ಕದ್ದು ಸಾಗಿಸುತ್ತಿದ್ದ ಆಟೋ ಮೇಲೆ ಆಹಾರ ಇಲಾಖೆಯ ಅಧಿಕಾರಿಗಳು ದಾಳಿ
ಪೊಲೀಸರನ್ನು ನೋಡಿದ ತಕ್ಷಣ ಆಟೋ ಚಾಲಕ ಸ್ಥಳದಿಂದ ಪರಾರಿ
ಮೈಸೂರು: ಕಾಳಸಂತೆಯಲ್ಲಿ ಮಾರಾಟ ಮಾಡಲು ಸಾಗಿಸುತ್ತಿದ್ದ ಪಡಿತರ ಅಕ್ಕಿ, ರಾಗಿಯನ್ನು ಜಪ್ತಿ ಮಾಡಲಾಗಿದೆ.
ಅನ್ನಭಾಗ್ಯ ಯೋಜನೆಯಡಿ ಬಡ ಫಲಾನುಭವಿಗಳಿಗೆ ವಿತರಣೆಯಾಗಬೇಕಿದ್ದ ಪಡಿತರವನ್ನು ಕದ್ದು ಸಾಗಿಸುತ್ತಿದ್ದ ಆಟೋ ಮೇಲೆ ಆಹಾರ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿದ್ದು, 10 ಚೀಲ ಅಕ್ಕಿ ಹಾಗೂ ಒಂದು ಚೀಲ ರಾಗಿಯನ್ನು ವಶಕ್ಕೆ ಪಡೆದಿದ್ದಾರೆ.
ನಗರದ ಎಲೆತೋಟದ ಬಳಿ ಪಡಿತರವನ್ನು ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಆಹಾರ ಇಲಾಖೆಯ ಅಧಿಕಾರಿಗಳಿಗೆ ಬಂದಿದ್ದು, ನ.30ರ ಸಂಜೆ ಕೃಷ್ಣರಾಜ ಠಾಣೆಯ ಪೊಲೀಸರ ಸಹಾಯದೊಂದಿಗೆ ದಾಳಿ ನಡೆಸಲಾಗಿದೆ.
ಈ ಸಂದರ್ಭದಲ್ಲಿ ಪ್ಯಾಸೆಂಜರ್ ಆಟೋವನ್ನು ತಡೆದು ನಿಲ್ಲಿಸಿದ್ದಾರೆ. ಪೊಲೀಸರನ್ನು ನೋಡಿದ ತಕ್ಷಣ ಆಟೋ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಅಕ್ಕಿ ಹಾಗೂ ರಾಗಿಯನ್ನು ವಶಕ್ಕೆ ಪಡೆದ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.