ್ಲಿ ಗ್ರಾಮೀಣ ಭಾಗದ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ ಸೌಲಭ್ಯದ ಕೊರತೆ ಹೆಚ್ಚಾಗಿದೆ. ಇಂಗ್ಲಿಷ್ ಮಾಧ್ಯಮ ವ್ಯಾಮೋಹದಿಂದ ಮಕ್ಕಳ ದಾಖಲಾತಿ ಸಂಖ್ಯೆ ಕಡಿಮೆಯಾಗುತ್ತಿದೆ.
ಹಾಗಾಗಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿರುವುದು ವಿಷಾದನೀಯ ಎಂದರು.
ಸರ್ಕಾರದ ಜತೆಗೆ ಶಾಲೆಯಲ್ಲಿ ವ್ಯಾಸಂಗ ಮಾಡಿ ಉನ್ನತ ಹುದ್ದೆಯಲ್ಲಿರುವ ಹಿರಿಯ ವಿದ್ಯಾರ್ಥಿಗಳು,
ಉದ್ಯಮಿಗಳು ಒಂದುಗೂಡಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ನೆರವಾಗಬೇಕು. ಆಗ ಹಳ್ಳಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಹೆಚ್ಚಾಗಲಿದೆ ಎಂದವರು ಸಲಹೆ ನೀಡಿದರು.
ಭಾಷಾ ಪರಂಪರೆ ಉಳಿಸಿ: ಮುಖ್ಯ ಶಿಕ್ಷಕ ಚಂದ್ರಶೇಖರ ಮೂರ್ತಿ ಮಾತನಾಡಿ, ಕನ್ನಡ ಶಾಲೆಗಳಲ್ಲಿ ವ್ಯಾಸಂಗ ಮಾಡಿದ ಮಕ್ಕಳಿಂದ ಮಾತ್ರ ಮುಂದಿನ ದಶಕದಲ್ಲಿ ನಾಡಿನ ಸಂಸ್ಕೃತಿ, ಕನ್ನಡ ಭಾಷೆ ಮತ್ತು ಪರಂಪರೆ ಉಳಿಯಲು ಸಾಧ್ಯ ಎಂದರು. ಸರ್ಕಾರಿ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಗಳು ಈಗ ಎಲ್ಲ ಸೌಲಭ್ಯಗಳನ್ನೂ ಒಳಗೊಂಡಿವೆ. ಹಾಗಾಗಿ, ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೇ ಕಳುಹಿಸಬೇಕು. ಈ ಮೂಲಕ ಕನ್ನಡ ಭಾಷೆ ಉಳಿವಿಗೆ ಕೈಜೋಡಿಸಬೇಕು ಎಂದರು.
ಬಳಗದ ಕಾರ್ಯದರ್ಶಿ ಕೆಎಸ್‌ಆರ್ ಟಿಸಿ ಜನಾರ್ದನ ಮಾತನಾಡಿ, ನಮ್ಮ ಸಂಘದಿಂದ ಈಗಾಗಲೇ 66 ಶಾಲೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಮುಂಬರುವ ದಿನಗಳಲ್ಲಿ ನೂರು ಶಾಲೆಗಳಿಗೆ ಅಗತ್ಯ ಸೌಲಭ್ಯ ವಿತರಿಸುವ ಗುರಿ ಹೊಂದಲಾಗಿದೆ ಎಂದರು.
ಬಳಗದ ವತಿಯಿಂದ ಶಾಲೆಯ ಶಿಕ್ಷಕರಿಗೆ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಗ್ರಾಪಂ ಮಾಜಿ ಅಧ್ಯಕ್ಷ ಕೆ.ರಮೇಶ್, ಮಾಜಿ ಸದಸ್ಯ ನಂಜಾಪುರ ಮನುಕುಮಾರ್, ಸಿ.ಆರ್.ಪಿ.ರುದ್ರಪ್ಪ, ಬಿ.ಆರ್.ಸಿ ಆನಂದ್, ಸಂಘದ ಸದಸ್ಯರಾದ ಶ್ರೀಕಂಠ, ಮಿಮಿಕ್ರಿ ಸುಧಾಕರ, ಕವಿರಾಜ್, ಶ್ರೀನಿವಾಸ್, ಅನುಭವ್ಯ, ಸುಧಾಕರ್, ಎಸ್ ಡಿಎಂಸಿ ಅಧ್ಯಕ್ಷೆ ಮಾಲಾ, ಶಿಕ್ಷಕರಾದ ಸುಮಲತಾ, ದೈಹಿಕ ಶಿಕ್ಷಣ ಶಿಕ್ಷಕ ದೇವರಾಜ್ ಸೇರಿದಂತೆ ಮಕ್ಕಳು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net